ಧಾರವಾಡ – “ಕನ್ನಡ ಭಾಷೆಯು ಇಂಗ್ಲೀಷಿಗೆ ಸರಿಸಮಾನವಾದ ಭಾಷೆಯಾಗಿದೆ, ಇಂಗ್ಲೆಂಡಿನಲ್ಲಿ ಇಂಗ್ಲಿಷಿನಲ್ಲಿ ಪ್ರಕಟವಾಗುವಷ್ಟೇ ಕನ್ನಡದಲ್ಲಿಯೂ ಅದ್ಭುತವಾದ ಸಾಹಿತ್ಯ ಪ್ರಕಟಗೊಳ್ಳುತ್ತಿದೆ, ಆದರೆ ಕನ್ನಡ ಸಾಹಿತ್ಯವನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ. ಬೇಂದ್ರೆಯವರು ಸಾಮರಸ್ಯದ ಕವಿ, ಇಂದು ನಮ್ಮ ದೇಶದಲ್ಲಿ ಸಾಮರಸ್ಯ ಕದಡಿದೆ. ಬೇಂದ್ರೆ ಬೆಸೆಯುವ ಕವಿಯಾಗಿದ್ದ, ಅವರಿಗೆ ದೇಶದ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿತ್ತು, ಅವರಲ್ಲಿ ದೊಡ್ಡಮಟ್ಟದ ರಾಷ್ಟ್ರೀಯತೆ ಕೂಡ ಇತ್ತು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಅಧ್ಯಯನಾಂಗದ ನಿರ್ದೇಶಕ ಪ್ರೊ.ಬಸವರಾಜ ಡೋಣೂರ ಹೇಳಿದರು.
ಅವರು ನಗರದ ಬೇಂದ್ರೆ ಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ಸಂಭ್ರಮ ೫೦ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ “ಒಬ್ಬ ಕವಿಗೆ ಅಗಾಧವಾದ ಓದು ಇರಬೇಕು, ಆಗ ಮಾತ್ರ ಅವರು ಶ್ರೇಷ್ಠ ಸಾಹಿತ್ಯವನ್ನು ಕೊಡಲು ಸಾಧ್ಯವಾಗುತ್ತದೆ” ಎಂದರು.
ಹಿರಿಯ ಕವಿ, ಕಥೆಗಾರ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಚನ್ನಪ್ಪ ಅಂಗಡಿ ಮಾತನಾಡುತ್ತ “ಯಾವುದೇ ಒಂದು ನಾಡನ್ನು ಗುರುತಿಸುವುದಾದರೆ, ಅದು ಭಾಷೆಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ಕನ್ನಡ ನೆಲದಲ್ಲಿ ಮಹಾಕಾವ್ಯ ೧೦ನೇ ಶತಮಾನದಲ್ಲಿಯೇ ಆಗಿದೆ. ಆದಿಕವಿ ಪಂಪ ಹೇಳುವಂತೆ ‘ದೇಶಿಯೊಳ್ ಪೊಗುವುದು, ಮಾರ್ಗದೊಳ್ ಪೊಕ್ಕು ತಳ್ವುದು’ ಎಂಬುದು ನಮ್ಮ ಎಲ್ಲ ಸಂಸ್ಕೃತಿಯ ಚಿಂತನೆಗಳು, ಲಲಿತ ಕಲೆಗಳು, ಸಾಹಿತ್ಯದ ಅಭಿವ್ಯಕ್ತಿ ಇದೆಲ್ಲವೂ ನೆಲದಿಂದ ಹುಟ್ಟಿ ಬಂದು, ನಮ್ಮ ಆಡುಭಾಷೆ, ಮೌಖಿಕ ಮಾತಿನ ಪರಂಪರೆಯಿಂದ ಮಾರ್ಗರೂಪಿಯಾದ ದರ್ಶನ ನೀಡುತ್ತದೆ ಎಂಬುದಕ್ಕೆ ಬಹುದೊಡ್ಡ ಉದಾಹರಣೆ ಎಂದರೆ ವರಕವಿ ಡಾ.ದ.ರಾ.ಬೇಂದ್ರೆಯವರು. ಭಾಷೆಗಿರುವಂಥ ಅಸ್ಮಿತೆ ನೆಲಮೂಲವಾದ ಭಾಷೆಯಲ್ಲಿ ಹುಟ್ಟಿ ಬಂದಾಗ, ಅದಕ್ಕೆ ಪ್ರಾಪ್ತವಾದಂತಹ ಅರ್ಥ, ಶಕ್ತಿ, ಪ್ರಾಮುಖ್ಯವಾದ ಭಾಷೆಯಾಗಿ ವಿಶ್ವವ್ಯಾಪ್ತಿಯಾಗುತ್ತದೆ” ಎಂದರು.
ವಿಶೇಷ ಕವಿಗೋಷ್ಠಿಯಲ್ಲಿ ಹುಬ್ಬಳ್ಳಿಯ ರಾಮಚಂದ್ರ ಪತ್ತಾರ ಶಾಲಿನಿ ರುದ್ರಮುನಿ, ವೇದಾರಾಣಿ ದಾಸನೂರ, ಕುಂದಗೋಳದ ಕಿರಣ ಅರಮನಿ, ಕಲಘಟಗಿಯ ಕಲ್ಲನಗೌಡ ಪಾಟೀಲ, ಕೌಜಗೇರಿಯ ಸಂಗಮೇಶ ಬೆಳೆಲಿ, ಧಾರವಾಡದ ಎ.ಎ.ದರ್ಗಾ, ಸವದತ್ತಿಯ ವಾಯ್.ಬಿ.ಕಡಕೋಳ, ಬೆಳಗಾವಿಯ ಸುಖದೇವಾನಂದ ಚೌವತ್ರಿಮಠ ನಾಡು-ನುಡಿಯ ಮೇಲೆ ರಚಿತ ತಮ್ಮ ಕವನ ವಾಚನ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ದ.ರಾ.ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಮಾತನಾಡುತ್ತ “ಕರ್ನಾಟಕ ಸಂಭ್ರಮ ೫೦ರ ನಿಮಿತ್ತ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಧ್ಯೇಯದೊಂದಿಗೆ ಈ ವಿಶೇಷ ಕವಿಗೋಷ್ಠಿ, ಭಾವಗೀತ ಗಾಯನ ಕಾರ್ಯಕ್ರಮದ ಅಗತ್ಯತೆ ಇಂದಿನ ಉದಯೋನ್ಮುಖ ಕವಿಗಳಿಗೆ, ಸಂಗೀತಗಾರರಿಗೆ ಅಗತ್ಯವಾಗಿದೆ. ಕನ್ನಡ ಭಾಷೆ ಇಡೀ ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಲಿಪಿಯನ್ನು ಹೊಂದಿರುವ ಭಾಷೆಯೆನಿಸಿಕೊಂಡಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ” ಎಂದರು.
ನಂತರ ಧಾರವಾಡದ ಜಯಂತಿ ದೊಡ್ಡಮನಿ ಮತ್ತು ವೃಂದದವರು ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಹಿರಿಯ ಚಲನಚಿತ್ರ ಕಲಾವಿದ ಅನಂತ ದೇಶಪಾಂಡೆಯವರ ಬೇಂದ್ರೆ ದರ್ಶನ ಕಾರ್ಯಕ್ರಮವು ಕೂಡ ಇದೇ ಸಂದರ್ಭದಲ್ಲಿ ನೋಡುಗರ ಕಣ್ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಡಾ.ಎಮ್.ಬಿ.ಹೂಗಾರ, ಡಾ.ಸಿ.ಕೆ.ನಾವಲಗಿ, ಡಾ.ಧನವಂತ ಹಾಜವಗೋಳ, ವೀರಣ್ಣ ಪತ್ತಾರ, ಡಾ.ಎ.ಎಲ್.ದೇಸಾಯಿ, ಡಾ.ಬಸವರಾಜ ಕಲೆಗಾರ, ವಿದುಷಿ ಸುಜಾತಾ ಗುರವ, ಶೋಭಾ ದೇಶಪಾಂಡೆ ಭಾಗವಹಿಸಿದ್ದರು.
ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಶಿಲ್ಪಾ ನವಲಿಮಠ ಪ್ರಾರ್ಥಿಸಿದರು. ಮೇಘಾ ಪಾಟೀಲ ನಿರೂಪಿಸಿದರು. ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು