spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಅರಿವಿನ ಮಾರಿತಂದೆ

ಕಾಯಕವೇ ಕೈಲಾಸ, ಅರಿವೆ ಗುರು ಎಂದು ತಿಳಿದು ಬದುಕಿದವರು 12 ನೆ ಶತಮಾನದ ಶಿವಶರಣರು. ನಡೆ ನುಡಿ ಯಲ್ಲಿ ಸಮನ್ವಯತೆ ಸಾಧಿಸಿ, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು, ತಮ್ಮ ಕಾಯಕ ನಿಷ್ಠೆ ಮತ್ತು ದಾಸೋಹ ದಿಂದಾಗಿ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಶರಣರು.

ಶರಣರ ಕ್ರಾಂತಿ, ಅವರ ಬದುಕಿನ ನೀತಿ, ಅವರ ತಾತ್ವಿಕ ಚಿಂತನೆಗಳು, ಸಮಾಜದ ಸಮಸ್ಯೆಗೆ ಅವರು ಸ್ಪಂದಿಸಿದ ರೀತಿ ಪರಿಣಾಮಕಾರಿ. ಅರಿವೆ ಗುರು ಆಚಾರವೇ ಲಿಂಗ, ಅನು ಭಾವವೇ ಜಂಗಮ ಎಂಬ ತತ್ವದಡಿ ನಡೆದ ಶರಣರಲ್ಲಿ ಅರಿವಿನ ಮಾರಿತಂದೆಯವರು ಒಬ್ಬರು.

- Advertisement -

ಬಸವಣ್ಣನವರ ಸಮಕಾಲಿನರಾದ ಶರಣರಲ್ಲಿ ಮನಸಂದ ಮಾರಿತಂದೆ, ನಗೆಯ ಮಾರಿತಂದೆ, ಕೂಗಿನ ಮಾರಿ ತಂದೆ, ಅರಿವಿನ ಮಾರಿ ತಂದೆ ಹೀಗೆ ಅವರ ಕಾಯಕ ಧರ್ಮಕ್ಕನುಗುಣವಾಗಿ ನಾಲ್ಕು ಜನ ಮಾರಿತಂದೆಯರು ಇದ್ದದ್ದು ತಿಳಿದು ಬರುತ್ತದೆ. ಅದರಲ್ಲಿ ಅರಿವಿನ ಮಾರಿ ತಂದೆ ಷಟ್ ಸ್ಥಲ ಮಾರ್ಗದಲ್ಲಿ ನಡೆದು ಅರಿವಿನ ಸಾಕಾರ ಮೂರ್ತಿಯಾಗಿದ್ದ ಮಾರಿ ತಂದೆಗೆ ಅನ್ವರ್ಥಕವಾಗಿ ಈ ಹೆಸರು ಬಂದಿರಬಹುದು. ಇವರು ಅನುಭಾವದ ತುತ್ತತುದಿಗೇರಿದ ಶರಣನಾಗಿದ್ದರು.ಅವರ ತಂದೆ ತಾಯಿ ಪೂರ್ಣಾಶ್ರಮದ ಬಗ್ಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ. ‘ಸದಾಶಿವ ಮೂರ್ತಿಲಿಂಗ’ ಎಂಬ ಅಂಕಿತನಾಮದಿಂದ ವಚನ ರಚಿಸಿದ್ದು ,309 ವಚನಗಳು ದೊರೆತಿವೆ, ಎಲ್ಲದಕ್ಕೂ ಅರಿವೇ ಮುಖ್ಯ ಎಂದರಿತ ಮಾರಿತಂದೆ ಅವರ ವಚನದಲ್ಲಿ ಹೀಗೆ ಹೇಳುತ್ತಾರೆ.

ಅರಿದು ಮಾಡುವುದು ಗುರುಭಕ್ತಿ
ಅರಿದು ಮಾಡುವುದು ಲಿಂಗ ಭಕ್ತಿ
ಅರಿದು ಮಾಡುವುದು ಜಂಗಮ ಭಕ್ತಿ
ಅರಿಕೆಯಿಂದ ಕಾಬುದು ಸದಾಶಿವಮೂರ್ತಿ ಲಿಂಗವನರಿಯುವುದಕೇ.

ತತ್ವ ಪ್ರಧಾನವಾದ ಈತನ ವಚನಗಳು ಗುರು ಲಿಂಗ ಜಂಗಮ ಪ್ರಸಾದ ಹಲವಾರು ವಿಚಾರಗಳನ್ನು ಒಳಗೊಂಡಿವೆ.
ಅವರ ಮತ್ತೊಂದು ವಚನ ಹೀಗಿದೆ

- Advertisement -

ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ
ಬೆಳೆಗೆ ಮುನಿದವರು ಉಂಟೆ ಅಯ್ಯಾ
ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ
ಅರಿವಿಗೆ ಮುನಿದವರುಂಟೆ ಅಯ್ಯಾ
ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ
ಮೊಲೆಯ ಕಟ್ಟಿದವರುಂಟೆ ಅಯ್ಯಾ
ಗುರುವವಾದರೂ ಆಗಲಿ
ಲಿಂಗವಾದರೂ ಆಗಲಿ
ಜಂಗಮವಾದರೂ ಆಗಲಿ
ಅರಿವಿಂಗೆ ಶರಣು
ಮರೆವಿಂಗೆ ಮಥನವ ಮಾಡಿದ್ದಲ್ಲದೆ ಇರೆ
ಇದು ನೀವು ಕೊಟ್ಟ ಅರಿವಿನ ಮಾರನ ಇರುವು
ಸದಾಶಿವ ಮೂರ್ತಿ ಲಿಂಗದ ಬರವು

ವ್ಯಕ್ತಿಗಳ ನಡೆ ನುಡಿಗಳಲ್ಲಿ ಕಂಡು ಬರುವ ಒಳ್ಳೆಯ ಗುಣಗಳನ್ನು ಮೆಚ್ಚಿಕೊಳ್ಳುವಂತೆ ಅವರ ಕೆಟ್ಟ ಗುಣಗಳು ಕಂಡಾಗ ಅದನ್ನು ಸಹಿಸಿಕೊಂಡು ಸುಮ್ಮನಿರದೆ ಪ್ರಶ್ನಿಸುವಂತೆ ಎದೆಗಾರಿಕೆ ಹೊಂದಿರಬೇಕೆಂಬುದನ್ನು ಈ ವಚನದಲ್ಲಿ ತಿಳಿಸಿದ್ದಾರೆ.

ಬೆಳೆಯನ್ನು ಬೆಳೆಯುವ ಭೂಮಿಯಲ್ಲಿ ಕಸಕಡ್ಡಿ ಬೆಳೆದರೆ ಸಹಜವಾಗಿ ಸಿಟ್ಟು ಬರುತ್ತದೆ ಅಥವಾ ಮನಸ್ಸಿಗೆ ನೋವಾಗುತ್ತದೆ. ಆದರೆ ಆ ಹೊಲದಲ್ಲಿ ಉತ್ತಮ ಬೆಳೆ ಬಂದಾಗ ಯಾರೂ ಮುನಿಯಲು ಸಾಧ್ಯವಿಲ್ಲ. ಅದೇ ರೀತಿ ಒಳ್ಳೆಯ ವ್ಯಕ್ತಿತ್ವ ಹೊಂದಿ ಅರಿವಿನಿಂದ ಬದುಕಿರುವ ಮನುಷ್ಯ ಒಳ್ಳೆತನವನ್ನು ಬಿಟ್ಟು ಕೆಟ್ಟ ನಡುವಳಿಕೆ ತೋರಿದರೆ ಮುನಿಯುತ್ತಾರೆ ಹೊರತು ಅವನ ಒಳ್ಳೆಯ ಗುಣಗಳನ್ನು ಯಾರು ಕಡೆಗಣಿಸುವುದಿಲ್ಲ. ಹಾಲನ್ನು ಕೊಡುವ ಹಸುಗಳು ಹಾಲು ಕರೆಯುವಾಗ ತೊಂದರೆ ಕೊಟ್ಟರೆ ಹಸಿವಿನ ಹಿಂಗಾಲನ್ನು ಕಟ್ಟುತ್ತಾರೆ ಹೊರತು ಹಾಲು ಕೊಡುವ ಅದರ ಮೊಲೆಗಳನ್ನು ಕಟ್ಟುವುದಿಲ್ಲ. ಅಂತೆಯೇ ಗುರುವಾಗಲಿ ಲಿಂಗವಾಗಲಿ ಜಂಗಮವಾಗಿರಲಿ ಅವನಿಗೆ ಒಳ್ಳೆಯ ನಡೆ ನುಡಿಗಳು ಮುಖ್ಯ. ಇವರಲ್ಲೂ ತಪ್ಪು ಕಂಡು ಬಂದರೆ ಪ್ರಶ್ನೆ ಮಾಡದೆ ಬಿಡುವುದಿಲ್ಲ. ಆದ್ದರಿಂದ ಒಳ್ಳೆಯ ನಡೆನುಡಿಯನ್ನು ಶಿವನೆಂದು ತಿಳಿದು ಬಾಳುತ್ತಿರುವ ವ್ಯಕ್ತಿಗಳಿಗೆ ಸದಾಶಿವ ಮೂರ್ತಿಲಿಂಗದ ಅನುಗ್ರಹ ಇರುತ್ತದೆ ಎಂಬ ಭಾವನೆಯನ್ನು ಈ ವಚನದಲ್ಲಿ ಅರಿವಿನ ಮಾರಿತಂದೆ ವ್ಯಕ್ತಪಡಿಸಿದ್ದಾರೆ.

ಅವರ ಮತ್ತೊಂದು ವಚನ…
ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟರೆ   ಒದೆಯುವುದಲ್ಲದೆ ಉಣಿಸುವುದೇ?
ಅರಿವು ನಷ್ಟವಾದವ ಕ್ರಿಯೆ ಬಲ್ಲನೆ
ಕ್ರಿಯೆ ಎಂಬುದು ಹಸು ಅರಿವೆಂಬುದು ಹಾಲು ಬಯಕೆ ಎಂಬುದು ಕರು
ಇಂತಿ ತ್ರಿವಿಧ ವನರೀದಲ್ಲಿ ಸದಾಶಿವ ಮೂರ್ತಿ ಲಿಂಗವೂ ತಾನೆ

ಈ ವಚನದಲ್ಲಿ ಮೊಲೆ ಹಾಲುಬತ್ತಿ ಹೋದ ಆಕಳು ಹಾಲು ಕುಡಿಯಲೆಂದು ಕರು ಬಂದರೆ ಒದೆಯುತ್ತದೆ, ಅದಕ್ಕೆ ಕುಡಿಸಲು ಸಾಧ್ಯವಿಲ್ಲ ಅದೇ ರೀತಿ ಅರಿವನ್ನು ಕಳೆದುಕೊಂಡವನು ಯಾವುದೇ ಕೆಲಸ ಮಾಡಲು ಅಸಮರ್ಥನು, ಇಲ್ಲಿ ಹಸು ಎಂಬುದು ಕ್ರಿಯೆ ಅಥವಾ ಕರ್ಮ ಹಾಲು ಎಂಬುದು ಅರಿವು ಬಯಕೆ ಎಂಬುದು ಕರು, ಹೀಗೆ ಅರಿವು ಕ್ರಿಯೆ ಬಯಕೆ, ಎಂಬ ತ್ರಿವಿಧ ವನ್ನೂ ಅರಿತ ಶರಣನೆ ಸದಾಶಿವ ಮೂರ್ತಿ ಲಿಂಗವೆನಿಸಿ ಕೊಳ್ಳುತ್ತಾನೆ ಎಂದಿದ್ದಾರೆ. ಅರಿವಿನ ಸ್ವರೂಪದ ಚರ್ಚೆ ಈತನ ವಚನಗಳ ಮುಖ್ಯ ಆಸಕ್ತಿ.
ಜೀವನದಲ್ಲಿ ಮಾಯೆ ಎಂಬುದು ಯಾರನ್ನು ಬಿಟ್ಟಿಲ್ಲ ಎಂಬುದನ್ನು ತನ್ನ ಒಂದು ವಚನದಲ್ಲಿ ಹೀಗೆ ಹೇಳಿದ್ದಾನೆ.

ಬ್ರಹ್ಮನಿಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ
ವಿಷ್ಣುವಿಗೆ ಲಕ್ಷ್ಮಿಯಾಗಿ ಕಾಡಿತ್ತು ಮಾಯೆ
ರುದ್ರಂಗೆ ಉಮಾದೇವಿಯಾಗಿ ಕಾಡಿತ್ತು ಮಾಯೆ
ನನಗೆ ನಿಮ್ಮನರಿವ ಬಯಕೆ ಭವಮಾಯೆಯಾಗಿ ಕಾಡಿತ್ತು ಸದಾಶಿವಮೂರ್ತಿಲಿಂಗ ನಾ ನೀನೆಂಬುದೇ ಮಾಯೆ

ಎಂದು ದೇವಾನುದೇವತೆಗಳನ್ನು ಮಾಯೆ ಬಿಟ್ಟಿಲ್ಲ ಎಂದಿದ್ದಾರೆ. ಹೀಗೆ ಅವರ ವಚನಗಳು ಗುರುಲಿಂಗ ಜಂಗಮ, ಅರಿವು ಆಚಾರ ಬಯಲು, ಹಲವಾರು ವಿಷಯಗಳನ್ನು ಒಳಗೊಂಡಿವೆ. ಅಂಗದ ಮೇಲೆ ಲಿಂಗವಿಲ್ಲದಿದ್ದರೆ ವಿಭೂತಿ ರುದ್ರಾಕ್ಷಿಯನ್ನು ಧರಿಸಬಾರದು ಎಂದು ಹಲವಾರು ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಇವರ ವಚನಗಳಲ್ಲಿ ಲಿಂಗಾಯತ ಧರ್ಮದ ಸಿದ್ಧಾಂತ ಮತ್ತು ಆಚರಣೆಯನ್ನು ಗುರುತಿಸಬಹುದಾಗಿದೆ. ಒಟ್ಟಿನಲ್ಲಿ ಆದರ್ಶ ಬದುಕಿಗೆ ಅರಿವು ಮುಖ್ಯ. ತಿಳಿವಳಿಕೆಯಿಂದ ಹೆಜ್ಜೆ ಇಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ. ಈ ಎಲ್ಲ ಅರಿವು ಮೂಡಿಸುವ ವಿಚಾರ ಅರಿವಿನ ಮಾರಿ ತಂದೆ ವಚನಗಳಲ್ಲಿ ವ್ಯಕ್ತಗೊಂಡಿವೆ.

ಡಾ.ಶರಣಮ್ಮ ಗೋರೆಬಾಳ
ಸದಸ್ಯರು ಅಕ್ಕನ ಅರಿವು ವೇದಿಕೆ

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group