ಮೂಡಲಗಿ – ಗುರು ಎನ್ನುವುದು ಒಂದು ದೊಡ್ಡ ಶಕ್ತಿಯಾಗಿದ್ದು ನಮ್ಮ ಅಂಧಕಾರವನ್ನು ಕಳೆದು ಬೆಳಕಿನ ದೀವಿಗೆಯನ್ನು ಹಚ್ಚುವ ಮಹಿಮಾಪುರುಷನಾಗಿದ್ದಾನೆ. ಗುರು ಪೂರ್ಣಿಮೆಯು ನಮ್ಮೆಲ್ಲಾ ಗುರುಗಳನ್ನು ನೆನೆಯುವ ಅವರ ಮಾರ್ಗದರ್ಶನದ ಮೆಲುಕು ಹಾಕುವ ಸಂದರ್ಭವಾಗಿದೆ” ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮ ನಾಗನೂರ ಮಠದ ಕಾವ್ಯಶ್ರೀ ಅಮ್ಮನವರು ತಿಳಿಸಿದರು.
ಅವರು ಸ್ಥಳೀಯ ಜ್ಞಾನದೀಪ್ತಿ ಪೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡ ಹುಣ್ಣಿಮೆಯ ಬೆಳದಿಂಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡುತ್ತಾ
“ವೈದ್ಯರು ಇಲ್ಲದಿದ್ದರೆ ರೋಗಿಗಳಿಲ್ಲ ;
ಲಾಯರ್ ಇಲ್ಲದಿದ್ದರೆ ಕೋರ್ಟುಗಳಿಲ್ಲ ;
ಇಂಜಿನಿಯರ್ ಇಲ್ಲದಿದ್ದರೆ ಕಟ್ಟಡಗಳಿಲ್ಲ ;
ಆದರೆ ಗುರು ಇಲ್ಲದಿದ್ದರೆ ಇವರು ಯಾರು ಇರುವುದಿಲ್ಲ ಏಕೆಂದರೆ ಗುರುವಾದವನು ಎಲ್ಲರ ಬದುಕಿನ ದಾರಿಯನ್ನು ತೋರಿಸಿ ಬದುಕನ್ನು ಸುಂದರಗೊಳಿಸುತ್ತಾನೆ.
ಗುರುವಿನ ಸೇವೆ ಯಾರು ಮಾಡುವರೋ ಅವರು ಖಂಡಿತಾ ದೊಡ್ಡ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾರೆ.
ಆದ್ದರಿಂದ ಗುರುವಿನ ಸೇವೆ ಮಾಡಿ ಬದುಕನ್ನು ಪರಿಪೂರ್ಣಗೊಳಿಸಿ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯರಾದ ಬಿ.ಆರ್. ತರಕಾರ ಸರ್ ಅವರು ಪ್ರಾಸ್ತಾವಿಕವಾಗಿ ಎಲ್ಲರನ್ನೂ ಸ್ವಾಗತಿಸುತ್ತಾ ಮಾತನಾಡಿ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಮುಂದೆ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ರೂಪರೇಷೆಗಳನ್ನು ತೆರೆದಿಟ್ಟರು. ಶ್ರಾವಣಮಾಸದಲ್ಲಿ ಪ್ರತಿ ಸೋಮವಾರ ಹಮ್ಮಿಕೊಳ್ಳಲಾಗುವ ವಚನ ಶ್ರಾವಣ ಕಾರ್ಯಕ್ರಮದ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯಕಾರಣಿ ಸಮಿತಿಯನ್ನು ಪುನಾರ್ರಚಿಸಿ ನೂತನ ಪದಾಧಿಕಾರಿಗಳನ್ನಾಗಿ ಶಿವಕುಮಾರ ಕೋಡಿಹಾಳ, ನಿಂಗಪ್ಪ ಸಂಗ್ರೇಜಿಕೊಪ್ಪ, ಶಶಿರೇಖಾ ಬೆಳ್ಳಕ್ಕಿ ಹಾಗೂ ಭಾಗೀರಥಿ ಕುಳಲಿ ಇತರರನ್ನು ಸ್ವಾಗತಿಸಲಾಯಿತು.
ಗೌರವ ಉಪಸ್ತಿತಿಯನ್ನು ವಹಿಸಿದ್ದ ಸುಭಾಸ ಢವಳೇಶ್ವರ ಉಪಾಧ್ಯಕ್ಷರು ಬಿ.ಡಿ.ಸಿ.ಸಿ ಬ್ಯಾಂಕ್ ಬೆಳಗಾವಿ ಅವರು ಮಾತನಾಡಿ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ವಾಯ್ ಶಿವಾಪೂರ ಗುರುಗಳು ಮಾತನಾಡಿ ಗುರುಪೂರ್ಣಿಮೆಯ ಔಚಿತ್ಯ ಗೌತಮಬುದ್ಧನ ಸಾಧನೆ, ಗುರುವಿನ ಋಣಕ್ಕೆ ಶಿರಬಾಗುವ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸೀನಿಯರ್ ನ್ಯಾಶನಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಕು.ಕಾಡೇಶ ಪಾಟೀಲ ಕುಸ್ತಿಪಟುವನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನದೀಪ್ತಿ ಪೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಂಜಯ ಸಿಂಧಿಹಟ್ಟಿ, ಮೂಡಲಗಿ ಸಾಯಿ ಸದ್ಭಕ್ತ ಮಂಡಳಿಯ ಸರ್ವಸದಸ್ಯರು, ಗೌರವ ಕಾರ್ಯದರ್ಶಿಗಳಾದ ಎ.ಎಚ್ ಒಂಟಗೋಡಿ, ಸಲಬಣ್ಣವರ, ಮೋಹಿತೆ ಕಿತ್ತೂರ, ಚಿದಾನಂದ ಹೂಗಾರ, ಗೋದಾವರಿ ದೇಶಪಾಂಡೆ, ಶೈಲಜಾ ಬಡಿಗೇರ,ಶಿವಲೀಲಾ ಚಂಡಕಿ,ರಾಜಶ್ರೀ ಕಲಾಲ್ ಮತ್ತಿತರರು ಪಾಲ್ಗೊಂಡಿದ್ದರು.
ಯಲ್ಲಪ್ಪ ಗದಾಡಿ ಉಪನ್ಯಾಸಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕುಮಾರಿ ಮಯೂರಿ ಪ್ರಾರ್ಥಿಸಿದರು.