ಬೆಂಗಳೂರು ವಿಜ್ಞಾನ ವೇದಿಕೆಯಿಂದ ವಿಜ್ಞಾನ ಕುರಿತು ವಿಶೇಷ ಉಪನ್ಯಾಸ ಸರಣಿ ಆರಂಭ
ಬೆಂಗಳೂರು – ಪಟಾಕಿ, ಬಾಂಬ್, ಸಿಲೆಂಡರ್ ಸ್ಫೋಟ, ಭೂಕಂಪ ಜ್ವಾಲಾಮುಖಿಯಂತಹ ಸ್ಪೋಟದಿಂದ ಹೊರ ಹೊಮ್ಮುವ ಶಬ್ಧದಿಂದ ಘಾತಕಕಾರಿ ತರಂಗಗಳು ಹೊರ ಬರಲಿದ್ದು, ಇವು ಪರಿಸರದ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರಲಿವೆ. ಇಂತಹ ಘಾತಕಕಾರಿ ತರಂಗಗಳನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬೆಳೆಸಿಕೊಳ್ಳಲು ಭಾರತೀಯ ವಿಜ್ಞಾನ ಮಂದಿರದಲ್ಲಿ ವ್ಯಾಪಕ ಸಂಶೋಧನೆ ನಡೆಯುತ್ತಿದೆ ಎಂದು ಖ್ಯಾತ ವಿಜ್ಞಾನಿ, ಭಾರತೀಯ ವಿಜ್ಞಾನ ಮಂದಿರದ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಜಗದೀಶ್ ಗೋಪಾಲನ್ ತಿಳಿಸಿದರು.
ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಸಭಾಂಗಣದಲ್ಲಿ ಬೆಂಗಳೂರಿನ ವಿಜ್ಞಾನ ವೇದಿಕೆಯಿಂದ ವಿಜ್ಞಾನ ಕುರಿತು ವಿಶೇಷ ಉಪನ್ಯಾಸ ಸರಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಘಾತ ತರಂಗ ಪ್ರಸರಣ ಕ್ಷೇತ್ರದಲ್ಲಿ ಪರಿಣಿತಿ ಪಡೆದಿರುವ ಅವರು, ಇಂತಹ ಘಾತಕಕಾರಿ ತರಂಗಗಳಿಂದ ರಕ್ತನಾಳದಲ್ಲಿ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಸೇನೆಯಿಂದ ನಿವೃತ್ತರಾದವರು. ಯುದ್ಧ ಭೂಮಿಯಿಂದ ಹೊರಬರುವ ಯೋಧರಲ್ಲಿ ರಕ್ತ ನಾಳಗಳು ಹಾನಿಗೊಳಗಾಗಿರುತ್ತವೆ. ಇಂತಹ ರಕ್ತನಾಳಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದೂ ಸೇರಿದಂತೆ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಲು ಭಾರತೀಯ ವಿಜ್ಞಾನ ಮಂದಿರದಲ್ಲಿ (IISc) “ಲ್ಯಾಬೊರೇಟರೀಸ್ ಆನ್ ಹೈಪರ್ ಸಾನಿಕ್ ಅಂಡ್ ಶಾರ್ಟ್ ವೇವ್” ಪ್ರಯೋಗಾಲಯದಲ್ಲಿ ಭಿನ್ನ, ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಯೋಗಾಲಯ ಎಂದು ಹೇಳಿದರು.
ಇಂತಹ ಘಾತಕಕಾರಿ ತರಂಗಗಳ ಕುರಿತು ಹೆಚ್ಚಿನ ಜನರಿಗೆ ಅರಿವಿಲ್ಲ. ಮಕ್ಕಳ ಮುಂದೆ ಪಟಾಕಿ ಹೊಡೆದರೆ ಆಗ ಮಕ್ಕಳ ಮೆದುಳು ಶೇ 30 ರಷ್ಟು ಕೆಲಸ ಮಾಡುವುದು ಕಡಿಮೆ ಮಾಡುತ್ತದೆ. ಶೇ ಒಂದರಷ್ಟು ಶ್ವಾಸಕೋಶ ಸಮಸ್ಯೆ ಹೆಚ್ಚಾಗುತ್ತದೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಇದೀಗ ಒಳ್ಳೊಳ್ಳೆ ಅಪ್ಲಿಕೇಶನ್ ಗಳು ಬರುತ್ತಿವೆ. ಘಾತುಕಕಾರಿ ತರಂಗಗಳಿಂದ ಹುಣ್ಣುಗಳು ವಾಸಿಯಾಗುವ ಜೊತೆಗೆ ಮೂತ್ರ ಪಿಂಡದ ಕಲ್ಲುಗಳನ್ನು ಹೊರತೆಗೆಯಲು ಸಹಕಾರಿಯಾಗಲಿದೆ. ಘಾತಕಕಾರಿ ತರಂಗಗಳು ಒಂದು ರೀತಿಯಲ್ಲಿ ಚಾಕು ಇದ್ದ ಹಾಗೆ, ಇದನ್ನು ಬಳಸಿಕೊಂಡು ಯಾರನ್ನು ಬೇಕಾದರೂ ಕೊಲ್ಲಬಹುದು. ಅದೇ ರೀತಿಯಲ್ಲಿ ಇಂತಹ ತರಂಗಗಳನ್ನು ಉತ್ತಮ ಚಿಕಿತ್ಸೆಗೂ ಸಹ ಬಳಸಿಕೊಳ್ಳಬಹುದಾಗಿದೆ. ಮಧುಮೇಹ ಮತ್ತಿತರೆ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಲಿದೆ ಎಂದರು.
ವಿಜ್ಞಾನ ಯಾರಿಗೂ ಅರ್ಥವಾಗದಂತಹ ಕ್ಲಿಷ್ಟಕರ ವಿಷಯವಲ್ಲ. ಜನರಿಗೆ ತಂತ್ರಜ್ಞಾನದ ಬಗ್ಗೆ ಅರಿವಿದೆ. ಆದರೆ ವಿಜ್ಞಾನದ ಬಗ್ಗೆ ತಿಳಿವಳಿಕೆ ಇಲ್ಲ. ಮೂಲ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ ಅವರು ಸ್ಥಾಪಿಸಿದ ವಿಜ್ಞಾನ ವೇದಿಕೆಯಿಂದ ವಿಜ್ಞಾನ ಜನಪ್ರಿಯಗೊಳಿಸಲು ಇಂದಿನಿಂದ ಪ್ರಾರಂಭವಾಗಿರುವ ಸರಣಿ ಉಪನ್ಯಾಸದಲ್ಲಿ ವಿಜ್ಞಾನ ವಲಯದ ಪರಿಣಿತರು ವಿವಿಧ ವಿಷಯಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.
ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ವೈ.ಜಿ. ಮಧುಸೂಧನ್, ಕಾರ್ಯದರ್ಶಿಗಳಾದ ವೆಂಟಕಶಿವಾ ರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಎನ್.ಸಿ.ಬಿ ಅಧ್ಯಕ್ಷ ಸುಧಾಕರ್ ಎಸ್ತೂರಿ ಮತ್ತಿತರರು ಉಪಸ್ಥಿತರಿದ್ದರು.