spot_img
spot_img

ನೆನಪಿರಲಿ,ಉಪಯೋಗಿಸಿ ಎಸೆಯುವ ಸರಕುಗಳಲ್ಲ ಈ ಸಂಬಂಧಗಳು!

Must Read

spot_img
- Advertisement -

ಈಗಿನ ದಾವಂತದ ಬದುಕಿನಲ್ಲಿ ಸಂಬಂಧಗಳನ್ನು ನಿಭಾಯಿಸುವುದೇ ಒಂದು ದೊಡ್ಡ ತಲೆನೋವಾಗಿ ಬಿಟ್ಟಿದೆ. ಪ್ರತಿ ಸಂಬಂಧಗಳ ನಿಭಾವಣೆಯೂ ಹಗ್ಗದ ಮೇಲೆ ನಡೆದಂತೆನಿಸುತ್ತಿದೆ ಎಂಬುದು ಬಹುತೇಕರ ಅಭಿಪ್ರಾಯ.

ಮೊದಲೆಲ್ಲ ಸಂಬಂಧಗಳಲ್ಲಿ ಮಧುರತೆಯ ಪರಿಮಳವಿರುತ್ತಿತ್ತು. ನೀನಿಲ್ಲದೇ ನಾನಿಲ್ಲವೆಂಬ ಭಾವ ಎದೆಯ ಬಾಗಿಲಲ್ಲಿ ನೇತಾಡುತ್ತಿತ್ತು. ಸಂಬಂಧ ಯಾವುದೇ ಇರಲಿ ಅದನ್ನು ನಾವು ಸಹನೆಯಿಂದಲೇ ನಿಭಾಯಿಸಬೇಕು. ತಾಳ್ಮೆಯಿಲ್ಲದೇ ಇದ್ದರೆ ನಾವು ಒಬ್ಬರನ್ನು ನೋಯಿಸಿದರೆ ನಮ್ಮನ್ನು ನೋಯಿಸಲು ಮತ್ತೊಬ್ಬರು ಇರುತ್ತಾರೆ. ನಾವು ಯಾವಾಗ ಸಂಬಂಧಗಳನ್ನು ಉಪಯೋಗಿಸಿ ಎಸೆಯುವ ಸರಕುಗಳ ತರಹ ನೋಡಲು ಆರಂಭಿಸಿದೆವೋ ಆಗಿಂದ ಸಿಹಿ ನೀಡುವ ಮಧುರ ಬಂಧಗಳೆಲ್ಲ ಕಹಿ ಅನುಭವಗಳ ಸರಣಿಯನ್ನೇ ಮನ ತುಂಬಿಸ ತೊಡಗಿವೆ.

ಈ ಹಿಂದೆ ಗಟ್ಟಿಯಾದ ಬಂಧಗಳು ಇದ್ದವು. ಅವು ಬದುಕಿನ ಒಳಿತಿಗೆ ಮಾತ್ರ ಥಳಕು ಹಾಕಿಕೊಂಡಿದ್ದವು. ಸಂಬಂಧಗಳು ಮನವನ್ನು ಮುದಗೊಳಿಸುತ್ತವೆ. ಬದುಕನ್ನು ಹಸನಾಗಿಸುತ್ತವೆ. ಎಂಬಂಥ ಸಂಗತಿಗಳನ್ನು ನಮ್ಮ ಹಿರಿಯರ ಬದುಕಿನಿಂದ ಕಂಡುಕೊಂಡಾಗಿದೆ. ಹಲವಾರು ಸಂದರ್ಭಗಳಲ್ಲಿ ಕೊಂಡಾಡುವಂತೆಯೂ ಆಗಿದೆ. ಅದಲ್ಲದೇ ಇದು ಸಾವಿರಾರು ವರ್ಷಗಳಿಂದ ಅನೂಚಾನವಾಗಿ ದಾಖಲಾದ ಸಂಗತಿಯೂ ಹೌದು. ಈ ದಿಸೆಯಲ್ಲಿ ಏಕತೆಯ ಸೂತ್ರದಲ್ಲಿ ಬಂಧಿಸುವ ಬಂಧಗಳನ್ನು ಸಾಂಪ್ರದಾಯಿಕ ಪರಿಕರಗಳಂತೆ ಪರಿಗಣಿಸುವುದೇ ಸೂಕ್ತವೆನಿಸುತ್ತದೆ. ಸಂಬಂಧಗಳು ನಾವು ಕಲ್ಪಿಸಿಕೊಳ್ಳಲಾಗದ ವಿಚಿತ್ರ ಸಂಕೀರ್ಣತೆಯನ್ನು ಹೊತ್ತು ತರುತ್ತಿವೆ. ಬನ್ನಿ ಹಾಗಾದರೆ ಅವುಗಳ ನಿಭಾವಣೆ ಹೇಗೆ ಸುಲಭ ಸಾಧ್ಯವಾಗಿಸುವುದು ನೋಡೋಣ.

- Advertisement -

ಕೃತಕ ಬಣ್ಣದ ಹೊದಿಕೆ ಹೊದಿಸಬೇಡಿ
ಈ ನಡುವೆ ವೈಜ್ಞಾನಿಕ ಸೌಲಭ್ಯಗಳಿಗೆ ಎಲ್ಲಿಲ್ಲದ ಮನ್ನಣೆ ನೀಡುತ್ತಿದ್ದೇವೆ. ಇಷ್ಟ ಕಷ್ಟಗಳನ್ನು ತಿಳಿದು ಹೆಜ್ಜೆಯಲ್ಲಿ ಹೆಜ್ಜೆ ಹಾಕುವ ಸಹಜೀವಿಗಳನ್ನು ಕಡೆಗಣಿಸುತ್ತಿದ್ದೇವೆ. ನಮ್ಮೊಂದಿಗೆ ಸಹಬಾಳ್ವೆ ನಡೆಸುವವರನ್ನು ಮನಸೋ ಇಚ್ಛೆ ನಡೆಸಿಕೊಂಡರೆ ಕೆಡುಕು ಕಟ್ಟಿಟ್ಟ ಬುತ್ತಿ. ವಾಸ್ತವದಲ್ಲಿ ಕಹಿಯಾಗಿರುವ ಬಂಧಗಳಿಗೆ ತೋರಿಕೆಯ ಸಲುವಾಗಿ ಕೃತಕ ಬಣ್ಣದ ಹೊದಿಕೆಗಳನ್ನು ಹೊದಿಸುವುದು ಎಷ್ಟು ಸರಿ? ಎಂಬುದನ್ನು ನಾವು ಯೋಚಿಸಲೇಬೇಕಾಗಿದೆ. ಒಂದುಗೂಡಿ ಬದುಕುವುದು ಸರಳ ಸಿದ್ದಾಂತ. ವೈಯಕ್ತಿಕ ಬೆಳವಣಿಗೆ ಹಾಗೂ ಸ್ವ ಸಂತೋಷಕ್ಕಾಗಿ ಜೀವನವನ್ನು ಶ್ರೀಮಂತಗೊಳಿಸಬಲ್ಲ ಸಾಮಥ್ರ್ಯ ವರ್ಧಿಸಬಲ್ಲ ಬಂಧಗಳನ್ನು ಧಿಕ್ಕರಿಸುವುದು ಎಳ್ಳಷ್ಟೂ ಸರಿಯಲ್ಲ. ತೀವ್ರಗತಿಯಲ್ಲಿ ಸಾಗುತ್ತಿರುವ ಕಾಲದಲ್ಲಿ ಸಂತಸ ಬದುಕಿನ ಅರಿವಾಗಬೇಕಾದರೆ ಸಂಬಂಧಗಳ ಎಳೆಯನ್ನು ನಾಜೂಕಾಗಿ ಜತನದಿಂದ ಕಾಪಿಟ್ಟುಕೊಳ್ಳಬೇಕು.

ಬೆಲ್ಲದಂತೆ ಭಾವಿಸಿ
ಸಂಬಂಧಗಳು ಕಣ್ಣೆದುರಿನ ಕನ್ನಡಿಯಿದ್ದಂತೆ. ನಮ್ಮ ಗುಣ ಸ್ವಭಾವಗಳ ಪ್ರತಿಬಿಂಬ ತೋರುತ್ತವೆ. ನಕ್ಕರೆ ಖಂಡಿತ ನಗುತ್ತವೆ ಆದರೆ ಅತ್ತರೆ ಅಳದೆಯೂ ಇರಬಹುದು. ಕೆಲವೊಮ್ಮೆ ಅಳುವಾಗ ಕಣ್ಣೀರು ಒರೆಸುವ ಕೈ ಬೆರಳುಗಳಾಗಿ ಮನಸ್ಸಿಗೆ ಸಾಂತ್ವನ ನೀಡಬಹುದು. ದಿನಂಪ್ರತಿಯ ಬದುಕು ಹೂವೆತ್ತಿದಂತೆ ಸರಳವೆನಿಸಬೇಕೆಂದರೆ ಎದುರುಗಿನ ಜೀವಗಳನ್ನು ಹೆಚ್ಚು ಕಹಿಯಿರುವ ಬೇವಿನಂತೆ ಭಾವಿಸಬಾರದು. ಪ್ರತಿಯಾಗಿ ಅಧಿಕ ಸಿಹಿಯಾದ ಬೆಲ್ಲದಂತೆ ಭಾವಿಸಿ, ಬಾಚಿ ತಬ್ಬಿಕೊಳ್ಳಬೇಕು. ಕೆಲವೊಂದು ಬಾರಿ ಕಹಿ ಉಣಿಸುವ ಜೀವಗಳು ಒಳ್ಳೆಯ ಪಾಠಗಳನ್ನು ಜೊತೆಗೆ ಹಿಡಿದು ತಂದಿರುತ್ತವೆ. ಅವುಗಳನ್ನು ಗುರುತಿಸಿ ಕಲಿತರೆ ಜೀವನದಿ ಸರಾಗವಾಗಿ ಹರಿಯುವುದು. ಬಂಧ ಹಳೆಯದಾದಷ್ಟು ಮೌಲ್ಯ ಜಾಸ್ತಿ. ಅದಕ್ಕೆ ಬೆಲೆ ನಿರ್ಧರಿಸುವುದು ಸುಲಭವಲ್ಲ. ಕಳೆದುಕೊಂಡ ಬಂಧ ಮರಳಿ ದೊರೆತರೆ ಆಗುವ ಖುಷಿ ಅಷ್ಟಿಷ್ಟಲ್ಲ. ಹಾಳಾಗದೇ, ಮುಕ್ಕಾಗದೇ ಹಿಂದುರುಗಿದರಂತೂ ಸ್ವರ್ಗವೇ ಕೈಗೆ ಸಿಕ್ಕಂತೆ. ಮುಗ್ಧತೆಯ ಭಾವ ಪ್ರವಾಹದಂತೆ ಉಕ್ಕುತ್ತದೆ. ಬೌದ್ಧಿಕವಾಗಿ ಅದೆಂಥ ತಾಪವಿದ್ದರೂ ಪ್ರೀತಿಯಿಂದಲೇ ಸಹಮತ ವ್ಯಕ್ತಪಡಿಸುತ್ತದೆ ಕಳೆದುಕೊಳ್ಳುವೆನೇನೋ ಎಂಬ ಭೀತಿಯ ದ್ವಾರದ ಇನ್ನೊಂದೆಡೆ ಸಿಹಿ ಕಾಣಿಕೆ ಇರುತ್ತದೆಂಬುದು ನೆನಪಿರಲಿ.

ನಾನೇ ಶ್ರೇಷ್ಠ ಎನ್ನದಿರಿ
ಮನಸ್ಸು. ನಡೆಯುವ ದಾರಿಯಲ್ಲಿ ಒಳ್ಳೆಯ ಬಂಧಗಳು ಬೆಸೆದುಬಿಟ್ಟರೆ ಎಲ್ಲಿಲ್ಲದ ಆನಂದ. ಹೆಮ್ಮೆ ತೃಪ್ತಿ ಮೈ ಮನಗಳಲ್ಲಿ ನಲಿದಾಡುತ್ತವೆ. ಹೊಣೆಯರಿತ ಬಂಧಗಳ ಬಲೆ ಹೆಣೆದುಕೊಂಡರೆ ಮಂಗಳ ಮಹೋತ್ಸವ. ಬಂಧಗಳು ಸಡಿಲಗೊಂಡರೆ ಮಾನಸಿಕ ದೌರ್ಬಲ್ಯ ಕಾಡಲಾರಂಭಿಸುತ್ತದೆ ಎಂಬುದು ಈಗ ಬಹುತೇಕ ಜನರ ಬಾಳಲ್ಲಿ ಕಂಡುಂಡ ಅನುಭವ ಸತ್ಯ. ನಾನೇ ಮೇಲು ಎನ್ನುವುದನ್ನು ಬೆಂಬತ್ತಿ ನಡೆಯುವ ಸ್ವಭಾವ ಇಂದು ನಿನ್ನೆಯದಲ್ಲ. ಎಲ್ಲದರಲ್ಲೂ ನಾನೇ ಶ್ರೇಷ್ಠನೆಂದು ಯಜಮಾನಿಕೆ ತೋರುವ ಹಂಬಲವಂತೂ ಇದ್ದೇ ಇದೆ.’ಈವರೆಗೆ ಸಂಬಂಧ ಬಾರದ ಜನ ಒಳ್ಳೆಯವರಾಗೇ ಕಾಣುತ್ತಾರೆ..ಎಂಬುದು ಅನಾಮಿಕ ಹೇಳಿದ ನುಡಿ. ಸಂಬಂಧಕ್ಕೆ ಸಿಕ್ಕಿದವರಲ್ಲಿ ದೊಷಗಳು ಕಂಡು ಬರುವುದು ಪ್ರತಿಶತ ಸತ್ಯ ಎಂಬುದು ಈ ನುಡಿಯ ಮರ್ಮ.ಪ್ರತಿಯೊಬ್ಬರಲ್ಲೂ ಪ್ರೀತಿ ಕರುಣೆ ನಯ ವಿನಯ ತಾಳ್ಮೆಯಂಥ ಅಪ್ಪಟ ಚಿನ್ನದ ಗುಣಗಳೂ ಇರುತ್ತವೆ ಅದೇ ಕಾಲಕ್ಕೆ ದ್ವೇಷ ಸೇಡಿನಂಥ ವಿನಾಶಕಾರಿ ಗುಣಗಳು ಮನೆ ಮಾಡಿರುತ್ತವೆ. ಅಮೃತದಂಥ ಗುಣಗಳಿಗೆ ಒತ್ತು ನೀಡಲು ಬುದ್ಧಿವಂತಿಕೆಯ ಉಪಾಯ ಬೇಕೇ ಬೇಕು.ತಪ್ಪಿಸಿಕೊಂಡ ಸಂಬಂಧವು ತೀರಿಸದ ಸಾಲದಂತೆ ಎನ್ನುವುದನ್ನು ನೆನಪಿನಲ್ಲಿಡಬೇಕು.

- Advertisement -

ರಕ್ಷಣೆಗೆ ಕಾಳಜಿ ವಹಿಸಿ
ಎಲ್ಲ ಸಂಬಂಧಕ್ಕಿಂತ ರಕ್ತ ಸಂಬಂಧ ಹೆಚ್ಚಿನದು ಎನ್ನುವುದು ಇಂಗ್ಲೀಷ್ ನಾಣ್ಣುಡಿ. ತ್ವರಿತಗತಿಯಲ್ಲಿ ಮುನ್ನುಗ್ಗಬೇಕೆನ್ನುವ ಸ್ಪರ್ಧೆಯ ಮನಗಳಿಗೆ ಸಂಬಂಧಗಳನ್ನು ಎಷ್ಟರ ಮಟ್ಟಿಗೆ ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನವಿದ್ದರೂ ವಾಸ್ತವದಲ್ಲಿ ಎಡುವುವ ಸಂದರ್ಭಗಳೇ ಜಾಸ್ತಿ. ಆಸ್ತಿ ಹಣ ಐಶ್ವರ್ಯ ಅಧಿಕಾರ ಎಷ್ಟೇ ಇದ್ದರೂ ಸಂಬಂಧಗಳು ಸರಿ ಇರದಿದ್ದರೆ ಕಣ್ಣಿರಿನಲ್ಲಿ ಕೈ ತೊಳೆಯುವುದು ಕಟ್ಟಿಟ್ಟ ಬುತ್ತಿ. ಬಂಧಗಳ ಪ್ರೀತಿ ಸೌಹಾರ್ದತೆಯೇ ನಮ್ಮ ಸಹಜ ಗುಣ. ಅದಿಲ್ಲದೇ ಹೋದರೆ ನಾವು ನೀರಿಲ್ಲದ ಮೀನು. ಸಂಬಂಧಗಳ ನಿರ್ವಹಣೆಯಲ್ಲಿ ಅಜಾಗೂರಕರಾದರೆ ಬಂಧುತ್ವ ಹಳಸುವುದರಲ್ಲಿ ಸಂದೇಹವಿಲ್ಲ. ಬಂಧ ರಹಿತ ಜೀವನ ಚಲಾಯಿಸಬೇಕೆನ್ನುವ ಚಾಲಕನಿಗೆ ಹೆಚ್ಚು ಕಠಿಣ ಎಂಬುದು ಈಗಾಗಲೇ ಸಾಬೀತಾಗಿದೆ. ಸಂಬಂಧಗಳಿಂದ ಅತಿ ಹೆಚ್ಚು ಲಾಭ ಪಡೆಯುವ ಮುತವರ್ಜಿ ತೋರಿಸುತ್ತೆವೆಯೇ ಹೊರತು ಅವುಗಳ ಪೋಷಣೆಗೆ ರಕ್ಷಣೆಗೆ ಕಾಳಜಿ ವಹಿಸುವುದಿಲ್ಲ. ಇದರಿಂದಾಗಿಯೇ ಕೂಡು ಕುಟುಂಬಗಳಲ್ಲಿಯ ಅನೇಕ ಸಂಬಂಧಗಳು ನುಶಿ ಹತ್ತಿ ಹಾಳಾದವು. ಹಿರಿಯರ ಕಾಲದಿಂದ ಅನುಚಾನವಾಗಿ ಬಂದ ಬಂಧಗಳು ಹೆಬ್ಬಂಡೆಯೊಂದಕ್ಕೆ ಡಿಕ್ಕಿ ಹೊಡೆದಂತಾಗಿ ಗಾಯಗೊಂಡಿವೆ. ಘಮ ಚೆಲ್ಲುವ ಮಲ್ಲಿಗೆಯಂಥ ಸುವಾಸಿತ ಸಂಬಂಧಗಳ ಪಕಳೆಗಳನ್ನು ಎಳೆ ಎಳೆಯಾಗಿ ಬಿಚ್ಚದಿದ್ದರೆ ಗೆಲುವು ನನ್ನದು ನಿನ್ನದು ಅಲ,್ಲ ನಮ್ಮೆಲ್ಲರದು.

ಕೊನೆ ಹನಿ
ಸೃಷ್ಟಿಯ ಎಲ್ಲ ವಸ್ತುಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಲಾಭ ನಷ್ಟ ಅವಲಂಬಿಸಿದೆ. ಅದಕ್ಕೆ ಸಂಬಂಧ ಹೊರತಾಗಿಲ್ಲ. ಹಬ್ಬ ಹರಿದಿನಗಳಲ್ಲಿ ಸಭೆ ಸಮಾರಂಭಗಳಲ್ಲಿ ಶುಭ ಗಳಿಗೆಗಳಲ್ಲಿ ಜಾತ್ರೆ ಉತ್ಸವಗಳಲ್ಲಿ ಬಂಧ ಇನ್ನಷ್ಟು ಬೆಸೆಯಲು, ಮತ್ತಷ್ಟು ವರ್ಧಿಸಲು ಬಲವರ್ಧನೆಗೊಳ್ಳಲು ಹೇಳಿ ಮಾಡಿಸಿದ ಸಮಯ. ಇಂಥ ಪ್ರಸಂಗಗಳಲ್ಲಿ ಸ್ನೇಹಿತ ವರ್ಗದಲ್ಲಿ ಕುಟುಂಬ ಸದಸ್ಯರಲ್ಲಿ ಮನಸ್ಸುಗಳು ಆಹ್ಲಾದತೆಯಿಂದ ಪ್ರಫುಲ್ಲಗೊಂಡಿರುತ್ತವೆ. ಒಳ್ಳೆಯ ಸಂಬಂಧಗಳ ವೃದ್ಧಿಗಾಗಿ ಆಸ್ಥೆ ವಹಿಸುವುದು ನಾವೆಲ್ಲರೂ ಹೊರಬೇಕಾದ ಹೊಣೆ. ನೆಂಟರೊಂದಿಗೆ ಊಟ ಉಪಚಾರ ಮಾಡಬೇಕು. ವ್ಯವಹಾರ ಮಾಡಬಾರದು ಎನ್ನುವ ಉಪಯುಕ್ತ ಮಾತು ಬೆಟಗೇರಿ ಕೃಷ್ಣಶರ್ಮರದು.ವಿಘ್ನ ನಿವಾರಕನ ದೊಡ್ಡ ತಲೆ ನಮ್ಮನ್ನು ವಿಶಾಲವಾಗಿ ಆಲೋಚಿಸಲು ಪ್ರ್ರೇರೇಪಿಸುತ್ತದೆ. ಮರದಗಲದ ಕಿವಿಗಳು ಸಹನೆಯಿಂದ ಆಲಿಸಲು ಹೊಸ ಭಾವಗಳಿಗೆ ಕಿವಿಯಾಗಲು ಪರರ ಕಷ್ಟಗಳಿಗೆ ಕರಗಲು ಕಲಿಸುತ್ತವೆ. ಚಿಕ್ಕ ಚಿಕ್ಕ ಕಣ್ಣುಗಳು ಹಿಡಿದ ಕಾರ್ಯವ ಚುರುಕಾಗಿ ಮುಗಿಸಲು ಗಮನ ಅಗತ್ಯವೆಂದು ಹೇಳುತ್ತದೆ. ಉದ್ದನೆಯ ಮೂಗು ಈ ಕಡೆ ಆ ಕಡೆ ಗಮನ ನೀಡಿ ಕುತೂಹಲದಿಂದ ಹೆಚ್ಚು ತಿಳಿಯಲು ಪ್ರಚೋದನೆ ನೀಡುತ್ತದೆ. ಮೂಗು ಕಿವಿ ತಲೆ ದೊಡ್ಡದಾಗಿದ್ದರೂ ಬಾಯಿ ಮಾತ್ರ ಪುಟ್ಟದಾಗಿದೆ. ಇದು ಮಾತು ಕಡಿಮೆ ಇರಲಿ ಎನ್ನುವ ಸಂದೇಶ ನೀಡುತ್ತದೆ. ಮಹಾಗಣಪತಿಯಿಂದ ಸ್ಪೂರ್ತಿ ಪಡೆದು ಆತನ ಅವಯವಗಳ ಸಂದೇಶವನು ಅನುಸರಿಸದರೆ ಸಂಬಂಧ ನಿರ್ವಹಣೆ ಸಲೀಸು. ಸಂಬಂಧಗಳ ಹೆಸರಿನಲಿ ನಿಟ್ಟುಸಿರು ಬಿಡುವುದನ್ನು ಬಿಡೋಣ. ಬದುಕಿನ ಬಣ್ಣ ಕರಗುವ ಮುನ್ನ ಸಂಬಂಧಗಳ ಘಮವನ್ನು ಅಮೂಲ್ಯ ಜೀವನದಲ್ಲಿ ತುಂಬಿ ತುಳುಕಿಸೋಣ.

ಜಯಶ್ರೀ.ಜೆ.ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ
9449234142

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group