ಬೈಲಹೊಂಗಲ ಕಸಾಪ ವತಿಯಿಂದ ಉಪನ್ಯಾಸ ಹಾಗೂ ಕಾವ್ಯೋತ್ಸವ
ಬೈಲಹೊಂಗಲ: ಪ್ರೀತಿ, ಸ್ನೇಹ, ಸಾಮರಸ್ಯದ ತತ್ವಗಳನ್ನು ಸಾಹಿತ್ಯದ ಜೀವಾಳವನ್ನಾಗಿಸಿ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಸಋಷಿ ರಾಷ್ಟ್ರಕವಿ ಕುವೆಂಪು ಕನ್ನಡ ಕಂಪು ಎಂದು ಚಿಕ್ಕಬಾಗೇವಾಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಡಾ. ಷಣ್ಮುಖ ಗಣಾಚಾರಿ ಹೇಳಿದರು.
ಕರ್ನಾಟಕ ಸಂಭ್ರಮ-50 ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕ ಹಾಗೂ ನೇಸರಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಕಾಲೇಜಿನ ಗಂಗೂಬಾಯಿ ಹಾನಗಲ್ ಸಭಾಭವನದಲ್ಲಿ ಹಮ್ಮಿಕೊಂಡ ‘ರಾಷ್ಟ್ರಕವಿ ಕುವೆಂಪು ಅವರ ಜೀವನ-ಸಾಹಿತ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹ್ಯಾದ್ರಿಯ ಮಡಿಲಿನಲ್ಲಿ ಹುಟ್ಟಿ ಬೆಳೆದ ಅದ್ಭುತ ಪ್ರತಿಭೆ ವಿಶ್ವಕವಿಯಾಗಿ ಹೊರಹೊಮ್ಮಿದ್ದು ಕನ್ನಡದ ಹೆಮ್ಮೆ ಎಂದು ಅವರು ಅಭಿಪ್ರಾಯಪಟ್ಟರು. ಕುವೆಂಪು ಅವರ ಪ್ರಕೃತಿ ಪ್ರೇಮ, ಮಾನವೀಯತೆ, ಸಮಾನತೆ, ಸಹೋದರತೆ ಅವರನ್ನು ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿದೆ ಎಂದರು.
ಹಿರಿಯ ಸಾಹಿತಿಗಳಾದ ಸಿ.ವಿ. ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರ ಸಾಹಿತ್ಯದಲ್ಲಿ ಬದುಕಿನ ಉನ್ನತ ಮೌಲ್ಯಗಳ ಹೂರಣ ಅಡಗಿದೆ ಎಂದರು. ಅವರ ಕಾವ್ಯ, ನಾಟಕ, ಕಾದಂಬರಿಗಳನ್ನು ಓದುವುದರಿಂದ ಮನದಲ್ಲಿ ಶ್ರೇಷ್ಠ ಮಟ್ಟದ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟರು. ಅವರನ್ನು ಭೇಟಿ ಮಾಡಿದ ಅವಿಸ್ಮರಣೀಯ ಅನುಭವಗಳನ್ನು ಮೆಲಕು ಹಾಕಿದರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಜೀವನ- ಸಾಹಿತ್ಯವನ್ನು ಎಲ್ಲರಿಗೂ ಪರಿಚಯಿಸುವ ಹಾಗೂ ಕನ್ನಡ ಸಾಹಿತ್ಯದ ಒಲವು ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಎಲೆಮರೆ ಕಾಯಿಗಳಂತಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಡುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಫಕೀರನಾಯ್ಕ ಡಿ. ಗಡ್ಡಿಗೌಡರ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ನೋಡಿದಾಗ ಸೃಜನಶೀಲತೆ ಮತ್ತು ವೈಚಾರಿಕತೆಯ ಅಂಶಗಳು ಅವರಲ್ಲಿ ಹಾಸುಹೊಕ್ಕಾಗಿದ್ದವು ಎಂಬುದು ಅರಿವಾಗುತ್ತದೆ ಎಂದು ಹೇಳಿದರು.
ವಾಸ್ತವದ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶ್ರೇಷ್ಠಕವಿ ಕುವೆಂಪು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪದಬಂಧ ಪರಿಣಿತರಾದ ಅಕ್ಬರ ಮೋಕಾಶಿ ಮಾತನಾಡಿ, ಯುವಜನತೆ ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪತ್ರಕರ್ತರು, ಸಾಹಿತಿಗಳಾದ ಚ.ಯ. ಮೆಣಸಿನಕಾಯಿ ಹಾಗೂ ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಮರಿಗೌಡ ಚೋಬಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾವ್ಯೋತ್ಸವದಲ್ಲಿ ಭಾಗಿಯಾಗಿ ಪ್ರೊ ಮಹಾದೇವಪ್ಪ ಕೊಪ್ಪದ, ಶ್ವೇತಾ ಪಾಟೀಲ, ಸುರೇಶ ಇಂಚಲ, ಅಡಿವೆಪ್ಪ ಗಡದವರ, ಆನಂದ ವಡರಟ್ಟಿ ನಾಗರಾಜ ಗೋವಿ, ಈಶ್ವರ ಹಸಬಿ, ಮಲ್ಲಿಕಾರ್ಜುನ ಕುಂಬಾರ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಬೈಲಹೊಂಗಲ ಕಸಾಪ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಕಾಲೇಜಿನ ಸಿಬ್ಬಂದಿಗಳಾದ ಡಾ. ಪದ್ಮಾ ಹೊಸಕೋಟಿ, ಸುರೇಖಾ ಶೆಟ್ಟಿ, ನಿರ್ಮಲಾ ಸತ್ತಿಗೇರಿ, ಗಿರಿಗೌಡ ಚೋಬಾರಿ, ಪೃಥ್ವಿರಾಜ ಎನ್, ನೇಂದ್ರಪ್ಪ, ಅಶೋಕ ಬಾಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ ನಿರೂಪಿಸಿದರು. ಡಾ. ಎನ್.ಟಿ ರೇಣಕೆಗೌಡರ ಸ್ವಾಗತಿಸಿದರು. ಆರ್.ವೈ. ಗೌಡರ ವಂದಿಸಿದರು. ಎಸ್.ಎಸ್.ಭಟ್ ಪ್ರಾರ್ಥಿಸಿದರು. ರಾಜು ಹಕ್ಕಿ ನಿರ್ವಹಿಸಿದರು.