ಸಿಂದಗಿ: ಮಕ್ಕಳ ಮಾನಸಿಕ, ದೈಹಿಕ, ಆರೋಗ್ಯ ರಕ್ಷಣೆ, ಪೋಷಣೆ, ಶಿಕ್ಷಣ ಮತ್ತು ಹಕ್ಕುಗಳ ಸಂರಕ್ಷಣೆ ಕುರಿತು ವಿಶೇಷ ಗಮನ ಹರಿಸುವುದು ನಮ್ಮೆಲರ ಕರ್ತವ್ಯ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಮಕ್ಕಳ ಕಲ್ಯಾಣಕ್ಕಾಗಿ ವಿವಿಧ ತರಬೇತಿ ಕಾರ್ಯಾಗಾರ, ಕಮ್ಮಟ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದುವಂತೆ ಮಾಡಿ ನಾಡಿನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಸರಕಾರವು ಈ ಅಕಾಡೆಮಿಯನ್ನು ಸ್ಥಾಪಿಸುವ ಮೂಲಕ ದೇಶದ ಮಕ್ಕಳಿಗಾಗಿ ಸ್ಥಾಪನೆಗೊಂಡಿರುವ ಎರಡನೇ ಅಕಾಡೆಮಿ ಇದ್ದಾಗಿದೆ ಎಂದು ಹೇಳಿದರು.
ನಂತರ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹ.ಮ. ಪೂಜಾರ ಅವರೊಂದಿಗೆ ಚರ್ಚಿಸಿ, ಶಿಕ್ಷಣ, ಸಾಹಿತ್ಯ, ಸಂಗೀತ, ಹಾಗೂ ಕಲೆಯು ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಪ್ರಗತಿಗಾಗಿ ವಿಶೇಷ ಕಾರ್ಯಕ್ರಮವನ್ನು ಮುಖ್ಯವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸುವ ಕುರಿತು ವಿಷಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹ.ಮ. ಪೂಜಾರ ಅವರು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಮಕ್ಕಳ ಸಾಹಿತಿ, ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹ.ಮ. ಪೂಜಾರ ಮಾತನಾಡಿ, ಮಕ್ಕಳ ಸಮಸ್ಯೆಗಳಿಗೆ ಮಕ್ಕಳೇ ಪರಿಹಾರ ಕಂಡುಕೊಳ್ಳಲು ಕಾರ್ಯಕ್ರಮಗಳನ್ನು ರೂಪಿಸುವುದು. ಜನಪದ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಮುಂತಾದ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಸಮಾಜಕ್ಕೆ ಪರಿಚಯಿಸುವುದು. ಮಕ್ಕಳ ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಶಿಕ್ಷಣ ಕ್ಷೇತ್ರಗಳ ಬಗ್ಗೆ ಗಮನ ಹರಿಸಿ ನೂತನ ಅವಿಷ್ಕಾರಗಳು, ಸಂಶೋಧನೆಗಳು ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಕ್ಕಳ ಸ್ಥಿತಿಗತಿಗಳನ್ನು ಸುಧಾರಿಸುವಂಥ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ, ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ, ನಿರ್ದೇಶಕಿ ವಿದ್ಯಾ ಪೂಜಾರ ಹಾಗೂ ಇತರರು ಇದ್ದರು.