ನುಡಿ ನಮನ ಡಾ.ಅಭಿನವ ಕುಮಾರ ಚನ್ನಬಸವ ಸ್ವಾಮಿಗಳ
೭-೧೧-೨೦೨೪ ವ್ಯಾಟ್ಸಪ್ ನೋಡುತ್ತಿದ್ದೆ ಜಮಖಂಡಿ ಓಲೆಮಠದ ಪೂಜ್ಯರು ಇನ್ನಿಲ್ಲ ಎಂಬ ಸುದ್ದಿ ನೋಡಿದ ಕ್ಷಣ ಮಾತೇ ಹೊರಡದಂತಾಯಿತು. ಹಿರಿಯ ಸನ್ಮಿತ್ರ ಅಶೋಕ ನರೋಡೆ ಅವರ ಫೇಸ್ಬುಕ್ ನಲ್ಲಿ ಪೂಜ್ಯರ ಕುರಿತ ನುಡಿನಮನ ವೀಕ್ಷಿಸಿದೆ. ನನ್ನ ಬದುಕಿನಲ್ಲಿ ಅವರೊಂದಿಗಿನ ಒಡನಾಟವೆಲ್ಲ ಕಣ್ಮುಂದೆ ಸೆಳೆದವು. ಗೊರವನಕೊಳ್ಳ ವಟ್ನಾಳ ಸಂಕ್ರಾಂತಿ ಸಂದರ್ಭದಲ್ಲಿ ರಥೋತ್ಸವ ಸಲುವಾಗಿ ಮುಂಚಿತವಾಗಿ ಬಂದು ಉಳಿದುಕೊಂಡ ಸಂದರ್ಭದಲ್ಲಿ ಗುರುಗಳೇ ಆಫೀಸ ಮುಗಿಯಿತೇ.? ಎಂಬ ಅವರ ಪೋನ್ ಕರೆ ಕಂಡಾ ಪೂಜ್ಯರೊಂದಿಗಿನ ಮಾತುಗಳು ನನಗೆ ಜೇನುತುಪ್ಪ ಸವಿದ ಅನುಭವ. ಮಠಕ್ಕೆ ಬಂದಿರುವೆ.ಮುನವಳ್ಳಿಗೆ ಹೋಗುವ ಮುಂಚೆ ಮಠದ ಕಡೆಗೆ ಬಂದು ಹೋಗಿರಿ ಎನ್ನುವ ಅವರ ಆಮಂತ್ರಣ ನನಗಂತೂ ಎಲ್ಲ ಕೆಲಸ ಮುಗಿಸಿ ನೇರವಾಗಿ ಬೈಕಿನಲ್ಲಿ ವಡಕಹೊಳಿಗೆ ಬಂದು ಪೂಜ್ಯರ ಜೊತೆಗೆ ಮಾತನಾಡಿ ಹೋದಾಗಲೇ ಸಮಾಧಾನ.
ನಮ್ಮ ಗಾಣಿಗ ಸಮಾಜದ ನೌಕರರ ಸಂಘಟನೆ ಸವದತ್ತಿಯ ಜ್ಯೋತಿ ಅರ್ಬನ್ ಕೋ ಅಪ್ ಸೊಸಾಯಿಟಿಯಲ್ಲಿ ಜರುಗಿದಾಗ ಉದ್ಘಾಟನೆಗೆ ಪೂಜ್ಯರ ಆಮಂತ್ರಿಸಲು ಮ್ಯಾನೇಜರ್ ಜಗದೀಶ ಹಳೇಮನಿ.ಆನಂದ ಬಟಕುರ್ಕಿಯವರೊಂದಿಗೆ ಓಲೆಮಠಕ್ಕೆ ಹೋದಾಗ ಪೂಜ್ಯರು ಸವದತ್ತಿಯಲ್ಲಿ ಇದ್ದಾಗ ಹೇಗೆ ನನ್ನನ್ನು ಕಾಣುತ್ತಿದ್ದರೋ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಓಲೆಮಠದಲ್ಲಿ ಆದರಿಸಿದ ನೆನಪುಗಳು ಮರೆಯಲಾಗದು. ಆ ದಿನ ತಮ್ಮ ಕೃತಿಗಳನ್ನು ನನಗೆ ನೀಡಿದರು. ಎಲ್ಲ ಕೃತಿಗಳ ಕುರಿತು ಪೂಜ್ಯರ ಬದುಕಿನ ಘಟ್ಟಗಳನ್ನು ಒಂದು ಪುಟ್ಟ ಬರಹದ ಮೂಲಕ ಮೆಲಕು ಹಾಕಿದ್ದೆ. ಅಂತಹ ಸಾಹಿತ್ಯ ಸಹೃದಯರ ಅಗಲಿಕೆ. ನಿಜಕ್ಕೂ ನನ್ನ ಬರವಣಿಗೆಯ ಮೇಲೆ ಅವರ ಪ್ರಭಾವ ಎಲ್ಲವನ್ನೂ ನೆನಪು ಮಾಡಿಕೊಳ್ಳತೊಡಗಿದೆ.
ಮಲಪ್ರಭೆಯ ತಟದಲ್ಲಿ ಕುಮಾರಸ್ವಾಮಿಗಳು ತಪೋನಿರತರಾಗಿದ್ದ ಸಮಯದಲ್ಲಿ ಗೊರವನಕೊಳ್ಳ ಮತ್ತು ವಟ್ನಾಳ ಗ್ರಾಮದ ಜನತೆಯ ಭಕ್ತಿ ಪರವಶತೆ ಇಂದು ಇಲ್ಲೊಂದು ಮಠದ ಕಟ್ಟಡ ನೆಲೆನಿಂತು ಪ್ರತಿ ವರ್ಷ ಜಮಖಂಡಿಯ ಓಲೆಮಠದ ಪರಮಪೂಜ್ಯ ಅಭಿನವಕುಮಾರ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜಾತ್ರೆ ಜರಗುತ್ತಿರುವುದು ವಿಶೇಷ.ಅಂದ ಹಾಗೆ ಜಮಖಂಡಿ ಓಲೆಮಠದ ಪೂಜ್ಯರು ನಾಡಿನಾದ್ಯಂತ ತಮ್ಮ ಪ್ರವಚನ ಹಾಗೂ ಕೃತಿತತ್ವದಿಂದಾಗಿ ಚಿರಪರಿಚಿತರು.ವಿದ್ಯಾರ್ಥಿದೆಸೆಯಿಂದಲೇ ಎಲ್ಲರಿಂದ “ಕಾಶಿಪಂಡಿತ” ಎಂದು ಕರೆಸಿಕೊಂಡವರು.ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಈ ತಲೆಮಾರಿನ ಮಠಾಧೀಶರು ಹೆಚ್ಚು ಹೆಚ್ಚು ತಮ್ಮನ್ನು ಅಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳೊಂದಿಗೆ ಸಾಹಿತ್ಯ,ಸಾಂಸ್ಕೃತಿಕ,ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ ಸರಿ ಸವದತ್ತಿ ತಾಲೂಕಿನ ಗಾಣಿಗ ಸಮಾಜದ ನೌಕರರ ಮೊದಲ ಕಾರ‍್ಯಕ್ರಮಕ್ಕೆ ಪೂಜ್ಯರನ್ನು ದಿವ್ಯಸಾನಿಧ್ಯವನ್ನು ವಹಿಸಲು ಕೋರಿ ಜಮಖಂಡಿಗೆ ಹೋಗಿದ್ದೆವು.ಅಂದು ಪೂಜ್ಯರು ತಮ್ಮ ಸಾಹಿತ್ಯ ಕೃತಿಗಳನ್ನು ನನಗೆ ನೀಡಿದರು.ಒಂದೊಂದು ಕೃತಿಯೂ ಅಮೂಲ್ಯವಾಗಿದ್ದವು.ಅಷ್ಟೇ ಅಲ್ಲ ೨೦೧೪ ರಲ್ಲಿ ಅವರ ಕೃತಿಗಳ ಅವಲೋಕನ ಕೂಡ ನಡೆದದ್ದು ಕೂಡ
ಪೂಜ್ಯರು ೧೯೬೩ ರಲ್ಲಿ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಶರಣ ದಂಪತಿಗಳಾದ ಬಸಲಿಂಗಯ್ಯ ಶರಣೆ ಗಂಗಮ್ಮನವರ ಉದರದಲ್ಲಿ ಜನಿಸಿದರು.ಬಿದರಿಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು.ಬೆಳಗಾವಿಯಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ.ಮಠಾಧೀಶರಿಗೆ ಅವಶ್ಯಕವಾದ ಅಧ್ಯಾತ್ಮ ಶಿಕ್ಷಣವನ್ನು “ಶಿವಯೋಗ ಮಂದಿರ”ದಲ್ಲಿ ಪಡೆದರು.
ಸನಾತನ ಧರ್ಮ ಇಂಟರ ಕಾಲೇಜ ಬನಾರಸದಿಂದ “ಇಂಟರ ಮೀಡಿಯಟ್” ಮುಗಿಸಿ.ಸಂಸ್ಕೃತಿಯ ತಾಣ ಕಾಶಿಯ ಮಹಾವಿದ್ಯಾಲಯದಲ್ಲಿ ಬಿ.ಎ ಮತ್ತು ಕಾಶಿ ವಿದ್ಯಾಪೀಠದಿಂದ ಎಂ.ಎ.ಪದವಿ.ತಿರುಪತಿಯ ಸಂಸ್ಕೃತ ಎಂ.ಎ ತಿರುಪತಿಯ ಖೇಮ್ಡ ವಿಶ್ವವಿದ್ಯಾಲಯದಿಂದ “ಶಿವಾನುಭವ ಸೂತ್ರ ಶಿವಾಗಮನುರೊಹದು ಷಟಸ್ಥಲ ಸಮೀಕ್ಷಣಂ” ಎಂಬ ವಿಷಯದಲ್ಲಿ ಸಂಶೋಧನ ಕೈಗೊಂಡರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ಮಗ್ಗಿಯ ಮಾಯಿದೇವನ ಶಿವಾನುಭವ ಒಂದು ಅಧ್ಯಯನ” ಕುರಿತು ಸಂಶೋಧನ ಗ್ರಂಥಕ್ಕೆ ಡಾಕ್ಟರೇಟ್ ಪದವಿ ಲಭಿಸಿತು.ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡ ಪೂಜ್ಯರು ಇದುವರೆಗೆ ೭೦ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಗಮನಾರ್ಹ.
ದೇಶ ಸುತ್ತು ಕೋಶ ಓದು ಎಂಬ ನುಡಿಯಂತೆ ಯುರೋಪ ದೇಶಕ್ಕೂ ಪೂಜ್ಯರು ಹೋಗಿ ಬಂದಿದ್ದು.ಯುರೋಪ ಪ್ರವಾಸ ಕಥನ ರಚಿಸಿರುವರು. ಅಂತರ್ಜಾಲದ ಸದುಪಯೋಗ ಪಡೆಯುತ್ತಿರುವ ಸ್ವಾಮೀಜಿಗಳಲ್ಲಿ ಪ್ರಮುಖರು.ಪ್ರತಿದಿನ ಧಾರ್ಮಿಕ ಸಾಂಸ್ಕೃತಿಕ ಯಾವುದೇ ಚಟುವಟಿಕೆಗಳಲ್ಲಿ ಪೂಜ್ಯರು ನಿರತರಾಗುವರೋ ಅದೇ ದಿನ ಅದನ್ನು ವ್ಯಾಟ್ಸಪ್.ಮೆಸೆಂಜರ್.ಫೇಸಬುಕ್‌ಗಳಲ್ಲಿ ಅಳವಡಿಸುವ ಮೂಲಕ ಚಲನಶೀಲತೆಯನ್ನು ಕಾಯ್ದುಕೊಂಡಿರುವರು.ಪೂಜ್ಯರ ಪುಸ್ತಕ ಪ್ರೀತಿ ಎಂತಹುದೆಂದರೆ ಅನಾರೋಗ್ಯ ಕಾಲದಲ್ಲಿಯೂ ಗುಳಿಗೆಗಳಿಗಿಂತ ಹೆಚ್ಚು ಪುಸ್ತಕಗಳ ಓದು ಮನಸ್ಸನ್ನು ಚಲನಶೀಲವಾಗಿಡಬಲ್ಲದು ಎನ್ನುವ ಇವರು ನವಿಲುತೀರ್ಥದ ವಡಕಹೊಳಿ ಕುರಿತು “ನವಿಲುತೀರ್ಥದ ಯಾತ್ರೆ ಜಾತ್ರೆ” ಎನ್ನುವ ತಮ್ಮ ೬೫ನೇ ಕೃತಿಯಲ್ಲಿ ಪುಟ ೩೨ ರಲ್ಲಿ ನವಿಲುತೀರ್ಥ ೧೫ ಎಂಬ ಶೀರ್ಷಿಕೆಯಲ್ಲಿ ಪೂಜ್ಯರು ಈ ರೀತಿ ಬರೆದಿರುವರು.
ನೀರು-ಏರು-ಊರು ಇದ್ದಲ್ಲಿ ವಾಸ ಮಾಡಬೇಕಂತೆ.ವಟ್ನಾಳ ಗೊರವನಕೊಳ್ಳವು ಅಂಥ ಸ್ಥಳವಾಗಿದೆ. ಬೆಟ್ಟದ ಏರಿದೆ.ಏರಿನಲ್ಲಿಯೇ ಊರು ಇದೆ.ನಡುವೆ ಹೆದ್ದಾರಿ ಇದೆ.
ಏಳುಕೊಳ್ಳ ಏಳುಕೊಳ್ಳ ಎಂದು ರೇಣುಕೆಯ ಭಕ್ತರು ಉಗ್ಗಡಿಸುತ್ತಿರುತ್ತಾರೆ.ಏಳುಕೊಳ್ಳದಲ್ಲಿ ಒಂದು ಈ ವಟ್ನಾಳ ಗೊರವನಕೊಳ್ಳ.ಎಂದು ಈ ಕ್ಷೇತ್ರದ ಪರಿಚಯ ಮಾಡಿರುವರು.ಇಂದು ಇದೊಂದು ಅದ್ಬುತ ತಾಣವಾಗಿದ್ದು.ಮಠವನ್ನು ಪ್ರವೇಶಿಸುತ್ತಲೇ ಮೂವರು ಶರಣರ ಮೂರ್ತಿಗಳು ಬಿದರಿ ಲಿಂ.ಕುಮಾರ ಶಿವಯೋಗಿಗಳು,ಲಿಂ.ಹಾನಗಲ್ ಕುಮಾರ ಶಿವಯೋಗಿಗಳು, ಹಾವೇರಿಯ ಲಿಂ.ಶಿವಬಸವ ಮಹಾಸ್ವಾಮಿಗಳ ಮೂರ್ತಿಗಳು ನಮ್ಮನ್ನು ಆಕರ್ಷಿಸುತ್ತವೆ.ಇವು ಅಮೃತ ಶಿಲೆಯಲ್ಲಿ ಮೂಡಿಬಂದಿವೆ.ಮಹಾದ್ವಾರದ ಮೇಲೆಯೂ ಕೂಡ ಈ ಮೂರ್ತಿಗಳಿರುವುದು ವಿಶೇಷ.ಇಲ್ಲಿ ಹಚ್ಚ ಹಸುರಿನ ಹುಲ್ಲು ಹಾಸಿದೆ.ಎದುರಿಗೆ ಸಭಾಮಂಟಪವಿದೆ.ಒಂದೆಡೆ ಜಾತ್ರೆಯ ರಥದ ಕೊಠಡಿಯಿದೆ.ಪಕ್ಕದಲ್ಲಿ ಮಲಪ್ರಭೆಯ ಒಡಲು ಅಲ್ಲಿ ಇತ್ತೀಚಿಗೆ ಬೋಟುಗಳ ಆಗಮನ ಪ್ರವಾಸಿಗರಿಗೆ ನದಿಯಲ್ಲಿ ಸಂಚರಿಸಲು ಅನುಕೂಲ ಮಾಡಿಕೊಟ್ಟಿವೆ.
ಜಮಖಂಡಿಯಲ್ಲಿರುತ್ತಿದ್ದ ಪೂಜ್ಯರು ಪ್ರತಿವರ್ಷ ಸಂಕ್ರಮಣ ಜಾತ್ರೆಗೆ ತಪ್ಪದೇ ಬರುತ್ತಿದ್ದರು ಇಲ್ಲಿನ ಭಕ್ತರು ಕೂಡ ಪ್ರತಿಯೊಂದು ಕಾರ‍್ಯಕ್ರಮಗಳನ್ನು ಮಾಡುವಾಗ ಪೂಜ್ಯರ ಸಲಹೆಯನ್ನು ಕೇಳುವ ಮೂಲಕ ತಮ್ಮ ಭಕ್ತಪರವಶತೆಯನ್ನು ಉಳಿಸಿಕೊಂಡಿರುವರು.ಇಂತಿಪ್ಪ ಪೂಜ್ಯರು ವಿದ್ಯಾರ್ಥಿ ದೆಸೆಯಲ್ಲಿಯೇ ಒಂದು ಸುವರ್ಣ ಪದಕ ಎರಡು ರಜತ ಪದಕ.ಸಾಂತ್ವನ ಪ್ರಶಸ್ತಿ.ಬಸವಕಾರುಣ್ಯ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೇ.ಡಾ.ಪುಟ್ಟರಾಜ ಗವಾಯಿ ರಾಜ್ಯ ಮಟ್ಟದ ಪ್ರಶಸ್ತಿ.ಅಲ್ಲಮ ಪ್ರಭು ಸದ್ಭಾವನಾ ಪ್ರಶಸ್ತಿ.ಚನ್ನಬಸವ ರಾಜ್ಯ ಪ್ರಶಸ್ತಿ ಮಾರ್ಕಂಡೇಯ ದೊಡಮನಿ ಪ್ರತಿಷ್ಠಾನ ಪ್ರಶಸ್ತಿ.ಧರ್ಮರತ್ನ ಪ್ರಶಸ್ತಿ ಸಿರಿಗನ್ನಡ ಸಾಹಿತ್ಯ ರಾಜ್ಯಪ್ರಶಸ್ತಿ.ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರೂ ಕೂಡ ತಮಗೆ ದೊರೆತ ಪ್ರಶಸ್ತಿ ಕುರಿತು ಯಾವ ಮಾತನ್ನು ಆಡುತ್ತಿರಲಿಲ್ಲ.ಅಧ್ಯಾತ್ಮ ಸಾಹಿತ್ಯದ ಸಮಾಜಮುಖಿ ಕಾಯಕದಲ್ಲಿ ತೊಡಗಿರುವ ಪೂಜ್ಯರು ಬರೆದ ಕೃತಿಗಳನ್ನು ಓದುತ್ತಿದ್ದರೆ ಅಧ್ಯಾತ್ಮಕ ಬದುಕನ್ನು ಆಸ್ವಾದಿಸಿದಂತಾಗುತ್ತದೆ.ಅವರ ಕಥಾ ಸಂಕಲನವಂತೂ ಆಡು ಭಾಷೆಯ ಸೊಗಡನ್ನು ಲೀಲಾಜಾಲವಾಗಿ ಸೆರೆಹಿಡಿದು ಅದರಲ್ಲಿ ಮೂಡಿಬರುವ ಪ್ರತಿ ಘಟನೆಗಳು ನಮ್ಮ ನಡುವೆ ನಡೆಯುತ್ತಿವೆಯೇನೋ ಎನ್ನುವಂತೆ ಭಾಸವಾಗುತ್ತವೆ. ಲಿಂಗೈಕ್ಯ ಬಿದರಿ ಕುಮಾರ ಸ್ವಾಮಿಗಳ ತಪೋನುಷ್ಠಾನಗೈದ ಗೊರವನಕೊಳ್ಳ ವಟ್ನಾಳ ಗ್ರಾಮದ ಮಲಪ್ರಭೆಯ ಒಡಲು ಇಂದಿಗೂ ಡಾ.ಅಭಿನವ ಕುಮಾರ ಚನ್ನಬಸವ ಮಹಾಸ್ವಾಮೀಜಿಯವರ ಅನುಗ್ರಹದ ಮೂಲಕ ಮಠದಲ್ಲಿ ಅನೇಕ ಧಾರ್ಮಿಕ ಚಟುವಟಿಕೆಗಳ ತಾಣವಾಗಿದ್ದು.ಸಂಕ್ರಮಣದ ರಥೋತ್ಸವ ಕೂಡ ಸಾಗುವ ಮೂಲಕ ಅವರ ನೆನಪನ್ನು ಚಿರಸ್ಥಾಯಿಯಾಗಿಸಿದೆ.
ಪೂಜ್ಯರ ಕೃತಿಗಳು
೧)ಕವನೋಲ್ಲಾಸ ೨)ಬಸವ ದ್ವಿಪದಿ (ಮಹಾಕಾವ್ಯ) ೩)ಅಂಗೈ ಅರಮನೆ ಸಿಂಗಪುರ(ಪ್ರವಾಸಕಥನ) ೪)ಯುರೋಪ್ ಟ್ರಿಪ್ (ಪ್ರವಾಸ ಕಥನ) ೫)ಹೊಂಬೆಳಕು.೬) ಸುವರ್ಣಝರಿ.೭)ಹಾನಗಲ್ಲ ಕುಮಾರೇಶ್ವರ ಸಮಗ್ರ ಸಾಹಿತ್ಯ ೮) ಧರ್ಮದಲ್ಲಿ ವೈಜ್ಞಾನಿಕ ಪರಿಕಲ್ಪನೆ ೯) ಶಿವಭಕ್ತಿಗೀತೆಗಳು ೧೦) ಲಿ.ಪಿ.ಎಂ.ಬಾಗಿ ೧೧)ಗಳಿಕೆಯ ಬೆಳಕು ೧೨)ಮನದ ಮುಂದಿನ ಮಾಯೆ. ೧೩)ಲೌಕಿಕಪಥ ೧೪) ಶಿವಾದ್ವೈತದ ವಿಕಾಸ ೧೫) ಬಿದರಿ ಶ್ರೀ ಕುಮಾರೇಶ್ವರ ಪುರಾಣ ೧೬) ಮನಸ್ಸು ಮಾತು ಕೇಳಿದಾಗ ೧೭) ಬಸವಭಾವದ ಸುತ್ತಮುತ್ತ ೧೮) ವನದ ಕೋಗಿಲೆ ಮನೆಗೆ ಬಂದರೆ ೧೯) ವಚನ ಗಾಯನ ಗಂಗಾ ೨೦)ಮಗ್ಗೆಯ ಮಾಯಿದೇವನ ಶಿವಾನುಭವ ಸೂತ್ರ ಒಂದು ಅಧ್ಯಯನ ೨೧)ಪುರುಷ ಪ್ರಯತ್ನ ೨೨) ಹೆಇದು ಹೆದ್ದೊರೆ ೨೩) ಯೋಗ ಶಿವಯೋಗ ೨೪) ಶರಣರ ಸಾಂಗತ್ಯ ೨೫) ಶಿವಯೋಗ ಮಂದಿರದ ಸುತ್ತಮುತ್ತ ೨೬) ಓಲೆಮಠದ ಹೃದ್ಯೋಲೆಗಳು ೨೭)ನಿಮ್ಮ ಶರಣರಿಗಲ್ಲದೆ ೨೮) ಧರ್ಮ ಆಚರಣೆ ೨೯) ಚನ್ನ ಬಸವಣ್ಣ ೩೦) ಬಸವನುರಿಗೆ ಅರಗಾಗಿ ಕರಗಿ ೩೧) ಬಸವಣ್ಣ ಮತ್ತು ವಿಶ್ವಭ್ರಾತತ್ವ ೩೨) ಹಾಲಕೆರೆಯ ಶ್ರೀ ಅನ್ನದಾನೀಶ್ವರ ಮಹಾಪುರಾಣ ಪದ್ಯಾನುವಾದ ೩೩) ಯೋಗಿಗಳಲ್ಲಿ ಬಿದರಿ ಶ್ರೀ ಕುಮಾರ ಶಿವಯೋಗಿ ೩೪) ಸಿಂಗನಬಸವನ ೧೦೮ ವಚನಗಳು ೩೫) ಓಲೆಮಠ ಕೋಡಿಮಠಗಳ ಭಾವಬಾಂಧವ್ಯ ೩೬) ಕವನ ಬಸವಕುಮಾರ ಚಿತ್ಸುಮಾನ ೩೭) ಬಸವ ಬೆಳಕಿಂಡಿ ೩೮)ವಚನ ವಸಂತ ೩೯) ಸ್ಪಂದನ-ಪ್ರತಿಸ್ಪಂದನ ಕವನಗಳು ೪೦) ಸಾಹಿತ್ಯದ ಅನುಸಂಧಾನ ೪೧) ಉಬಾರಿ ದುಬಾಯಿ (ಪ್ರವಾಸಕಥನ) ೪೨) ಬಸವಕುಮಾರ ಕೈವಾರ (ಕವನಗಳು) ೪೩) ವಚನ ಕಾನನ ೪೪) ನಿತ್ಯ ವರ್ತಮಾನ ೪೫) ಬಸವ ಕುಸುಮ ೪೬) ಅಭಿನವಕುಮಾರ ವೈಭವ.ಶರಣ ಸಂಕುಲಕೆ ದಾರಿದೀಪ ೪೭) ವಚನದಿಂಚರ ೪೮) ವಚನರಥ (ಆಧುನಿಕ ವಚನ ಸಂಕಲನ) ೪೯) ತುಂಬಿದುದು ತುಳುಕದು ೫೦) ನವಿಲುತೀರ್ಥ ಯಾತ್ರೆ ಜಾತ್ರೆ ೫೧) ಇನ್ನು ಮೇಲೆ ರಾಮೇಶ್ವರ (ಪ್ರವಾಸಕಥನ) ೫೨) ಲಯಿಫ-ಡಾ.ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಅವರ ಆತ್ಮಚರಿತ್ರೆ ೫೩) ಸಾಹಿತ್ಯ ದರ್ಶನ ೫೪) ಶಿವಾನುಭವ ಸೂತ್ರದ ವಿಳಾಸ ೫೫) ಜಮಖಂಡಿ ಓಲೇಮಠದ ಶ್ರೀಗಳ ಸಾಹಿತ್ಯಾವಲೋಕನ ೫೬) ಹಳಿಂಗಳಿ ಬೆಳ್ಳಿಬೆಳಗು ೫೭) ನಿರಂಜನ ೫೮) ನಿತ್ಯ ನಿತ್ಯ ವರ್ತಮಾನ ೫೯) ಮನೋರೇಖೆಗಳು ೬೦) ಬದುಕೇ ಟೈಟಾನಿಕ್ ೬೧) ಬಸವ ಭಾರತ ಈಗ ಇವುಗಳ ಸಂಖ್ಯೆ ೭೦ ಕ್ಕೂ ಹೆಚ್ಚಾಗಿದೆ.ನನ್ನ ಬಳಿ ಇರುವ ಪಟ್ಟಿಯನ್ನು ಈ ಬರಹದ ಸಂದರ್ಭದಲ್ಲಿ ಮಾತ್ರ ನೀಡಿರುವೆ. ಮುಂದಿನ ದಿನಗಳಲ್ಲಿ ಅವರ ಕೃತಿಗಳ ಪಟ್ಟಿಯನ್ನು ಪಡೆದುಕೊಂಡು ಬರಹ ರೂಪಿಸುವೆ.
ಡಾ.ಅಶೋಕ ನರೋಡೆಯವರು ಅವರ ಕೃತಿಗಳ ಅವಲೋಕನ ಮಾಡಿರುವರು.ಹಿರಿಯ ಮಿತ್ರರ ಜೊತೆಗೆ ಒಡನಾಟ ಕೂಡ ಪೂಜ್ಯರ ಸಾಹಿತ್ಯದ ಕುರಿತು ಮಾತನಾಡುವ ಜೊತೆಗೆ ಡಾ.ಅಶೋಕ ನರೋಡೆಯವರು ಕೂಡ ವಡಕಹೊಳಿ ಜಾತ್ರೆಗೆ ಬಂದಾಗ ಕಾರ್ಯಕ್ರಮದಲ್ಲಿ ಪೂಜ್ಯರ ಕುರಿತು ಮಾತನಾಡುವುದನ್ನು ಕೇಳುವ ಸೌಭಾಗ್ಯ ಒದಗಿಸಿದ ಪೂಜ್ಯರ ನನಪು ಇದರೊಂದಿಗೆ ಸಹೋದರಿ ರೋಹಿಣಿ ಯಾದವಾಡ ಅವರ ಸಾಹಿತ್ಯದ ಒಡನಾಟ ಕೂಡ ಸ್ಮರಣೀಯ. ಸಾಹಿತಿಗಳನ್ನು ಕಂಡರೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದರು.ಅವರ ಬರವಣಿಗೆ ಹೇಗೆ ಸಾಗಿದೆ ಎಂದೆಲ್ಲ ವಿಚಾರಿಸುವ ಜೊತೆಗೆ ತಮ್ಮ ಕೃತಿಗಳನ್ನು ನೀಡಿ ಸತ್ಕರಿಸಿ ಕಳಿಸುತ್ತಿದ್ದರು.ಈಗ ದಿನ ಸವದತ್ತಿಗೆ ಹೊರಟಾಗ ಪೂಜ್ಯರಿಲ್ಲದ ವಡಕಹೊಳಿ ದಂಡೆಯ ಕಟ್ಟಡ ಕಂಡಾಗ ಅವರ ಅನುಪಸ್ಥಿತಿ ಕಾಡತೊಡಗುತ್ತದೆ.ಪೂಜ್ಯರು ನಮ್ಮಿಂದ ದೂರವಾಗಿರಬಹುದು ಆದರೆ ಅವರೊಂದಿಗೆ ಕಳೆದ ಕ್ಷಣಗಳ ನೆನಪು ಮಾತ್ರ ಅಜರಾಮರ.
*ವೈ.ಬಿ.ಕಡಕೋಳ*
*ಶಿಕ್ಷಕ ಸಾಹಿತಿಗಳು*
*ಮುನವಳ್ಳಿ ೫೯೧೧೧೭*
*ಸವದತ್ತಿ ತಾಲೂಕು*
*ಬೆಳಗಾವಿ ಜಿಲ್ಲೆ*