6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ಗೋಕಾಕ: 2004 ರಿಂದ ಅರಭಾವಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ಶಿಕ್ಷಣದ ಅಮೂಲಾಗ್ರ ಬದಲಾವಣೆಗಾಗಿ ಶಿಕ್ಷಣ ರಂಗಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದೇನೆ. ಇದರಿಂದಲೇ ಮೂಡಲಗಿ ವಲಯದ ವಿದ್ಯಾರ್ಥಿಗಳು ಪ್ರತಿ ವರ್ಷವೂ ಅತ್ತುತ್ಯಮ ಸಾಧನೆ ಮಾಡುವುದರ ಮೂಲಕ ಮೂಡಲಗಿ ಶೈಕ್ಷಣಿಕ ವಲಯದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದಾರೆಂದು ಅರಭಾವಿ ಶಾಸಕ, ಕೆಎಮ್‍ಎಫ್ ನಿದೇಶಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ದಂಡಾಪೂರ ಗ್ರಾಮದಲ್ಲಿ ಶನಿವಾರ ಸಂಜೆ ಒಟ್ಟು 6.11 ಕೋಟಿ ರೂಗಳ ವೆಚ್ಚದ ದಂಡಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣ ಮತ್ತು 31 ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಉನ್ನತಿ ಮತ್ತು ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ತುಂಬ ಮಹತ್ವದ್ದಾಗಿದೆ ಎಂದು ಹೇಳಿದರು.

ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಖಾಸಗಿ ವಲಯದ ಪೈಪೋಟಿ ಮಧ್ಯೆಯೂ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮೂಲಕ ವಿದ್ಯಾರ್ಥಿಗಳು ಪೈಪೋಟಿ ಮಾಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿಯೂ ಸಹ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲು ಪ್ರೇರಣೆಗೊಂಡು ಜಿಲ್ಲೆ, ರಾಜ್ಯಮಟ್ಟದಲ್ಲಿಯೂ ಸಹ ಮೂಡಲಗಿ ವಲಯ ಗುರುತಿಸಿಕೊಳ್ಳಲು ಕಾರಣವಾಗಿದ್ದಾರೆ. ಬಿಇಓ ಅಜೀತ ಮನ್ನಿಕೇರಿ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ಅವರು ತಿಳಿಸಿದರು.

ದಂಡಾಪೂರ ಗ್ರಾಮದ ಅಭಿವೃದ್ದಿಗೆ ಸರ್ಕಾರದ ಯೋಜನೆಗಳನ್ನು ವಿನಿಯೋಗ ಮಾಡಲಾಗಿದೆ. ದಂಡಾಪೂರ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಪ್ರೌಢಶಾಲೆಯನ್ನು ತೆರೆಯಲಾಗಿದೆ. ದಂಡಾಪೂರ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತಿಯನ್ನು ರಚಿಸಲಾಗಿದೆ. ರಸ್ತೆಯನ್ನು ಅಭಿವೃದ್ದಿಪಡಿಸಲಾಗಿದೆ. ಜನತೆಗೆ ಮೂಲಭೂತ ಸಮಸ್ಯೆಗಳನ್ನು ನೀಗಿಸಲಾಗಿದೆ. ಇನ್ನೊಂದು ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟಿದ್ದು, ಪಾಮಲದಿನ್ನಿ ಹಳ್ಳದಿಂದ ದಂಡಾಪೂರವರೆಗಿನ ಜಾಕ್‍ವೆಲ್ ನಿರ್ಮಾಣ ಮಾಡಿಕೊಡಲಾಗುವುದು. ಈಗಿರುವ ಕಾಂಗ್ರೇಸ್ ಸರ್ಕಾರವು ಕೇವಲ ಗ್ಯಾರಂಟಿ ಯೋಜನೆಗಳಿಗಾಗಿಯೇ ಅನುದಾನವನ್ನು ಮೀಸಲಿಟ್ಟಿರುವುದರಿಂದ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲವೆಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಆರ್‍ಎಮ್‍ಎಸ್‍ಎ ಯೋಜನೆಯಡಿ 1.55 ಕೋಟಿ ರೂಗಳ ವೆಚ್ಚದ ದಂಡಾಪೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ 10 ಶಾಲಾ ಕೊಠಡಿಗಳ ಬಹುಮಹಡಿ ಕಟ್ಟಡಗಳ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

4.55 ಕೋಟಿ ರೂಗಳ ವೆಚ್ಚದ ಮೂಡಲಗಿ ವಲಯದ ವಿವಿಧ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.ಎಸ್‍ಎಸ್‍ಕೆ ಯೋಜನೆಯಡಿ 117 ವಿಶೇಷ ಚೇತನ ವಿದ್ಯಾರ್ಥಿಗಳಿಗೆ 7.47 ಲಕ್ಷ ರೂಗಳ ವೆಚ್ಚದಲ್ಲಿ ಸಾಧನಾ ಸಾಮಗ್ರಿಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಪ್ರಭಾ ಶುಗರ್ಸ್ ನಿರ್ದೇಶಕರಾದ ಲಕ್ಷ್ಮಣ ಗಣಪ್ಪಗೋಳ, ಸಿದ್ದಲಿಂಗ ಕಂಬಳಿ, ಮಾಳಪ್ಪ ಜಾಗನೂರ, ಮಾಜಿ ಗ್ರಾ.ಪಂ ಅಧ್ಯಕ್ಷ ಮಹಾದೇವ ತುಕ್ಕಾನಟ್ಟಿ, ರಾಮಕೃಷ್ಣ ಹೊರಟ್ಟಿ, ಜಿ.ಪಂ ಮಾಜಿ ಸದಸ್ಯ ಆರ್.ವಾಯ್.ಸಣ್ಣಕ್ಕಿ, ಟಿಎಪಿಸಿಎಮ್‍ಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಎಪಿಎಮ್‍ಸಿ ಮಾಜಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಘಯೋನಿಬಸ ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ನಿರ್ದೇಶಕ ಬಸವರಾಜ ಪಂಡ್ರೋಳ್ಳಿ, ಲಕ್ಷ್ಮಣ ಮುಸಗುಪ್ಪಿ, ಮಹಾದೇವ ತಾಂಬಡಿ, ಸಿದ್ದಪ್ಪ ಢವಳೇಶ್ವರ, ರಾಮಪ್ಪ ಸಣ್ಣಬಿಳೆಪ್ಪಗೋಳ, ಲಕ್ಷ್ಮಣ ಸಿಮಕ್ಕನವರ, ಸಿದ್ದಪ್ಪ ಖೋತ, ರಾಜು ಮಲಕನ್ನವರ, ರಾಮಪ್ಪ ಸತ್ತೆಪ್ಪಗೋಳ, ಪುಂಡಲೀಕ ದೊಡ್ಡಬಿಳೆಪ್ಪಗೋಳ, ಗೋಕಾಕ ತಾ.ಪಂ ಇಓ ಉದಯಕುಮಾರ ಕಾಂಬಳೆ, ರಾಜಾಪೂರ ಸಿಆರ್‍ಪಿ ಪೌಲ್ ಕಳ್ಳಿಮನಿ, ದಂಡಾಪೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಮ್.ಕವಣಿ, ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ಟಿ.ಎನ್.ದೇಸಾಯಿ ಸೇರಿದಂತೆ ಮೂಡಲಗಿ ವಲಯದ ಎಸ್‍ಡಿಎಮ್‍ಸಿ ಅಧ್ಯಕ್ಷರು, ಮುಖ್ಯೋಪಾಧ್ಯಯರು ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾರ್ಚ-25 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಾಜರಾಗುವ 7957 ವಿದ್ಯಾರ್ಥಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿರುವ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿತರಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group