- Advertisement -
ಹುಡುಕುತ್ತಿರುವೆ
———————-
ಸೂರ್ಯ ಉದಯಿಸುತ್ತಾನೆ
ಈಗ ಕೋಳಿ ಕೂಗುವದಿಲ್ಲ.
ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿ
ರೈಲು ಬಸ್ ಆಟೋದಲ್ಲಿ ಪಯಣ
ಕಾರ್ಖಾನೆಗೆ ಜನರ ಜಂಗುಳಿ.
ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್
ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.
ನಗುವುದೇ ಕಡಿಮೆ .
ದುಗುಡ ತಳಮಳ ಆತಂಕ .
ದೇಶದಲ್ಲಿ ಬರ ಬಡತನ
ಸುದ್ದಿ ಮಾಧ್ಯಮಗಳ ಅಬ್ಬರ .
ದಿನಸಿ ಅಂಗಡಿಯ ಮುಂದೆ ಸಾಲು.
ಗುಡಿ ಮಸೀದೆ ಚರ್ಚು ಭಿಕ್ಷುಕರು.
ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.
ಕಳೆದುಕೊಂಡಿದ್ದೇವೆ ಜೀವ ಜಾಲವ
ಕಾಣುತ್ತಿಲ್ಲ ಸಂತಸ ನೆಮ್ಮದಿ ದಿನಗಳು.
ಹುಡುಕುತ್ತಿರುವೆ ನನ್ನ ನಾನು
ಹೊಲದ ಗದ್ದೆಯ ಮಧ್ಯೆ
ಅಚ್ಚ ಹಸುರಿನ ಪೈರು
ಕೆರೆ ತುಂಬಿದ ನೀರು .
ಪಕ್ಷಿ ಇಂಚರ ಧ್ವನಿಯ ಕೊರಳು .
ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ
—————————————-
ಡಾ.ಶಶಿಕಾಂತ.ಪಟ್ಟಣ, ಪುಣೆ