ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಭವನದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ಎಂಬ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಡಾ. ನಾಗರಾಜ್ ಮರೆನ್ನವರ ಇವರು ಉಪನ್ಯಾಸಕರಾಗಿ ಮಾತನಾಡುತ್ತಾ, ಡಾ.ಆದಿನಾಥ್ ನೇಮಿನಾಥ್ ಉಪಾಧ್ಯೆ ಎಂಬ ಹಿರಿಯ ಸಾಹಿತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿರುವ ಕೊಡುಗೆ ಅಪಾರ. ಆ.ನೇ ಉಪಾಧ್ಯೆ ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗೆ ಎಂಬ ಗ್ರಾಮದಲ್ಲಿ ೧೯೦೬ಫೆಬ್ರುವರಿ ೬ ರಂದು ಜನಿಸಿದರು. ಬೆಳಗಾವಿಯ ಜಿ.ಎ ಹೈ ಸ್ಕೂಲ್ ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದ ಇವರು ಮುಂದೆ ಉನ್ನತ ವ್ಯಾಸಂಗದ ವಿದ್ಯಾಭ್ಯಾಸವನ್ನು ಮಹಾರಾಷ್ಟ್ರದಲ್ಲಿ ಮುಂದುವರಿಸಿದರು. ಡಾ. ಆ.ನೇ.ಉಪಾಧ್ಯೆ ಇವರು ದಿಗಂಬರ ಜೈನ ಸಮಾಜದ ಮನೆಯಲ್ಲಿ ಇದ್ದ ಪ್ರಾಚೀನ ಗ್ರಂಥಗಳ ತಾಡ ಓಲೆಯ ಪುಸ್ತಕಗಳ ಸಂಗ್ರಹದ ವಿದ್ಯೆ ಅವರ ಅಧ್ಯಯನದ ಬದುಕನ್ನು ಬೆಳಗಿತು. ಓದುವಾಗಲೇ ಉಪಾಧ್ಯೆ ತಮ್ಮ ಜೀವನವನ್ನು ಪ್ರಾಕೃತ ಭಾಷೆಯ ಅಧ್ಯಯನಕ್ಕೆ ಮೀಸಲಿಟ್ಟರು. ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಅಂತರ್ ರಾಜ್ಯದಲ್ಲಿಯೂ ಕೂಡ ಕನ್ನಡ ಸಾಹಿತ್ಯದ ಬಗ್ಗೆ ಬೆಳಕನ್ನು ಚೆಲ್ಲಿದರು, ಅಲ್ಲದೆ ವಿದೇಶಗಳಲ್ಲಿಯೂ ಕೂಡ ಸಾಕಷ್ಟು ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿದ್ದಾರೆ. ಸಾಹಿತ್ಯದ ಕ್ಷೇತ್ರದಲ್ಲಿ ನಮ್ಮನ್ನು ನಾವು ತನ್ಮಯತೆಯಿಂದ ತೊಡಗಿಸಿಕೊಂಡರೆ ಅಪಾರವಾದ ಯಶಸ್ಸನ್ನು ಗಳಿಸಬಹುದು ಎಂಬ ತತ್ವದಲ್ಲಿ ಅಚಲವಾದ ನಂಬಿಕೆಯನ್ನು ಇಟ್ಟಿದ್ದರು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲ ಶ್ರೀ ಮೆಟಗುಡ್ಡ ಇವರು, ಡಾ.ಆ.ನೇ ಉಪಾಧ್ಯಾಯ ಇವರು ಸಂಸ್ಕೃತ ಭಾಷೆಯಲ್ಲಿಯೂ ಕೂಡ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ, ಅವರು ಇಂದಿನ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಎಂದು ಮಾತನಾಡುತ್ತಾ ಶ್ರೇಷ್ಠ ಸಾಹಿತಿಗಳ ಕಾರ್ಯಕ್ರಮಗಳಲ್ಲಿ ಇಲ್ಲಿನ ಸಾಹಿತಿಗಳು ಭಾಗವಹಿಸದೇ ಇರುವುದು ಅತ್ಯಂತ ವಿಷಾದನೀಯ ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಂದಿನ ತಿಂಗಳ ಸಾಹಿತಿಗಳ ಕಾರ್ಯಕ್ರಮದಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಎಲ್ಲರಲ್ಲಿ ವಿನಂತಿಸಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿ ಇವರು ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮತ್ತೋರ್ವ ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಎಸ್ ಹಲವಾಯಿ ಇವರು ನಡೆಸಿಕೊಟ್ಟರು. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ವೀ.ಮ ಅಂಗಡಿ ಇವರು ವಂದನಾರ್ಪಣೆಯನ್ನು ಸಲ್ಲಿಸಿದರು.
ಡಾ.ಭಾರತಿ ಮಠದ ಇವರು ಅತಿಥಿಗಳ ಪರಿಚಯ ಭಾಷಣವನ್ನು ಮಾಡಿದರು. ಬೆಳಗಾವಿ ಜಿಲ್ಲೆಯ ಮಹಿಳಾ ಲಿಂಗಾಯತ ಸಮಾಜದ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ಬಿಂಗೆ, ಬೆಳಗಾವಿ ಜಿಲ್ಲೆಯ ಹಿರಿಯ ಮಹಿಳಾ ಲೇಖಕಿಯಾದ ಶ್ರೀಮತಿ ಜ್ಯೋತಿ ಬದಾಮಿ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಶೀಲಾ ಬ್ಯಾಕೋಡ, ಶ್ರೀಮತಿ ಗೀತಾ ಶೆಟ್ಟರ್, ರಮೇಶ್ ಮಗದುಮ್ಮ, ಸುರೇಶ್, ನಿತಿನ್ ಮೆಣಸಿನಕಾಯಿ ಮುಂತಾದ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.