ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಇಂದು ಲಿಂ.ಚೆನ್ನಮ್ಮ ಚನ್ನಪ್ಪ ವಮ್ಮಾ ಇವರ ಸ್ಮರಣಾರ್ಥ ಡಾ.ಅಮಿತ್ ಆರ್.ವಾರದ ಹಾಗೂ ಲಿಂ.ಲಕ್ಕಮ್ಮ ಚಂದ್ರಾಮಪ್ಪ ಸಿಂದಗಿ ಅವರ ಸ್ಮರಣಾರ್ಥ ಗುತ್ತಿಗೆದಾರ ಮಹಾದೇವಪ್ಪ ಚಂದ್ರಾಮಪ್ಪ ಸಿಂದಗಿ ಅವರು ನೀಡಿದ ದತ್ತಿ ದಾನದ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ನಿಕಟಪೂರ್ವ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚನ್ನಪ್ಪ ಕತ್ತಿ ಅವರು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದಾನಯ್ಯ ಮಠಪತಿ ಅವರು ಶರಣೆ ಶ್ರೀ ಗುಡ್ಡಾಪುರ ದಾನಮ್ಮದೇವಿ ಕುರಿತು ಉಪನ್ಯಾಸ ನೀಡಿ, ಲಿಂಗಮ್ಮಳು ಬಾಲ್ಯದಲ್ಲಿಯೇ ದೈವಿ ಸ್ವರೂಪಿಯಾಗಿ, ತನ್ನ ಗುರುಗಳಿಂದ ಪಡೆದ ದೇವ ಸಂಸ್ಕಾರದಿಂದ ಅಸಮಾನ್ಯ ಸಾಮಥ್ರ್ಯವನ್ನು ಹೊಂದಿ, ಧ್ಯಾನ, ಪೂಜೆಗಳಲ್ಲಿ ತಲ್ಲೀನಳಾಗಿ, ಅನೇಕ ಪವಾಡಗಳನ್ನು ತೋರಿ, ಲಿಂಗಬೇಧ, ಸೀ ಸಮಾನತೆಗಾಗಿ ಹೋರಾಟ ನಡೆಸಿ, ತನ್ನ ಜೋಳಿಗೆಯಲ್ಲಿದ್ದ ಎಲ್ಲವನ್ನೂ ಪರರ ಸುಖಕ್ಕಾಗಿ ದಾನವಾಗಿ ನೀಡುತ್ತ, ಜನನದ ಮೂಲ ಒಂದೇ ಆದರು ಜೀವ ಭಿನ್ನ ಭಾವದ ಕುರಿತು ಉತ್ತರ ಹುಡುಕುತ್ತ ಕಲ್ಯಾಣಕ್ಕೆ ಹೋಗಿ, ಶರಣರೊಡಗೂಡಿ ಶರಣೆ ದಾನಮ್ಮ ಎಂಬ ಪ್ರಶಂಸೆಯೊಂದಿಗೆ ಮರಳಿ ನಾಡಿನ ಶರಣರ ವಚನಗಳನ್ನು ಪಸರಿಸುತ್ತ ಇಂದಿಗೂ ಜೀವಂತ ದೇವರಾಗಿ, ಅನ್ನದಾನದ ಶ್ರೇಷ್ಠತೆಯನ್ನು ಸಮಾಜಕ್ಕೆ ಅರುಹಿದ್ದಾಳೆ ಎಂದರು.
ಆರ್.ಡಿ.ಪಾಟೀಲ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪಿ.ವ್ಹಿ.ಮಹಲಿನಮಠ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು 1986ರಲ್ಲಿ ಸ್ಥಾಪನೆಗೊಂಡು, ಶರಣರ ವೈಚಾರಿಕತೆ, ಸಮಸಮಾಜಗಳ ನಿರ್ಮಾಣಕ್ಕಾಗಿ ನಡೆಸಿದ ಹೋರಾಟ ಮತ್ತು ಅವರ ವಚನಗಳಲ್ಲಿನ ಚಿಂತನೆಗಳಿಗೆ ಬೆಳಕು ಚೆಲ್ಲುವ ಮಹತ್ತರ ಕಾರ್ಯವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ.
ಮಹಿಳೆ, ಮಕ್ಕಳು, ಯುವಕರಲ್ಲಿ ಶರಣ ಸಾಹಿತ್ಯದ ಜ್ಞಾನವನ್ನು ಮನೆಯಲ್ಲಿ ಮಹಾಮನೆ ಎಂಬ ವಚನ ದೀವಿಗೆಯನ್ನು ಮನೆ-ಮನೆ ಜಗುಲಿಗೆ ಕೊಂಡೊಯ್ದು ಶರಣರ ಸಂದೇಶಗಳನ್ನು ಬಿತ್ತರಿಸುತ್ತಿದೆ. ಇದರ ವ್ಯಾಪ್ತಿ ಅನ್ಯ ರಾಜ್ಯಗಳು ಸೇರಿದಂತೆ ವಿಶ್ವದೆಲ್ಲೆಡೆ ಪ್ರಚಲಿತದಲ್ಲಿರುವುದು ದೇಶವೇ ಹೆಮ್ಮೆ ಪಡುವ ಸಂಗತಿಯಾಗಿದ್ದು, ಶರಣರ ಜೀವನ ಮತ್ತು ಅವರು ನೀಡಿರುವ ವಚನಗಳು ಇಂದು ಡಿಜಿಟಲೀಕರಣಗೊಂಡಿದ್ದು, ಅವುಗಳನ್ನು ಕೇಳಿ, ತಿಳಿದು ಯುವಕರು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಶರಣಬಸವ ಜೋಗೂರ, ಮಹಿಳಾ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಪೂಜಾರಿ ಮಾತನಾಡಿದರು.
ವಿದ್ಯಾರ್ಥಿನಿ ಬೌರಮ್ಮ ಸಾರಂಗಮಠ ನಿರೂಪಿಸಿದರು. ಯುವ ಘಟಕ ಅಧ್ಯಕ್ಷ ಪ್ರಸನ್ನ ಜೋಗೂರ ಸ್ವಾಗತಿಸಿದರು. ಕದಳಿ ವೇದಿಕೆ ಉಪಾಧ್ಯಕ್ಷೆ ಡಾ.ಸೀಮಾ ವಾರದ ವಂದಿಸಿದರು. ಸಾಹಿತಿ ಶಿವಕುಮಾರ ಶಿವಶಿಂಪಿಗೇರ, ಸಿದ್ದಲಿಂಗ ಕಿಣಗಿ, ಯು.ಸಿ.ಪೂಜಾರಿ, ಶಕುಂತಲಾ ಹಿರೇಮಠ, ಪ್ರಾಚಾರ್ಯೆ ಜಗದೇವಿ ನಂದಿಕೋಲ, ಜಗದೇವಿ ಅಂಬಲಗಿ, ಗಿರೀಶ ಕುಲಕರ್ಣಿ, ಸಾಹೇಬಗೌಡ ದುದ್ದಗಿ ಸೇರಿದಂತೆ ವಿದ್ಯಾರ್ಥಿನಿಯರಿದ್ದರು.