ಬದುಕುವ ಕಲೆ ಕಲಿಯೋಣ

Must Read

ತೈಮೂರಲಂಗ ಎಂಬ ರಾಜ ನೈರುತ್ಯ ಏಶ್ಯಾದಲ್ಲಿ ಭಾರೀ ಸೋಲನ್ನು ಕಂಡನು. ಸೋಲಿನಿಂದ ದಿಕ್ಕು ಕಾಣದಂತಾಗಿದ್ದ ರಾಜ ಒಂದು ನಿರ್ಜನವಾದ ಪರಿತ್ಯಕ್ತ ಮಣ್ಣಿನ ಗುಡಿಸಲಿನಲ್ಲಿ ಹುದುಗಿಕೊಂಡನು. ಅಂಗಾತ ಮಲಗಿದ್ದ. ಅವನಿಗೆ, ಗೋಡೆ ಏರುತ್ತಿದ್ದ ಇರುವೆ ಕಾಣಿಸಿತು. ಅದು ಕಾಳಿನ ಧಾನ್ಯವೊಂದನ್ನು ಮೇಲಕ್ಕೊಯ್ಯಲು ಪ್ರಯತ್ನಿಸುತ್ತಿತ್ತು. ಆದರೆ ಅದರ ಪ್ರಯತ್ನ ಮೇಲಿಂದ ಮೇಲೆ ವ್ಯರ್ಥವಾಗುತ್ತಲೇ ಇತ್ತು. ಇರುವೆಗಿಂತಲೂ ಅದು ಮೇಲೆಕ್ಕೊಯ್ಯುವ ಕಾಳು ದೊಡ್ಡದಾಗಿತ್ತು. ಗೋಡೆ ಕಡಿದಾಗಿತ್ತು. ಇದನ್ನು ಕಂಡ ರಾಜನಿಗೆ ಅಚ್ಚರಿಯೆನಿಸಿತು. ಅದನ್ನೇ ಕುತೂಹಲದಿಂದ ದಿಟ್ಟಿಸುತ್ತ ಅದೆಷ್ಟು ಸಲ ವಿಫಲಗೊಂಡಿತು ಎಂದು ಎಣಿಸತೊಡಗಿದ. ಸುಮಾರು 69 ಸಲ ಕೆಳಗೆ ಬಿದ್ದರೂ ಪ್ರಯತ್ನ ಬಿಡದ ಪುಟ್ಟ ಇರುವೆ 70 ನೇ ಸಲ ತನಗಿಂತ ದೊಡ್ಡದಾದ ಧಾನ್ಯವನ್ನು  ಗೋಡೆಯ ಮೇಲೆ ಹೊತ್ತೊಯ್ಯುವಲ್ಲಿ ಯಶಸ್ವಿಯಾಯಿತು.

ಇರುವೆಯ ಚಿಗುಟುಗಾರಿಕೆ,ಛಲ, ಅವಿರತ ಪ್ರಯತ್ನ, ಕಂಡು ರಾಜ ಬೆರಗಾದನು.  ಪುಟ್ಟ ಇರುವೆಯಿಂದ ಸ್ಪೂರ್ತಿ ಪಡೆದ ರಾಜ ಹೊಸ ಚೈತನ್ಯವನ್ನು ತುಂಬಿಕೊಂಡ. ಇರುವೆಯಂತೆ ನಾನೂ ಗೆಲ್ಲಬಲ್ಲೆ ಎಂದು ನಿಶ್ಚಯಿಸಿ ತನ್ನ ಸೈನ್ಯವನ್ನು ಕಲೆ ಹಾಕಿಕೊಂಡು ವೈರಿ ಪಡೆಯ ಮೇಲೆ ವಿಜಯ ಸಾಧಿಸಿದ. ಸಣ್ಣ ಇರುವೆಯಿಂದ  ರಾಜನು ಕಲಿತ ದೊಡ್ಡ ಪಾಠವಿದು.

ನಮ್ಮ ಸುತ್ತಲೂ ನೋಡಿದರೆ ನಮಗೆ ಅನೇಕ ವಿಷಯಗಳು ಕಲಿಯಲು ಸಿಗುತ್ತವೆ. ಇದನ್ನು ಕಂಡ ಸರ್ವಜ್ಞ,’ಸರ್ವಜ್ಞನೇನು ಗರ್ವದಿಂದಾವನೇ? ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ’ ಎಂದು ಹೇಳಿದ್ದಾನೆ. ಹಣ ಮತ್ತು ಪ್ರಭಾವ ಇದ್ದರೆ ಏನೆಲ್ಲವನ್ನೂ ಪಡೆದುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದೇವೆ. ಸದಾ ಮತ್ತೊಬ್ಬರ ತಪ್ಪುಗಳನ್ನು ತಿದ್ದುವುದರಲ್ಲಿಯೇ ನಿರತರಾಗಿದ್ದೇವೆ. ಒಳ್ಳೆಯದನ್ನು ಕಲಿಯಬೇಕು ಎನ್ನುವವರಿಗೆ ಇಡೀ ಪ್ರಕೃತಿಯೇ ಒಂದು ಪಾಠ ಶಾಲೆ. ಬೆಳಗುವ ಸೂರ್ಯ ಮಾತನಾಡುವುದಿಲ್ಲ. ಬೆಳಕು ಅವನ ಪರಿಚಯ ನೀಡುತ್ತದೆ. ‘ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು’ ಎಂಬ ವಚನದಲ್ಲಿ ಬಸವಣ್ಣನವರು ಮಾನವ ಕಾಗೆ ಕೋಳಿಗಳಿಂದ ಸಹಕಾರ ತತ್ವವನ್ನು ಕಲಿಯಬೇಕೆಂದು ಸಾರಿ ಹೇಳಿದ್ದಾರೆ. ವರಕವಿ ಬೇಂದ್ರೆ ಹೇಳಿರುವಂತೆ ‘ಜಾಣನಾದವನು ಕೋಣನಿಂದಲೂ ಕಲಿಯಬಲ್ಲ.’ ಮಾನವನಲ್ಲಿ ಅಪರಮಿತ ಶ್ರೇಷ್ಠತೆ ಅಡಗಿದೆ. ಪಶು ಪಕ್ಷಿ ಸಹಜೀವಿಗಳಲ್ಲಿ ಒಳ್ಳೆಯತನವನ್ನು ಗುರುತಿಸಲಾಗದಷ್ಟು ನಿಕೃಷ್ಟತೆ ಮನುಷ್ಯನಲ್ಲಿಲ್ಲ. ತ್ಯಾಗ, ಅಂತಃಕರಣ, ಧೈರ್ಯ, ಪ್ರೀತಿ, ಈಗಾಗಲೇ ನಮ್ಮಲ್ಲಿ ಅಂತರ್ಗತವಾಗಿವೆ. ಅವುಗಳನ್ನು ಉದ್ದೀಪನಗೊಳಿಸಿಕೊಳ್ಳಲು ಕಲಿಯುವ ಶ್ರದ್ಧೆ ಬೇಕಷ್ಟೆ. ‘ಉಪ್ಪು ಕೊಟ್ಟವರನ್ನು ಮುಪ್ಪಿನವರೆಗೂ ನೆನೆಯಬೇಕು .’ಎಂಬ ಮಾತಿನಂತೆ ಕೃತಜ್ಞತೆ ಕಲಿಯಬೇಕಿದೆ. ಜೇನು ಗೂಡಿನ ಜೇನುಗಳಾಗಿ ಪರಸ್ಪರ ಸಹಾಯ ಸಹಕಾರದಿಂದ ಕೂಡಿ ಬಾಳುವುದನ್ನು ಕಲಿಯಬೇಕಿದೆ. ಕಲ್ಲೆಸೆದರೂ ಸವಿಯಾದ ಹಣ್ಣು ನೀಡುವ ಪರೋಪಕಾರ ಗುಣವನ್ನು ಗಿಡಗಳಿಂದ ಕಲಿಯಬೇಕು. ಎಪಿಜೆ ಅಬ್ದುಲ್ ಕಲಾಮ್‍ರು ಹೇಳಿದಂತೆ ‘ಅಸಾಧ್ಯವೆಂದು ಹಿಂದೆ ಸರಿಯುವ ಮುನ್ನ ಪ್ರಯತ್ನಿಸುವುದನ್ನು ಕಲಿಯೋಣ.’. ಸರ್ವರಿಂದಲೂ ಪಾಠ ಕಲಿಯಲು ಮನಸ್ಸನ್ನು ಅಣ ಗೊಳಿಸೋಣ. ಸಾಯುವ ಮುನ್ನ ನೆಮ್ಮದಿಯಿಂದ ಬದುಕುವ ಕಲೆ ಕಲಿಯೋಣ.



ಜಯಶ್ರೀ ಜೆ. ಅಬ್ಬಿಗೇರಿ

ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ                        9449234142

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...

More Articles Like This

error: Content is protected !!
Join WhatsApp Group