- Advertisement -
ಸುಮ್ಮನೆ ಬರೆಯುವುದಿಲ್ಲ
ಬರೆಯಬೇಕೆಂದು…
ಸುಮ್ಮನೆ ಬರೆಯುವದಿಲ್ಲ
ತಿವಿಯುವದಿಲ್ಲ ಚುಚ್ಚುವದಿಲ್ಲ.
ಹೊಗಳುವದಿಲ್ಲ ತೆಗಳುವದಿಲ್ಲ .
ಕುಕ್ಕುವದಿಲ್ಲ ಮುಕ್ಕುವುದಿಲ್ಲ
ಪದ ಶಬ್ದ ಜೋಡಿಸಿ
ಗೆದ್ದಲಿಗೆ ಆಹಾರ ಮಾಡುವದಿಲ್ಲ.
ರಾಶಿ ರಾಶಿ ಬರೆದು
ರದ್ದಿಗೆ ಹಾಕುವದಿಲ್ಲ.
ಬರೆಯುತ್ತೇನೆ ನನ್ನವರಿಗೆ.
ಶತಮಾನದಿಂದ ಮಲಗಿದವರಿಗೆ.
ಶೋಷಣೆಗೆ ಸೊಲ್ಲೆತ್ತದೆ
ಸದ್ದಿಲ್ಲದೆ ಬಿದ್ದವರಿಗೆ
ಸುಲಿಗೆ ವಂಚನೆಗೆ
ಬಲಿಯಾಗಿ ಸತ್ತವರಿಗೆ .
ಬರೆಯುತ್ತೇನೆ
ಬುದ್ಧ ಬಸವರ ಬಟ್ಟೆಗೆ
ಸಮತೆ ಪ್ರೀತಿ ಕಾಣುತ್ತೇನೆ.
ಕಾಂತಿಯಿಲ್ಲದ ಕಣ್ಣುಗಳಲಿ
ಕನಸು ತುಂಬುತ್ತೇನೆ.
ಖಾದಿ ಕಾವಿಗಳ ದರ್ಪಕ್ಕೆ
ಕೊನೆ ಹೇಳಬೇಕೆನ್ನುತ್ತೇನೆ.
ಪುಂಡರ ರಕ್ಕಸರ
ಅಟ್ಟ ಅಡಗಿಸಬೇಕೆನ್ನುತ್ತೇನೆ.
ಅದಕ್ಕೆ ನಾನು ಬರೆಯಬೇಕೆನ್ನುತ್ತೇನೆ.
ಬರೆಯಬೇಕೆಂದು…
ಸುಮ್ಮನೆ ಬರೆಯುವದಿಲ್ಲ
ಬರೆಯುತ್ತೇನೆ …….
ಕ್ರಾಂತಿಯ ಜ್ಯೋತಿ ಹಚ್ಚುತ್ತೇನೆ.
ಹೊಸ ಬದುಕಿಗೆ
ಮತ್ತೆ ದಾರಿ ಕಾಯುತ್ತೇನೆ.
ಡಾ.ಶಶಿಕಾಂತ ಪಟ್ಟಣ .ಪೂನಾ