ಸಿಂದಗಿ– ಪರೀಕ್ಷೆಗಳು ಭಯವಲ್ಲ ಅವುಗಳು ನಮ್ಮ ಜ್ಞಾನ, ಸೃಜನಶೀಲತೆಯನ್ನು ಅಳೆಯುವ ಮಾಪನಗಳು ಅಷ್ಟೇ. ಪರೀಕ್ಷೆಗಳನ್ನು ಭಯದಿಂದ ಕಾಣದೆ ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಹುಮನಾಬಾದಿನ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಸಿ.ಎಸ್.ಆನಂದ ಹೇಳಿದರು.
ಅವರು ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಆಂಗ್ಲಭಾಷಾ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿಯನ್ನು ಹೊತ್ತುಕೊಂಡಿರಬೇಕು. ಯುವಶಕ್ತಿ ಈ ದೇಶದ ಶಕ್ತಿ ಈ ದೇಶದ ಅವಿಭಾಜ್ಯ ಅಂಗ. ನಮ್ಮನ್ನು ಹೆತ್ತವರು ನಮ್ಮ ಮೇಲೆ ಅಗಾಧ ಕನಸುಗಳನ್ನು ಇಟ್ಟುಕೊಂಡು ಬದುಕುತ್ತಿದ್ದಾರೆ ಅವರ ಆಸೆಗೆ ನಾವು ನಿರಾಸೆ ಮಾಡದೆ ನಿರಂತರ ಪ್ರಯತ್ನದ ಅಧ್ಯಯನಶೀಲತೆ ನಮ್ಮ ರಕ್ತದಲ್ಲಿ ಮೂಡಬೇಕು ಆಗ ನಾವು ಸಾಧಕರ ಸಾಲಿಗೆ ಸೇರುತ್ತೇವೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಅವರು ಮಾತನಾಡಿ, ಸಾಧನೆ ಯಾರ ಸೊತ್ತು ಅಲ್ಲ. ಅದನ್ನು ಪಡೆದುಕೊಳ್ಳುವ ಛಲ ನಮ್ಮಲ್ಲಿರಬೇಕು. ನಾವು ಎಷ್ಟು ಓದುತ್ತೇವೆ ಎನ್ನುವದು ಮುಖ್ಯವಲ್ಲ ಓದಿದನ್ನು ಎಷ್ಟು ಅರ್ಥೈಸಿಕೊಂಡಿದ್ದೇವೆ ಎಂಬ ಅರಿವಿರಬೇಕು. ಹೆಚ್ಚು ಅಂಕಗಳಿಕೆಗೆ ಬೇಕಾಗಿರುವ ಚರ್ಚೆಗಳು ನಮ್ಮಿಂದಾಗಬೇಕು ಎಂದರು.
ಈ ವೇಳೆ ಆಂಗ್ಲಭಾಷಾ ಉಪನ್ಯಾಸಕ ಎಸ್.ಎ.ಪಾಟೀಲ, ಎ.ಬಿ.ಪಾಟೀಲ ವೇದಿಕೆ ಮೇಲಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಎಸ್.ಬಿರಾದಾರ, ಆರ್.ಬಿ.ಹೊಸಮನಿ, ಎಸ್.ಪಿ.ಬಿರಾದಾರ, ಎಮ್.ಎನ್.ಅಜ್ಜಪ್ಪ, ಮುಕ್ತಾಯಕ್ಕ ಕತ್ತಿ, ಸಿದ್ದಲಿಂಗ ಕಿಣಗಿ, ಡಾ.ಶಾಂತುಲಾಲ ಚವ್ಹಾಣ, ಎಸ್.ಎ.ಬಸರಕೋಡ, ಆರ್.ವಾಯ್.ಪರೀಟ, ಗಂಗಾರಾಮ ಪವಾರ, ಸಚಿನ ಕನ್ನಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.