spot_img
spot_img

ಹೊಸ ಪುಸ್ತಕ ಓದು

Must Read

- Advertisement -

ಕನ್ನಡದಲ್ಲೊಂದು ವಿಶಿಷ್ಟ ಜೀವನ ಚರಿತ್ರೆ

ಪುಸ್ತಕದ ಹೆಸರು : ಬ್ಯಾಸರಿಲ್ಲದ ಜೀವ : ಸಿದ್ದು ಯಾಪಲಪರವಿ ಜೀವನ ಕಥನ
ಲೇಖಕರು : ಸಿಕಾ (ಕಾವ್ಯಶ್ರೀ ಮಹಾಗಾಂವಕರ)
ಪ್ರಕಾಶಕರು : ಸಾಂಗತ್ಯ ಪ್ರಕಾಶನ, ಕಾರಟಗಿ, ೨೦೨೪
* * * * *

[ನಮ್ಮ ನಾಡಿನ ಪ್ರಜ್ಞಾವಂತ ಚಿಂತಕ, ಅಪ್ರತಿಮ ವಾಗ್ಮಿ ಸಿದ್ದು ಯಾಪಲಪರವಿ ಅವರು ಇದೇ ದಿನಾಂಕ ೩೧-೫-೨೦೨೪ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಈ ನಿಮಿತ್ತ ಅವರ ಅಭಿಮಾನಿ ಬಳಗದವರು ದಿನಾಂಕ ೨-೬-೨೦೨೪ರಂದು ರವಿವಾರ ಗದುಗಿನ ಅಂಬೇಡ್ಕರ್ ಸಭಾಭವನದಲ್ಲಿ ‘ಸಮಕಾಲೀನರೊಂದಿಗೆ ಸಮಾಗಮ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದು ಅವರ ಜೀವನ ಕಥನ ‘ಬ್ಯಾಸರಿಲ್ಲದ ಜೀವ’ ಕೃತಿ ಲೋಕಾರ್ಪಣೆಯಾಗುತ್ತಿದೆ. ಈ ಕೃತಿಯ ಮೊದಲ ಓದುಗನಾದ ನಾನು ಮುನ್ನುಡಿ ರೂಪದಲ್ಲಿ ಬರೆದ ಕೆಲವು ವಿಚಾರಗಳು ಇಲ್ಲಿವೆ….]

ಕನ್ನಡ ಸಾಹಿತ್ಯದಲ್ಲಿ ನವ್ಯ ಘಟ್ಟ ಆರಂಭವಾದಾಗ ಲಂಕೇಶ ಅವರಂತಹ ಬಹುಮುಖ ಆಯಾಮದ ವ್ಯಕ್ತಿ ಸಾರಸ್ವತ ಕ್ಷಿತಜವನ್ನು ವಿಸ್ತಾರಗೊಳಿಸಿದರು. ಲಂಕೇಶರ ಮಾದರಿಯಲ್ಲಿಯೇ ಅವರ ವಾರಸುದಾರಿಕೆಯನ್ನು ಮುಂದುವರೆಸಿ, ಲಂಕೇಶರಿಗಿಂತಲೂ ಹತ್ತು ಪಟ್ಟು ವಿಸ್ತಾರೋನ್ನತವಾಗಿ ಬೆಳೆದವರು ರವಿ ಬೆಳೆಗೆರೆ.

- Advertisement -

ಲಂಕೇಶ್ ಮತ್ತು ರವಿ ಬೆಳಗೆರೆ ಅವರಂತಹ ಪ್ರತಿಭಾ ಸಂಪನ್ನರ ಪರಂಪರೆಯನ್ನು ಉತ್ತರ ಕರ್ನಾಟಕದಲ್ಲಿ ಅಕ್ಷರಶಃ ಮುಂದುವರಿಸಿದವರು ಪ್ರೊ. ಸಿದ್ಧು ಯಾಪಲಪರವಿ ಅವರು. ಲಂಕೇಶ ಮತ್ತು ಬೆಳೆಗೆರೆ ಅವರಿಗೆ ಬೆಂಗಳೂರು ಎಂಬ ಮಾಯಾನಗರಿಯ ಅನೇಕ ಸಂಗತ-ಅಸಂಗತ, ಸವ್ಯ-ಅಪಸವ್ಯಗಳ ಲೋಕ ಎದುರಿಗಿತ್ತು, ಹೀಗಾಗಿ ಅವರು ಒಂದು ರೀತಿಯಲ್ಲಿ ಭಂಡತನದಲ್ಲಿಯೇ ಬರೆದು ಬದುಕಿದವರು. ಆದರೆ ಉತ್ತರ ಕರ್ನಾಟಕದಲ್ಲಿ ಅಂತಹ ವಾತಾವರಣವಿಲ್ಲದ ಕಾರಣಕ್ಕಾಗಿ, ಪತ್ರಿಕೆಯೊಂದನ್ನು ಬಿಟ್ಟು, ಬರಹ, ಮಾಧ್ಯಮ, ಭಾಷಣ ಹೀಗೆ ಎಲ್ಲ ಆಯಾಮಗಳಲ್ಲಿ ಅವರಿಬ್ಬರಂತೆ ಇಡೀ ಕರ್ನಾಟಕದ ಜನತೆಗೆ ಪರಿಚಿತರಾದವರು ಪ್ರೊ. ಸಿದ್ಧು ಯಾಪಲಪರವಿ ಅವರು.

ಪ್ರೊ. ಸಿದ್ಧು ಯಾಪಲಪರವಿ ಅವರ ಬದುಕಿನ ಈ ಕಥನವನ್ನು ಒಂದು ರೀತಿಯಲ್ಲಿ ಕಾದಂಬರಿ ಶೈಲಿಯಲ್ಲಿ ರಚಿಸಿದ ಸಿಕಾ(ಕಾವ್ಯಶ್ರೀ ಮಹಾಗಾಂವಕರ) ಅವರ ಈ ಪ್ರಯೋಗ ಕನ್ನಡದಲ್ಲಿಯೇ ಹೊಸದು. ಈ ರೀತಿಯ ಜೀವನ ಚರಿತ್ರೆಗಳನ್ನು ಬರೆದ ಉದಾಹರಣೆಗಳು ನಮ್ಮ ಕಣ್ಣು ಮಂದಿಲ್ಲ. ಚರಿತ್ರೆಗಳ ದೃಷ್ಟಿಯಿಂದ ಗಮನಿಸಿದಾಗ, ಎಸ್. ಎಲ್. ಭೈರಪ್ಪನವರ ‘ಭಿತ್ತಿ’ ಅವರ ಅತ್ಮಕತೆಯೂ ಹೌದು, ಕಾದಂಬರಿಯೂ ಹೌದು. ಲಂಕೇಶ ಅವರ ‘ಹುಳಿ ಮಾವಿನ ಮರ’ ಹೀಗೆ ಜೀವನ ಚರಿತ್ರೆ ಕ್ಷೇತ್ರದಲ್ಲಿ ಒಂದಿಷ್ಟು ಹೊಸತನಗಳು ಆಗಾಗ ಮೂಡಿದ್ದರೂ, ಸಿಕಾ ಅವರ ಈ ‘ಬ್ಯಾಸರಿಲ್ಲದ ಜೀವ’ ಜೀವನ ಚರಿತ್ರೆ ನಮ್ಮ ಸಮಕಾಲೀನ ವ್ಯಕ್ತಿಯೊಬ್ಬನ ಜೀವನದ ಸಮಸ್ತ ಏರಿಳಿತಗಳನ್ನು ಅತ್ಯಂತ ವಾಸ್ತವ ನೆಲೆಯಲ್ಲಿ ಅರಹುತ್ತ ಹೋಗುತ್ತದೆ. ಇದೇ ಈ ಕೃತಿಯ ವೈಶಿಷ್ಟ್ಯವೆನ್ನಬಹುದು.

ಸಿಕಾ ಅವರು ಬರೆದ ಈ ಕೃತಿ ೨೦೧೯ರಲ್ಲಿ ಮೊದಲ ಮುದ್ರಣ ಕಂಡಿದೆ. ಈಗ ಪ್ರೊ. ಸಿದ್ಧು ಯಾಪಲಪರವಿ ಅವರ ೬೦ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮರುಮುದ್ರಣ ಕಾಣುತ್ತಿದೆ. ಸಿಕಾ ಅವರು ಗುರು-ಶಿಷ್ಯ ಭಾವದಲ್ಲಿ ಈ ಕೃತಿಯನ್ನು ಭಕ್ತಿಯಿಂದ ರಚಿಸಿದ್ದರೂ, ಎಲ್ಲಿಯೂ ಅಸಂಗತಗಳಿಗೆ ಎಡೆಕೊಟ್ಟಿಲ್ಲವೆನ್ನುವುದು ಗಮನಾರ್ಹ ಸಂಗತಿ. ಸಿಕಾ ಅವರಿಗೆ ಸಿದ್ದು ಅವರು ಕಲಿಸದೆಯೇ ಕಲಿಸಿದ ಗುರು. ಅವರ ಲೈಫ ಗುರು ಕಾರ್ಯಕ್ರಮಗಳಿಂದ ಪ್ರಭಾವಿತರಾದವರು. ಸಿದ್ದು ಅವರು ಕರ್ನಾಟಕದ ತುಂಬ ತಮ್ಮ ಮಾತುಗಳಿಂದ ಚಿರಪರಿಚಿತರು. ಅವರು ಮಾಡಿದಷ್ಟು ಭಾಷಣ-ಉಪನ್ಯಾಸಗಳನ್ನು ಪ್ರಾಯಶಃ ಯಾವ ಸ್ವಾಮಿಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮಾಡಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಹೀಗೆ ಅವರ ಮಾತುಗಳಿಂದ ಪ್ರಭಾವಿತರಾದ ಸಿಕಾ ಅವರು ತಮ್ಮ ಬದುಕಿನ ಗುರಿ-ಗಮ್ಯಗಳನ್ನು ಅರಿತುಕೊಂಡವರು. ಹೀಗಾಗಿ ಈ ಜೀವನ ಚರಿತ್ರೆಗೆ ಒಂದು ಅಧಿಕೃತತೆ ಪ್ರಾಪ್ತವಾಗಿದೆ.

- Advertisement -

ನಾಲ್ಕು ಭಾಗ, ೫೨ ಹೆಜ್ಜೆ (ಅಧ್ಯಾಯ)ಗಳಲ್ಲಿ ಬೆಳೆಯುತ್ತ ಹೋದ ಈ ಚರಿತ್ರೆಯಲ್ಲಿ ಪ್ರೊ. ಸಿದ್ದು ಅವರ ೫೫ ವರುಷದ ಸಮಗ್ರ ಬದುಕಿನ ಸಮೃದ್ಧ ಘಟನೆಗಳು ಓದುಗರಲ್ಲಿ ರೋಮಾಂಚನವನ್ನುAಟು ಮಾಡುತ್ತವೆ. ‘ಬಾಲ್ಯ ತಾನಾಗಿತ್ತು’ ಎಂಬ ಮೊದಲ ಭಾಗದಲ್ಲಿ ಪ್ರೊ. ಸಿದ್ದು ಅವರ ಮನೆತನದ ಹಿನ್ನಲೆ, ಅವರ ಬಾಲ್ಯದ ಸ್ಥಿತ್ಯಂತರಗಳನ್ನು ಸಿಕಾ ಅವರು ತುಂಬ ಭಾವನಾತ್ಮಕವಾಗಿ ಚಿತ್ರಿಸಿದ್ದಾರೆ. ಕಾರಟಗಿ ಎಂಬ ಊರಿನ ಯಾಪಲಪರವಿ ಎಂಬ ಶ್ರೀಮಂತ ವ್ಯಾಪಾರಸ್ಥರ ಮನೆತನದಲ್ಲಿ ಜನಿಸಿದ ಸಿದ್ದು ಅವರು ಬಾಲ್ಯದಲ್ಲಿ ಸಿರಿವಂತಿಕೆಯನ್ನು ಉಂಡು ಬೆಳೆಯುತ್ತಲೇ ಬಡತನದ ಬವಣೆಯಲ್ಲಿಯೂ ಸಿಕ್ಕು ಒದ್ದಾಡಿದ್ದು ಬದುಕಿನ ವಿಪರ್ಯಾಸಗಳಲ್ಲಿ ಒಂದು. ಶ್ರೀಮಂತಿಕೆ ಕರಗಿ, ಬಡತನ ಅಡರಿ ಬಂದಾಗ ಅದನ್ನು ಸ್ವೀಕರಿಸುವ ಮನಸ್ಥಿತಿ ಅವರ ಬಾಲ್ಯಾವಸ್ಥೆಗೆ ಇನ್ನೂ ಬಂದಿರಲಿಲ್ಲ. ಹೀಗಿದ್ದೂ ಬಡತನವನ್ನು ಸಮಚಿತ್ತದಿಂದ ಅನುಭವಿಸುತ್ತಲೇ ಬೆಳೆದ ರೀತಿ ಮಾತ್ರ ಅನನ್ಯ. ತಂದೆಯ ಕೈಕೆಳಗೆ ಕೆಲಸ ಮಾಡುತ್ತಿದ್ದವರು, ಬೇರೆ ವ್ಯಾಪಾರ ಕೈಕೊಂಡು, ತಂದೆಗಿಂತಲೂ ಹೆಚ್ಚು ಶ್ರೀಮಂತರಾಗುತ್ತ ಹೋಗುವುದು, ‘ದಣಿ’ ಎನಿಸಿಕೊಂಡ ತಂದೆ ವ್ಯಾಪಾರ ಕ್ಷೇತ್ರದಲ್ಲಿ ಪೂರ್ಣ ಕಳೆದು ಹೋಗುವುದನ್ನು ಕಣ್ಣಾರೆ ಕಾಣುತ್ತಲೇ ಬದುಕಿನ ಪರಮ ಸತ್ಯದ ಅನ್ವೇಷಣೆಗೆ ತೊಡಗಿದ ಸಿದ್ದು ಅವರಿಗೆ ಆ ಕಾಲದಲ್ಲಿ ‘ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ’ ಬಂದವರು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ. ಪೂಜ್ಯರ ಒಡನಾಟದಲ್ಲಿ ಬೆಳೆದ ಸಿದ್ದು ಅವರಿಗೆ ಲೋಕಜ್ಞಾನದ ಅರಿವಾಯಿತು. ಬಾಲ್ಯದಲ್ಲಿ ಜ್ಯೋತಿಷಿ ಒಬ್ಬರು ‘ಇವರಿಗೆ ವಿದ್ಯೆಯಲ್ಲಿ ಗತಿಯಿಲ್ಲ’ ಎಂದು ಬರೆದ ಭವಿಷ್ಯವನ್ನು ಸುಳ್ಳಾಗಿಸುವಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುವಲ್ಲಿ ತೋಂಟದ ಶ್ರೀಗಳ ಮಾತುಗಳೇ ಬೆನ್ನ ಹಿಂದಿನ ಶಕ್ತಿಯಾಗಿ ನಿಂತವು. ಗದುಗಿನ ಗುರುಗಳ ಮಾರ್ಗದರ್ಶನ ಸಿದ್ದು ಅವರು ಧಾರವಾಡ ಕರ್ನಾಟಕ ಕಾಲೇಜಿಗೆ ಅಧ್ಯಯನ ಮಾಡಲು ಬರುವಂತಾಯಿತು. ಧಾರವಾಡದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನ ದೊರೆಯಿತು. ‘ಬಡತನ ತಿಳಿದಿರಲಿ ಆದರೆ ಬಾರದಿರಲಿ’ ಎಂಬ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕಾವ್ಯದ ಸಾಲುಗಳು ಸಿದ್ದು ಅವರಿಗೆ ಬದುಕಿನ ಸೂತ್ರವಾಯಿತು. ಈ ವಿಚಾರವನ್ನು ಲೇಖಕಿ ಸಿಕಾ ಅವರು ತಮ್ಮ ಲೇಖಕರ ಮಾತುಗಳಲ್ಲಿ ಪ್ರಸ್ತಾಪಿಸಿದಂತೆ, ಮೂರು ಜನ ‘ಸಿದ್ಧ’ರ (೧. ತೋಂಟದ ಸಿದ್ಧಲಿಂಗರು, ೨. ಸಿದ್ಧಲಿಂಗ ಪಟ್ಟಣಶೆಟ್ಟಿ, ೩. ಸಿದ್ದು) ಕಳ್ಳುಬಳ್ಳಿಯ ಸಂಬಂಧವನ್ನು ಸ್ವಾರಸ್ಯವಾಗಿ ನಿರೂಪಿಸಿದ್ದಾರೆ.

ಇಂಗ್ಲಿಷ್ ಕಲಿಯಲೇಬೇಕೆಂಬ ಹಠ ತೊಟ್ಟ ಸಿದ್ದು ಅವರು ಕರ್ನಾಟಕ ಕಾಲೇಜಿನಲ್ಲಿ ಅದಕ್ಕಾಗಿ ಪಟ್ಟ ಪರಿಶ್ರಮ, ಅನುಭವಿಸಿದ ಯಾತನೆಗಳ ವಿವರಗಳು ಓದುಗರಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಲ್ಲ, ಅದನ್ನು ಯಾರು ಬೇಕಾದರೂ ಕರಗತ ಮಾಡಿಕೊಳ್ಳಬಹುದು ಎಂಬುದನ್ನು ಈ ಕೃತಿ ಸಾಕ್ಷೀಕರಿಸುತ್ತದೆ. ಧಾರವಾಡದಲ್ಲಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಹೇಮಾ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬದುಕಿನ ಅನೇಕ ಪರಮ ಸತ್ಯಗಳನ್ನು ಅರಿಯುವ ಸಾಹಸ ಇಲ್ಲಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ.

ಬಡತನ ಹಸಿವು ಇವು ಸಿದ್ದು ಅವರ ಜೀವನದಲ್ಲಿ ಕಲಿಸಿದ ಪಾಠಗಳು ಅಪಾರ. ಅದರಲ್ಲೂ ಊಟದ ವಿಷಯದಲ್ಲಿ ಅವರು ತೋರುತ್ತಿದ್ದ ರೀತಿಯನ್ನು ಇಲ್ಲಿ ಓದಿಯೇ ಅನುಭವಿಸಬೇಕು. ಸಿದ್ಧಲಿಂಗ ಪಟ್ಟಣಶೆಟ್ಟಿ ದಂಪತಿಗಳು ಒಂದು ವರ್ಷ ಬಳಸಬಹುದಾದ ತುಪ್ಪವನ್ನು ಒಂದೇ ದಿನದಲ್ಲಿ ಖಾಲಿ ಮಾಡಿದ ಘಟನೆಯಾಗಲಿ, ಕಲಬುರ್ಗಿ ಭಾಗದ ಬೃಹತ್ ಮಹಾಕಾವ್ಯವೊಂದನ್ನು ರಚಿಸಿ ಖ್ಯಾತರಾದ ಸಾಹಿತಿಯೊಬ್ಬರು ಹೇಮಾ ಪಟ್ಟಣಶೆಟ್ಟಿ ಅವರ ಮನೆಗೆ ಬಂದು, ರೊಟ್ಟಿ ತಿಂದು, ಕಲಿಸಿದ ಹಿಟ್ಟೆಲ್ಲ ಆದಾಗ, ಇರಲಿ ಬಿಡವ್ವಾ ಶಿವಾನಂದ ಗಾಳಿ ಊಟಕ್ಕೆ ಹೇಳಿದ್ದಾನೆ ಅಲ್ಲಿ ಹೋಗುವೆ ಎಂಬ ಮಾತುಗಳು ಓದುಗರಲ್ಲಿ ನಗೆಯ ಜೊತೆಗೆ, ವಾಸ್ತವ ಸತ್ಯಗಳನ್ನು ತಿಳಿಸುತ್ತವೆ.

‘ಶಿಕ್ಷೆಯಾದ ಶಿಕ್ಷಣ’ ಎಂಬ ಎರಡನೆಯ ಭಾಗದಲ್ಲಿ ಸಿದ್ದು ಅವರ ಗೆಳೆಯರಲ್ಲಿ ಕೆಲವರು ಪ್ರೀತಿ ಪ್ರೇಮದ ಸೆಳೆತಕ್ಕೆ ಒಳಗಾಗಿದ್ದು, ಬಾಲ್ಯದ ವಯೋ ಸಹಜ ಪ್ರವೃತ್ತಿಗಳ ಕುರಿತು ಮುಕ್ತಮನದಿಂದ ಸಿಕಾ ಅವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಬಡತನ ಕಾರಣವಾಗಿ ಬದುಕಿನಲ್ಲಿ ಒಂದು ನೆಲೆ ಕಾಣಬೇಕು, ಇಂಗ್ಲಿಷನ್ನು ವಶ ಮಾಡಿಕೊಳ್ಳಬೇಕೆಂಬ ಏಕೈಕ ಛಲದಿಂದ ಇಂತಹ ಪ್ರೀತಿ ಪ್ರಣಯದ ಜಂಜಾಟಕ್ಕೆ ಒಳಗಾಗದೆ, ಗುರಿ ಕಂಡುಕೊಂಡಿದ್ದು ನಿಜಕ್ಕೂ ನಮ್ಮ ಇಂದಿನ ಯುವಪೀಳಿಗೆಗೆ ಆದರ್ಶಮಯ ವಿಚಾರವಾಗಿದೆ. ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಅಧ್ಯಯನ ಮುಗಿಸಿದ ನಂತರ, ಸಾಂಗ್ಲಿಯ ವಿಂಗಲ್ಡನ್ ಕಾಲೇಜಿಗೆ ಹೋಗಿ ಎಂ.ಎ. ಪದವಿ ಪಡೆದ ವಿವರಗಳು ಇಲ್ಲಿ ರಸವತ್ತಾಗಿ ನಿರೂಪಣೆಗೊಂಡಿವೆ. ಸಾಂಗ್ಲಿ ಈ ಕಾಲೇಜು ಒಂದು ಕಾಲಕ್ಕೆ ರಂ.ಶ್ರೀ. ಮುಗಳಿ ಅವರಿಂದ ಉಭಯ ರಾಜ್ಯಗಳಲ್ಲಿ ಖ್ಯಾತಿಗೊಂಡಿತ್ತು, ಇಂತಹ ಪ್ರತಿಷ್ಠಿತ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದ ಸಿದ್ದು ಅವರು ತಮ್ಮ ಕೈಬರಹದ ಕಾರಣಕ್ಕಾಗಿ ಕಡಿಮೆ ಅಂಕ ಪಡೆದ ವಿವರಗಳು ಓದುಗರಲ್ಲಿ ಸಹಾನುಭೂತಿಯನ್ನು ಉಂಟು ಮಾಡುತ್ತವೆ. ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ಹೆಮ್ಮೆಯಿಂದ ಮರಳಿ ಬಂದ ಸಿದ್ದು ಅವರು ಉದ್ಯೋಗಕ್ಕಾಗಿ ಅಲೆದಾಟ ಪ್ರಾರಂಭಿಸುತ್ತಾರೆ.

‘ಹೊಟ್ಟೆ ಪಾಡು’ ಎಂಬ ಮೂರನೆಯ ಭಾಗದಲ್ಲಿ ಅವರು ಉದ್ಯೋಗವನ್ನು ಹುಡುಕಿಕೊಂಡು ಚಿತ್ರದುರ್ಗ, ಗದಗ ಜೆ.ಟಿ. ಕಾಲೇಜು ಮೊದಲಾದ ಕಡೆ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಚಿತ್ರದುರ್ಗದ ಅನುದಾನಿತ ಶಿಕ್ಷಣ ಸಂಸ್ಥೆಯ ಮಾಲೀಕರು ನಾಯಿಗೆ ಬ್ರೆಡ್ ಹಾಕುತ್ತಲೇ ನೌಕರರನ್ನು ಮಾತನಾಡಿಸುವ ಒಂದು ಪ್ರಸಂಗವನ್ನು ಸಿಕಾ ಅವರು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ. ಈ ಮಾಲೀಕರ ಧೋರಣೆಗೆ ಬೇಸತ್ತು, ಮರಳಿ ಗದಗ ಕೆ.ಎಲ್.ಇ. ಸಂಸ್ಥೆಯಲ್ಲಿ ಕೆಲವು ವರ್ಷ ಸೇವೆ ಮಾಡಿದರು. ಅಲ್ಲಿ ಅನುದಾನ ಸಂಹಿತೆಗೆ ಒಳಗಾಗುವ ಯೋಗ ಅವರಿಗೆ ಬರಲಿಲ್ಲ, ಕೊನೆಗೆ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿ, ಗೋವಿಂದಗೌಡರು ಶಿಕ್ಷಣ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಿದ್ದು ಅವರು ವೃತ್ತಿ ಭದ್ರತೆಗೆ ಒಳಗಾಗಿ ಸರಕಾರದ ವೇತನ ಪಡೆಯುವಂತಾದ ಘಟನೆ ನಿಜಕ್ಕೂ ಅವರ ಹೋರಾಟದ ಬದುಕಿನ, ಹೊಟ್ಟೆ ಪಾಡಿನ ತಳಮಳಗಳನ್ನು ತಿಳಿಸುತ್ತದೆ. ಗೋವಿಂದಗೌಡ, ಪಟೇಲರಂತಹ ಪ್ರಾಮಾಣಿಕ ರಾಜಕಾರಣಿಗಳು ಒಂದು ಪೈಸೆ ಹಣ ಪಡೆಯದೆ, ಕೇವಲ ಒಂದು ಸೇಬು ಹಣ್ಣು ಸ್ವೀಕರಿಸಿದ ಘಟನೆಯಂತೂ ಇಂದಿನ ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಶಿಕ್ಷಕ ವೃತ್ತಿಗೆ ಸೇರಿದಾಗ ಸೈಕಲ್ ಮೇಲೆ ಹೋದಾಗ, ವಿದ್ಯಾರ್ಥಿಗಳು ‘ನೀವು ನಡೆದುಕೊಂಡೇ ಬರ್ರಿ ಸರ್’ ಎಂದು ಹೇಳುವ ಘಟನೆ, ಪ್ರಥಮ ಸಲ ವರ್ಗಕೋಣೆಯಲ್ಲಿ ಷೇಕ್ಸಪಿಯರ್ನ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ ಘಟನೆ ಮೊದಲಾದ ಹಲವು ವಿಸ್ಮಯಗಳ ಸಂಗಮ ಈ ಭಾಗದಲ್ಲಿದೆ.

‘ಬದುಕು ಕಲಿಸಿದ ಪಾಠ’ ಎಂಬ ನಾಲ್ಕನೆಯ ಭಾಗದಲ್ಲಿ, ಸಿದ್ದು ಅವರು ವೃತ್ತಿ ಭದ್ರತೆ ಪಡೆದ ನಂತರವೂ ಸಾರ್ವಜನಿಕ ಜೀವನದಲ್ಲಿ ಕಂಡ ಕೆಲವು ಕಟುವಾಸ್ತವ ಅನುಭವಗಳ ಸರಮಾಲೆ ಇಲ್ಲಿದೆ. ‘ಪ್ರತಿಭೆಯೋ, ಪ್ರಚಾರದ ತೆವಲೋ, ಯೌವ್ವನದ ಮದವೋ ಅರ್ಥ ಇಲ್ಲದೆ ಓಡಾಡಿದೆ’ (ಪು. ೧೫೮) ಎಂದು ತಮ್ಮ ಜೀವನ ಒಂದು ಕಡೆ ನೆಲೆನಿಲ್ಲದೆ, ಹತ್ತು ಹಲವು ಕ್ಷೇತ್ರಗಳತ್ತ ಹರವು ಪಡೆದದ್ದನ್ನು ಲೇಖಕರ ಮುಂದೆ ಸ್ವತಃ ಸಿದ್ದು ಅವರೇ ಹೇಳುತ್ತಾರೆ. ‘ಓಡಾಟ, ಹೋರಾಟ ಇರದಿದ್ದರೆ ನನ್ನ ಬದುಕು ಇಷ್ಟೊಂದು ಕಲರ್ಫುಲ್ ಆಗುತ್ತಿರಲಿಲ್ಲ’(ಪು. ೧೩೫) ಎಂದು ವಿವರಿಸುತ್ತಾರೆ, ಒಂದು ರೀತಿಯಲ್ಲಿ ಬೆಳ್ಳಗಿರುವುದೆಲ್ಲ ಹಾಲೆಂದು ತಟ್ಟನೆ ನಂಬಿದ ಪರಿಣಾಮವಾಗಿ ಅನುಭವಿಸಿದ ನೋವು ಸಂಕಟ, ಯಾತನೆಗಳ ವಿವರಗಳು ಇಲ್ಲಿ ಬಹಳಷ್ಟು ಪ್ರಸ್ತಾಪವಾಗಿವೆ. ‘ಯಾಪಲ್ಸ್ ಶೋಟೈಮ್’ ಎಂಬ ಮುಖಾಮುಖಿ ಸಂದರ್ಶನದ ಪರಿಕಲ್ಪನೆ ಇಡೀ ನಾಡಿನಲ್ಲಿ ಸಂಚಲನವನ್ನುಂಟು ಮಾಡಿತು, ಇವರ ಈ ಪ್ರಯೋಗದ ಮಾದರಿಯನ್ನೇ ಅನುಕರಿಸಿ ಉದಯ ಟಿ.ವಿ.ಯಲ್ಲಿ ತೇಜಸ್ವಿನಿ ಅವರು ರಾಜಕಾರಣಿಗಳನ್ನು ಸಂದರ್ಶಿಸಿದ್ದು ಈಗ ಇತಿಹಾಸ. ಹೀಗೆ ‘ಯಾಪಲ್ಸ್ ಶೋಟೈಮ್’ ನೇರ ಮುಖಾಮುಖಿ ಸಂದರ್ಶನದಲ್ಲಿ ಒಮ್ಮೆ ಗದುಗಿನ ಜಗದ್ಗುರುಗಳನ್ನು ಆಹ್ವಾನಿಸಿ, ಮೊದಲ ಪ್ರಶ್ನೆಯಾಗಿಯೇ ‘ಸ್ವಾಮೀಜಿ ತಮ್ಮದು ಬಂಗಾರದಂತಹ ಸ್ವಭಾವ, ಆದರೆ ಹಿತ್ತಾಳೆ ಕಿವಿ’ ಎಂಬ ಅಭಿಪ್ರಾಯ ಇದೆಯಲ್ಲ ಎಂದು ಕೇಳಿದಾಗ, ಸ್ವತಃ ಸ್ವಾಮೀಜಿ ತಬ್ಬಿಬ್ಬಾಗುತ್ತಾರೆ. ಈ ಒಂದು ಪ್ರಶ್ನೆ ಕಾರಣವಾಗಿ, ಮಠದಲ್ಲಿದ್ದ ಕೆಲವರು ಶ್ರೀಗಳಿಂದ ಸಿದ್ದು ಅವರನ್ನು ದೂರ ಮಾಡುವ ಪ್ರಯತ್ನ ಮಾಡುತ್ತಾರೆ. ೧೯೯೯ರಲ್ಲಿ ಶ್ರೀಗಳ ಪೀಠಾಧಿಕಾರ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಸಿದ್ದು ಅವರನ್ನು ಮಠದಿಂದ ದೂರವಿಡುವ ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತದೆ. ಗುರು-ಶಿಷ್ಯರ ನಡುವೆ ತಂದಿಟ್ಟು ಮೋಜು ನೋಡುವ ಜನರ ನಡುವೆಯೇ ಸಿದ್ದು ಅವರು ತಮ್ಮ ಇನ್ನಿತರ ಪ್ರತಿಭಾ ಕಾರ್ಯಗಳ ಮೂಲಕ ಎತ್ತರೆತ್ತರ ಬೆಳೆಯುತ್ತ ಸಾಗುತ್ತಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗುತ್ತಾರೆ. ಎಂ.ಪಿ. ಪ್ರಕಾಶರಂತಹ ಪ್ರಜ್ಞಾವಂತ ರಾಜಕಾರಣಿಗಳ ಒಡನಾಟದಲ್ಲಿ ಅನೇಕ ಸಂಗತಿಗಳನ್ನು ಅರಿತುಕೊಳ್ಳುತ್ತಾರೆ. ತೋಂಟದಾರ್ಯ ಶ್ರೀಗಳು ಒಳಗೊಳಗೆ ಪ್ರೀತಿ ಅಂತಃಕರಣ ತುಂಬಿಕೊಂಡಿದ್ದವರು. ಮತ್ತೆ ವೈಮನಸ್ಸು ತಿಳಿಯಾಗಿ, ಗುರು-ಶಿಷ್ಯರು ಒಂದಾಗುತ್ತಾರೆ, ಮಠದ ಕಾರ್ಯಕ್ರಮದಲ್ಲಿ ಮತ್ತೆ ಭಾಗವಹಿಸುವಂತಾಗುತ್ತದೆ. ಹಾಲಿನಂತಹ ಸಂಬಂಧಗಳಿಗೆ ಹುಳಿ ಹಿಂಡುವ ಕುತ್ಸಿತ ಮನಸ್ಸುಗಳು ಎಲ್ಲೆಡೆ ಇರುತ್ತವೆ. ಆದರೆ ಎಲ್ಲವನ್ನೂ ಮುಗ್ಧವಾಗಿ ನಂಬುವ ಸಿದ್ದು ಅವರು ಅನೇಕ ಸಂದರ್ಭಗಳಲ್ಲಿ ದುಷ್ಟ ಜನರ ಒಳಗೊಂದು-ಹೊರಗೊಂದು ನಿಲುವುಗಳನ್ನು ಗಮನಿಸಿದಾಗ ನೋವು ಅನುಭವಿಸುತ್ತಾರೆ. ಇಂತಹ ಅನೇಕ ಘಟನೆಗಳು ಇಲ್ಲಿ ಸಿದ್ದು ಅವರ ಮುಗ್ಧ ಮನಸ್ಸು, ಎಲ್ಲವನ್ನೂ ಸದ್ಭಾವದಿಂದ ನಂಬುವ ಗುಣ, ಹಗಲೊಂದು ಮಾತಾಡಿ, ರಾತ್ರಿ ಬದಲಾಗುವ ದುಷ್ಟ ಜನರ ಸ್ವಭಾವ-ನಿಲವು ತಿಳಿಯದ ಸಂಗತಿಗಳನ್ನು ಓದಿದಾಗ ಮನಸ್ಸು ಭಾರವಾಗುತ್ತದೆ.

‘ಆದರ್ಶ ಯಾವತ್ತು ವೇದಿಕೆಗಳ ಅಲಂಕಾರವಾಗದೆ ಬದುಕಿನ ಮೌಲ್ಯಗಳು ಆಗಬೇಕೆನ್ನುವುದು ಸಿದ್ದು ಸಿದ್ಧಾಂತ. ಅದನ್ನು ತನ್ನ ಬದುಕಿನಲ್ಲಿ ನಡೆಸಿಯೂ ತೋರಿಸಿದ. ಹಾಗೆ ಮಾಡಲು ಸಾಧ್ಯವಿಲ್ಲದೆ ಹೋದರೆ, ಆಗುವುದಿಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು ಎನ್ನುವುದು ಅವನ ಅಭಿಮತ’ (ಪು. ೧೪೫) ಎಂಬ ಲೇಖಕಿ ಸಿಕಾ ಅವರ ಮಾತುಗಳು, ಸಿದ್ದು ಅವರ ಜೀವನದ ಆದರ್ಶ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತವೆ, ನುಡಿದಂತೆ ನಡೆಯುವ ಮನೋಧರ್ಮವನ್ನು ತಿಳಿಸುತ್ತವೆ.

ಸಿದ್ದು ಅವರ ೫೫ ವರುಷಗಳ ಜೀವನದ ಎಲ್ಲ ಏರಿಳಿತಗಳನ್ನು ಸಾವು ನೋವುಗಳು ಬಂದಾಗ ಅವರು ಅನುಭವಿಸಿದ ನೋವು, ತಮ್ಮ ಭಾಷಣಗಳಿಂದ ಸಾವಿರಾರು ಯುವಕರು ಪ್ರೇರಣೆ ಪಡೆದ ಸಂತೋಷ ಹೀಗೆ ಸುಖ-ದುಃಖಗಳನ್ನು ಏಕಘನಾಕೃತಿಯ ನಿಲುವಿನಿಂದ ನಿರೂಪಿಸುವ ಸಿಕಾ ಅವರ ಪ್ರಯತ್ನ ತುಂಬ ಯಶಸ್ವಿಯಾಗಿದೆ.

ಈಗ ನಿವೃತ್ತಿಯ ಜೀವನದಲ್ಲಿ ಮತ್ತೆ ಉತ್ಸಾಹದಿಂದ ಪುಟಿದೇಳುತ್ತಿರುತ್ತಿರುವ ಸಿದ್ದು ಸರ್ ಅವರ ಷಷ್ಟ್ಯಬ್ದ ಸಂದರ್ಭದಲ್ಲಿ ಸಿಕಾ ಅವರ ಈ ಕೃತಿ ಮರುಮುದ್ರಣವಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ. ಲೇಖಕಿ ತಮ್ಮ ಮಾತುಗಳಲ್ಲಿ ಎರಡನೆಯ ಮುದ್ರಣದ ಸಂದರ್ಭದಲ್ಲಿ ಸಿದ್ದು ಅವರ ಇತ್ತೀಚಿನ ಐದು ವರ್ಷಗಳ ಸಾಧನೆಯ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಕೃತಿಯಲ್ಲಿ ಒಂದು ಸಣ್ಣ ಕೊರತೆಯೆಂದರೆ, ಅವರು ಕವಿಯಾಗಿ ‘ನೆಲದ ಮರೆಯ ನಿಧಾನ’, ‘ಎತ್ತಣ ಮಾಮರ ಎತ್ತಣ ಕೋಗಿಲೆ’ ಪ್ರವಾಸ ಕಥನ, ‘ಅಸಂಗತ ಬರಹಗಳು’, ‘ಹಗಲಿನಲ್ಲಿಯೇ ಸಂಜೆಯಾಯಿತು’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಕಲಬುರ್ಗಿ, ರವಿ ಬೆಳೆಗೆರೆ ಅವರ ಪ್ರೋತ್ಸಾಹದಾಯಕ ಮಾತುಗಳಿಂದ ಬರಹಕ್ಕೆ ತೊಡಗಿದ ಸಿದ್ದು ಅವರ ಸಾಹಿತ್ಯ ಬರಬೇಕಾದ ಪ್ರಮಾಣದಲ್ಲಿ ಬರದಿದ್ದರೂ, ಈಗ ಬಂದುದ್ದೆಲ್ಲವೂ ಅಪ್ಪಟ ಬಂಗಾರ. ಈ ಸಾಹಿತ್ಯದ ಮೌಲ್ಯಮಾಪನವನ್ನು ಒಂದಿಷ್ಟು ಮಾಡಿದ್ದರೆ ಕೃತಿ ಪರಿಪೂರ್ಣವಾಗುತ್ತಿತ್ತು ಎಂಬುದು ನನ್ನ ಆಶಯ.

ಎಷ್ಟೋ ಜನ ಭಾಷಣ ಮಾಡುತ್ತಾರೆ, ಅವರಿಗೆ ಬರಹ ಸಿದ್ಧಿಸಿರುವುದಿಲ್ಲ, ಎಷ್ಟೋ ಜನ ಚೆನ್ನಾಗಿ ಬರೆಯುತ್ತಾರೆ (ಉದಾ: ಕುವೆಂಪು, ಆರ್. ಸಿ. ಹಿರೇಮಠ) ಆದರೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ, ಆದರೆ ಸಿದ್ದು ಅವರು ಬರಹ-ಭಾಷಣ ಉಭಯ ಕ್ಷೇತ್ರದಲ್ಲಿ ಸವ್ಯಸಾಚಿ ವ್ಯಕ್ತಿತ್ವ ಹೊಂದಿದವರು. ಪ್ರತಿ ದಿನ ಅವರು ಫೆಸ್ಬುಕ್ನಲ್ಲಿ ಹೇಳುವ ಪ್ರೇರಣಾದಾಯಕ ನುಡಿಗಳು ಕನ್ನಡದ ಲಕ್ಷಾಂತರ ಯುವಕರ ಮನಸ್ಸನ್ನು ಸೂರೆಗೊಂಡಿವೆ. ಇಂತಹ ಒಬ್ಬ ಲೈಫ್ ಗುರುವಿನ ಜೀವನದ ಒಟ್ಟು ನೋಟವನ್ನು ಏಕವಚನದಲ್ಲಿ ಪ್ರಯೋಗಿಸಿದ್ದು ಓದುಗರಲ್ಲಿ ಒಂದು ಆಪ್ತ ಭಾವವನ್ನು ಮೂಡಿಸುತ್ತದೆ. ನಮ್ಮ ಮನೆಯ ಹಿರಿಯಣ್ಣ, ತಂದೆಯೊಬ್ಬನ ಬದುಕನ್ನು ನಾವೇ ಕಣ್ಣುಮುಂದೆ ಕಾಣುತ್ತಿದ್ದೇವೆ ಎಂಬ ಭಾವ ಓದುಗರಲ್ಲಿ ಮೂಡುತ್ತದೆ. ಖಂಡಿತವಾಗಿಯೂ ಈ ಚರಿತ್ರೆ, ಇಂದಿನ ಯುವಪೀಳಿಗೆಯ ನಿರಾಶಾವಾದ ಅನುಭವಿಸುವ ಅನೇಕರಿಗೆ ಒಂದು ಮೌಲಿಕ ಮಾರ್ಗದರ್ಶನ ಕೃತಿಯಾಗಿ ರೂಪುಗೊಂಡಿದೆ.

ಲೇಖಕಿ ಸಿಕಾ ಅವರು ಪ್ರಾರಂಭದಲ್ಲಿಯೇ ಹೇಳಿದಂತೆ, ಇದು ಜೀವನ ಚರಿತ್ರೆ, ಕಥನ, ಕಾದಂಬರಿ ಹೀಗೆ ಮೂರೂ ಆಯಾಮಗಳನ್ನು ಏಕಕಾಲಕ್ಕೆ ತೆಕ್ಕೆಗೆ ತೆಗೆದುಕೊಂಡುಕೊಂಡಿರುವುದರಿಂದ, ಚಿಕ್ಕ ಚಿಕ್ಕ ಅಧ್ಯಾಯಗಳಿರುವುದರಿಂದ ಓದುಗರಿಗೆ ಎಲ್ಲಿಯೂ ಬೇಸರ ಬರದ ಹಾಗೆ, ತಮ್ಮ ಅಪ್ರತಿಮ ನಿರೂಪಣಾ ಶೈಲಿಯಿಂದ ಓದುಗರಲ್ಲಿ ಸ್ಫೂರ್ತಿ-ಚೈತನ್ಯವನ್ನು ತುಂಬುವ ಗುಣ ಹೊಂದಿದೆ. ಅಂತೆಯೆ ಲೇಖಕಿ ಸಿಕಾ ಅವರ ಇಂತಹ ಪ್ರಯೋಗ ಪ್ರಯತ್ನಗಳು ನಿತ್ಯ ನಿರಂತರವಾಗಲಿ ಎಂದು ಆಶಿಸುವೆ.

ಈ ಕೃತಿಯ ಮೊದಲ ಪ್ರಕಾಶನ ಮಾಡಿದವರು ಸೃಷ್ಟಿ ನಾಗೇಶ, ಈಗ ಈ ಕೃತಿಯನ್ನು ರೇಖಾ ಯಾಪಲಪರವಿ ಅವರು ತಮ್ಮ ಸಾಂಗತ್ಯ ಪ್ರಕಾಶನದ ಮೂಲಕ ಮರುಮುದ್ರಣ ಮಾಡುತ್ತಿದ್ದಾರೆ. ಸಾಂಗತ್ಯದ ಮೂಲಕ ಈ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿಯೂ ಪುಸ್ತಕಗಳಿಗೆ ಸಾವಿಲ್ಲ ಎಂಬುದನ್ನು ತೋರಿಸುವ ಒಂದು ವಿನಮ್ರ ಪ್ರಯತ್ನ ಇಲ್ಲಿದೆ.

ಪ್ರೊ. ಸಿದ್ದು ಅವರು ಈಗ ನಿವೃತ್ತಿಯ ಜೀವನಕ್ಕೆ ಕಾಲಿಡುತ್ತಿದ್ದಾರೆ, ಅವರೇ ಮಾಡಿಮುಗಿಸಬೇಕಾದ ಕೆಲಸಗಳು, ಯೋಜನೆಗಳು ಸಾಕಷ್ಟಿವೆ. ಅವರಿಂದ ಕನ್ನಡ ಸಾಹಿತ್ಯ-ಕಲಾ ಜಗತ್ತು ಸಿರಿವಂತಗೊಳ್ಳಲಿ, ಅವರ ಮಾತುಗಳಿಂದ ಲಕ್ಷಾಂತರ ಕನ್ನಡಿಗರು ತಮ್ಮ ಕತ್ತಲೆಮಯ ಜಗತ್ತಿನಲ್ಲಿ ಬೆಳಕು ಕಾಣುವಂತಾಗಲಿ ಎಂದು ಬಯಸುವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: 9902130041

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group