ಮೂಡಲಗಿ: ಯಶಸ್ಸನ್ನು ಸಾಧಿಸಲು, ದೈನಂದಿನ ಜೀವನದಲ್ಲಿ ಕೆಲವು ಬದಲಾವಣೆಗಳು ಅತ್ಯಗತ್ಯ. ಧನಾತ್ಮಕ ಆಲೋಚನೆಗಳನ್ನು ನಾವು ನಮ್ಮಲ್ಲಿ ರೂಪಿಸಿಕೊಂಡಾಗ ಮಾತ್ರ ಯಶಸ್ಸು ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಯಶಸ್ವಿಯಾಗಲು ಅಥವಾ ಶ್ರೀಮಂತರಾಗಲು ಹಲವು ಮಾರ್ಗಗಳಿವೆ. ತಪ್ಪು ಮಾರ್ಗವನ್ನು ಅನುಸರಿಸುವುದು ನಮಗೆ ಸ್ವಲ್ಪ ಸಮಯದವರೆಗೆ ಸಂತೋಷವನ್ನು ನೀಡಬಹುದು. ಸರಿ ಮಾರ್ಗ ಆಯ್ದುಕೊಂಡಾಗ ನಮ್ಮ ಜೀವನದುದ್ದಕ್ಕೂ ಯಶಸ್ಸನ್ನು, ಶ್ರೀಮಂತಿಕೆಯನ್ನು, ಸಂತೋಷವನ್ನು ಮತ್ತು ಗೌರವವನ್ನು ನೀಡುತ್ತದೆ ಎಂದು ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆದರ್ಶ ಗೌಡ ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿರುವ ೨೦೨೩-೨೪ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಶಂಕರ ಎಂ. ನಿಂಗನೂರ ಮಾತನಾಡಿ, ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಯಶಸ್ಸಿಗಾಗಿ ಹಾತೊರೆಯುತ್ತಾರೆ. ಯಶಸ್ಸೆಂಬುದು ಹಣಕೊಟ್ಟು ಖರೀದಿಸುವಂಥದ್ದಲ್ಲ ಅಥವಾ ಯಾರೋ ನಮಗೆ ದಾನವಾಗಿ ನೀಡುವಂತದ್ದೂ ಅಲ್ಲ. ಯಶಸ್ಸಿನ ಸೂತ್ರವಿರುವುದು ಬರೀ ಸ್ವ ಪ್ರಯತ್ನದಲ್ಲಿ. ಸಾಧನೆಯ ಬಗೆಗಿನ ಕನಸುಗಳನ್ನು ನಾವು ಕಾಣುತ್ತೇವೆಯಾದರೂ ಅವು ಗಳನ್ನು ನನಸಾಗಿಸಲು ಪ್ರಯತ್ನವನ್ನೇ ಮಾಡುವುದಿಲ್ಲ. ನಮ್ಮ ಕನಸುಗಳನ್ನು ಸಾಕಾರಗೊಳಿಸಲು ಯಾರು ಸಹಾಯ ಮಾಡಿಯಾರೆಂಬ ನಿರೀಕ್ಷೆಯಲ್ಲಿಯೇ ದಿನ ಕಳೆಯುತ್ತಿರುತ್ತೇವೆ. ಪುಸ್ತಕಗಳನ್ನು ಓದುವುದರಿಂದ, ಅನುಭವ ಇದೆ ಎಂದ ಮಾತ್ರಕ್ಕೆ ಯಶಸ್ಸು ದೊರಕುವುದಿಲ್ಲ. ಸಾಧಕರ ಸಾಧನೆಯ ಮಾರ್ಗಗಳು, ನಡೆದು ಬಂದ ರೀತಿಗಳು ನಮಗೆ ಪ್ರೇರಣೆ ಯಾಗಬೇಕು ಮಾತ್ರವಲ್ಲದೆ ಆವುಗಳ ಅನುಷ್ಠಾನವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯಕ್ರಮಾಧಿಕಾರಿ ಡಿ.ಎಸ್.ಹುಗ್ಗಿ, ವಾಣಿಜ್ಯಶಾಸ್ತ್ರ ಉಪನ್ಯಾಸಕ ವಿಲಾಸ ಕೆಳಗಡೆ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಪೂಜಾ ಗುಡಗುಡಿ ನಿರೂಪಿಸಿದರು. ವೀಣಾ ಕಂಕಣವಾಡಿ ಪ್ರಾರ್ಥಿಸಿದರು. ಉಮೇಶ ಪಡದಲ್ಲಿ ವಂದಿಸಿದರು.