ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವಗೌಡರವರ ಅನುದಾನದಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾ.12 ರಂದು ಕುಂಭಾಭಿಷೇಕ ಸಂಪನ್ನಗೊಂಡು ಇಂದಿಗೆ 48ನೇ ದಿನದ ಪ್ರಯುಕ್ತ ಬೆಳಿಗ್ಗೆ ವಿಶೇಷ ಮಂಡಲ ಪೂಜೆ, ಹೋಮ, ಹವನಾದಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಹಾಗೂ ಸಮೂಹ ದೇವಸ್ಥಾನಗಳಿಗೆ ನೌಕರರ ಸಂಘದ ಅಧ್ಯಕ್ಷರಾಗಿ 17ನೇ ಬಾರಿ ಆಯ್ಕೆಯಾದ ಶ್ರೀಧರ ದೀಕ್ಷಿತ್, ಉಪಾಧ್ಯಕ್ಷರಾದ ಎನ್.ಡಿ.ಸೋಮಶೇಖರ್, ಶ್ರೀಹರಿ, ಪದಾಧಿಕಾರಿ ಎಂ.ಡಿ.ಸೋಮಣ್ಣ, ನಿರ್ದೇಶಕರುಗಳಾದ, ಮಣೆಗಾರ್ ಪ್ರಸಾದ್, ಎಂ.ಆನಂದ್, ಆನಂದ್ ಹಾಗೂ ಶಿವಮಲ್ಲು ಇವರುಗಳಿಗೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಪರವಾಗಿ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಯಕರ ಜನಾಂಗದ ಮುಖಂಡ ಮಂಜುನಾಯಕ್ ಮಾತನಾಡಿ, ಶಾಸಕ ಜಿ.ಟಿ.ದೇವೇಗೌಡರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಡುವ ಭಕ್ತಾದಿಗಳೂ ಆಗಮಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ನಾಯಕರ ಜನಾಂಗದ ಪರವಾಗಿ ಶಾಸಕರಿಗೆ ಹಾಗೂ ಅವರ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ನಾಗೇಂದ್ರ, ವೆಂಕಟೇಶ್, ಪ್ರಕಾಶ್, ಸಿದ್ದರಾಜು, ಸುಬ್ರಹ್ಮಣ್ಯ, ಶಂಕರ್, ಆನಂದಸ್ವಾಮಿ, ಲಕ್ಷ್ಮಣ ನಾಯಕ, ಸ್ವಾಮಿ, ಜಯರಾಂ ಹಾಗೂ ಸಮಿತಿಯ ಪದಾಧಿಕಾರಿಗಳು, ಚಾಮುಂಡಿ ಬೆಟ್ಟದ ಗ್ರಾಮಸ್ಥರು ಉಪಸ್ಥಿತರಿದ್ದರು.