ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಡಾ. ಭೇರ್ಯ ರಾಮಕುಮಾರ್ ಅವರ ದೂರಿನ ಫಲವಾಗಿ ಮೈಸೂರು ನಗರದ ವಿಜಯನಗರ ಬಡಾವಣೆಯಲ್ಲಿರುವ ಎನ್. ಪಿ. ಎಸ್ (ನ್ಯಾಷನಲ್ ಪಬ್ಲಿಕ್ ಸ್ಕೂಲ್ ) ನ ನಾಮಫಲಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ದೊರಕಿದೆ.
ಈ ಹಿಂದೆ ಎನ್. ಪಿ. ಎಸ್. ಅಂತಾರಾಷ್ಟ್ರೀಯ ಶಾಲೆಯ ನಾಮಫಲಕದಲ್ಲಿ ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಬಳಸಲಾಗಿತ್ತು.
ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾಗಿರುವ ಮೈಸೂರಿನಲ್ಲಿ ಕನ್ನಡಕ್ಕೆ ಉಂಟಾಗಿರುವ ಅನ್ಯಾಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಡಿಸೆಂಬರ್ 8 ರಂದು ದೂರು ನೀಡಿದ್ದರು. ಎನ್. ಪಿ. ಎಸ್. ಅಂತಾರಾಷ್ಟ್ರೀಯ ಶಾಲೆಯ ನಾಮಫಲಕದಲ್ಲಿ ಕನ್ನಡ ಭಾಷೆ ಬಳಸದೆ ನಿರ್ಲಕ್ಷಿಸಲಾಗಿದೆ. ಮೈಸೂರಿನ ನೆಲ, ಜಲ, ಮಕ್ಕಳನ್ನು ಬಳಸುತ್ತಿರುವ ಈ ಸಂಸ್ಥೆ ಕನ್ನಡ ಭಾಷೆ ಬಗ್ಗೆ ತೋರಿಸಿರುವ ನಿರ್ಲಕ್ಷದ ಬಗ್ಗೆ ಗಮನ ಹರಿಸಬೇಕು. ಶಾಲೆಯ ನಾಮಫಲಕದಲ್ಲಿ ಕೂಡಲೇ ಕನ್ನಡ ಬಳಸುವಂತೆ ಶಿಸ್ತಿನ ಆದೇಶ ನೀಡಬೇಕೆಂದು ಕೋರಿದ್ದರು.
ಈ ದೂರನ್ನು ಪರಿಶೀಲನೆ ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಅವರು ಡಿಸೆಂಬರ್ 13 ರಂದು ಮೈಸೂರಿನ ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ನಾಮಫಲಕದಲ್ಲಿ ಕನ್ನಡ ಭಾಷೆ ಯನ್ನು ಪ್ರಧಾನವಾಗಿ ಕಡ್ಡಾಯವಾಗಿ ಬಳಸುವಂತೆ ಎನ್. ಪಿ. ಎಸ್. ಅಂತಾರಾಷ್ಟ್ರೀಯ ಶಾಲೆಗೆ ಸೂಚಿಸಬೇಕೆಂದು ಸೂಚಿಸಿದ್ದರು.
ಇದೀಗ ಸದರಿ ಶಾಲೆಯ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಲಾಗಿದೆ. ತಮ್ಮ ದೂರಿಗೆ ಸ್ಪಂದಿಸಿ ಕನ್ನಡ ಭಾಷೆಗೆ ಉಂಟಾಗಿದ್ದ ಅನ್ಯಾಯ ವನ್ನು ಹೋಗಲಾಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.