ಸಿಂದಗಿ : ಕೇವಲ ಸುಳ್ಳು ಭರವಸೆ ನೀಡುವ ಮೂಲಕ ಪ್ರಧಾನಿ ಮೋದಿ ಅವರು ದೇಶದ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.
ತಾಲೂಕಿನ ಮೋರಟಗಿ ಗ್ರಾಮದ ಸಿದ್ದಮುನಿ ಆಶ್ರಮ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರಕಾರ ರಚನೆಯಾದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಜಮಾ ಮಾಡುವುದಾಗಿ ಹೇಳಿದ್ದರು. ಈ ಭರವಸೆ ಈಡೇರಿದೆಯೇ ?, ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು, ಬಂದಿವೆಯೇ? ಎಂದು ಪಾಟೀಲ ಪ್ರಶ್ನಿಸಿದರು.
ಚುನಾವಣೆ ಬಂದಾಗ ಮಾತ್ರ ಇವರಿಗೆ ರಾಮ ನೆನಪಾಗುತ್ತಾನೆ. ಹಿಂದೂ ಮುಸ್ಲಿಮರ ನಡುವೆ ದ್ವೇಷ ಮನೋಭಾವ ಬೆಳೆಸುವುದು ಮತ್ತು ಮತ ಗಳಿಸಲು ಬಣ್ಣ ಬಣ್ಣದ ಮಾತುಗಳನ್ನು ಆಡುವುದೇ ಬಿಜೆಪಿ ಸಾಧನೆಯಾಗಿದೆ.
ರೈತರ ಸಾಲ ಮನ್ನಾ ಮಾಡುವಂತೆ ಕೋರಿದರೆ ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಉದ್ಯಮಿಗಳ ಕೋಟಿ, ಕೋಟಿ ಸಾಲವನ್ನು ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸಿದೆ. ಗ್ಯಾರಂಟಿ ಯೋಜನೆಯಿಂದ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಇದೇ ರೀತಿ ಕೇಂದ್ರದಲ್ಲಿ 25 ಯೋಜನೆಗಳ ಭರವಸೆ ನೀಡಲಾಗಿದ್ದು, ನಮ್ಮ ಸರಕಾರ ರಚನೆಯಾಗುತ್ತಿದ್ದಂತೆ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಗಾಳಿ ಮಾತಿಗೆ ಕಿವಿಗೊಡದೆ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ನೀವು ನೀಡುವ ಮತದಲ್ಲಿ ರಾಜ್ಯದ ಬಡವರ, ಜನ ಸಾಮಾನ್ಯರ ಹಿತ ಅಡಗಿದೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, 15 ವರ್ಷಗಳಿಂದ ಅಧಿಕಾರದಲ್ಲಿರುವ ಸಂಸದ ರಮೇಶ ಜಿಗಜಿಣಗಿ ಅವರು ತಾಲೂಕು ಕ್ಷೇತ್ರಗಳನ್ನೂ ಮರೆತಿದ್ದಾರೆ. ಅವರ ಅವಧಿಯಲ್ಲಿ ಒಂದೇ ಒಂದು ಅಡಿಗಲ್ಲು ಸಮಾರಂಭ ನಡೆದಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಮೋದಿ ಅವರ ಹೆಸರಿನಲ್ಲಿ ಮತ ಕೇಳುತ್ತಾರೆ. ಇದು ಬಹಳ ದಿನ ನಡೆಯದು. ಈ ಬಾರಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನಮ್ಮ ರಾಜ್ಯದ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಕೊಟ್ಟ ಭರವಸೆ ಈಡೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಯೋಜನೆಗಳು ಜಗತ್ತಿಗೂ ಮಾದರಿಯಾಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಎಸ್ ಎಂ ಪಾಟೀಲ್ ಗಣಿಹಾರ ಸಿಂದಗಿ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಆಲ್ಮೆಲ್ ಬ್ಲಾಕ್ ಅಧ್ಯಕ್ಷ ಸಾದಿಕ್ ಸುಂಬಡ್, ಎಂ ಕೆ ಕಣ್ಣಿ, ಎನ್ ಆರ್ ತಿವಾರಿ, ಮುತ್ತಪ್ಪ ಸಿಂಗೆ, ಸಲೀಮ್ ಕಣ್ಣಿ, ಶ್ರೀಶೈಲ್ ಕವಲಗಿ, ಮಲ್ಲಣ್ಣ ಸಾಲಿ, ಶಿವು ಹತ್ತಿ, ಚೆತನ ಪಾಟೀಲ್, ಗುರಣ್ಣಗೌಡ ಪಾಟೀಲ್, ಚನ್ನು ವಾರದ, ಸುನಂದಾ ಯಂಪೂರೆ, ಇತರರು ಇದ್ದರು.
ಬೃಹತ್ ಬೈಕ್ ರ್ಯಾಲಿ
ಸಮಾರಂಭಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಚಿವ ಎಚ್.ಕೆ.ಪಾಟೀಲರಿಗೆ ಪುಷ್ಪ ಸಮರ್ಪಿಸುವ ಮೂಲಕ ಬಸ್ ನಿಲ್ದಾಣ ಬಳಿ ಭವ್ಯ ಸ್ವಾಗತ ಕೋರಲಾಯಿತು. ಮೋರಟಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 16 ಹಳ್ಳಿಯ ಕಾರ್ಯಕರ್ತರು ಸೇರಿ ಬಸ್ ನಿಲ್ದಾಣದಿಂದ ಸಿದ್ದಮುನಿಗಳ ಆಶ್ರಮದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು. 2 ಸಾವಿರಕ್ಕೂ ಹೆಚ್ಚು ಜನ ಸೇರಿ ಕಾಂಗ್ರೆಸ್ ಪರ ಘೋಷಣೆ ಕೂಗಿದರು.