ದೇಶ ಬಾಂಧವರೇ, ನಾನೀಗ ಅತ್ಯಂತ ದುಃಖದಿಂದ ಹೇಳ ಹೊರಟಿರುವ ಸಂಗತಿ ಎಂದರೆ ನಮ್ಮ ದೇಶದ ಜನಪದ ಕಲೆಗಳು ಮಾರಣಾಂತಿಕ ಹಂತ ತಲುಪಿರುವ ಸತ್ಯ. ಭರತ ಭೂಮಿಯ ಭವ್ಯತೆಯಲ್ಲಿ ಹುಟ್ಟು ಪಡೆದು ಜನಮನ ತಣಿಸುವುದರ ಜೊತೆಗೆ ಬದುಕಿಗೆ ಶಿಕ್ಷಣ ನೀಡುವ ಜನಪದ ಕಲೆಗಳು ನಮ್ಮ ಭಾವೈಕ್ಯತೆಯ ಸೇತುಗಳು. ಸತ್ಯ ಸಂಗತಿ ಎಂದರೆ ಎಷ್ಟೋ ಸಂದರ್ಭಗಳಲ್ಲಿ ಆಯಾ ರಾಜ್ಯಗಳ ಜನಪದ ಕಲೆಗಳೇ ಇವರು ಕರ್ನಾಟಕದವರು, ಇವರು ರಾಜಸ್ಥಾನದವರು, ಇವರು ಮಹಾರಾಷ್ಟ್ರದವರು……. ಹೀಗೆ ಪರಸ್ಪರ ಗುರುತುಗಳಿಗೆ ಸಾಕ್ಷ್ಯ ಒದಗಿಸಿವೆ.
ಜನಮನಕ್ಕೆ ಬದುಕಿನ ಅರಿವನ್ನು, ಶಿಕ್ಷಣವನ್ನು ಕೊಡುತ್ತಾ, ಕೆಲ ದಿನಗಳಾದರೂ ಮನಸ್ಸಿನಲ್ಲಿ ಉಳಿದು ಆನಂದವನ್ನು ನೀಡುವ ಜನಪದ ಆಟಗಳು, ಕಲೆಗಳು ಇಂದು ಮರೆಯಾಗುತ್ತಿರುವುದು ನಮ್ಮ ಆಧುನಿಕತೆಯ ಅಟ್ಟಹಾಸ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕದ ವೀರಗಾಸೆ, ತೊಗಲು ಬೊಂಬೆ ಆಟ ಮಹಾರಾಷ್ಟ್ರದ ತಮಾಷಾ, ಲಾವಣಿ, ರಾಜಸ್ಥಾನದ ಬೊಂಬೆಯಾಟ…….. ಬಹುತೇಕ ಎಲ್ಲ ಜನಪದ ಕಲೆಗಳು ಇಂದು ನಿಧಾನವಾಗಿ ಮರೆಯಾಗುತ್ತಿವೆ. ಜೊತೆಗೆ ಜನಪದ ಸಂಗೀತ ನೃತ್ಯಗಳಾದ ಭರತ ನಾಟ್ಯ, ಕೂಚುಪುಡಿ, ಕಥಕ್, ಮಣಿಪುರಿಗಳು ಇಂದು ತಮ್ಮ ದ್ವನಿಯನ್ನೇ ಕಳೆದುಕೊಂಡಿವೆ.
ಹೌದು! ನಮ್ಮ ಆಂಗ್ಲ ಭಾಷೆಯ ಆಧುನಿಕತೆಯ ಮೋಡಿಯಲ್ಲಿ ನಮ್ಮ ಜನಪದ ಕಲೆಗಳು ಕರಗಿ ಹೋಗುತ್ತಿದ್ದು, ಈ ಕಲೆಗಳನ್ನೇ ನಂಬಿ ಬದುಕುತ್ತಿರುವವರು ಹೈರಾಣಾಗಿದ್ದಾರೆ. ಇವರಿಗೆ ಸರಕಾರದಿಂದ ದೊರೆಯುತ್ತಿರುವ ಪ್ರೋತ್ಸಾಹದಾಯಕ ಸಹಾಯಧನ ಒಂದೊಪ್ಪತ್ತಿನ ಊಟಕ್ಕೂ ಸಾಲಲಾರದ ಪರಿಸ್ಥಿತಿ. ಕಾರಣ ತಂತಮ್ಮ ಜನಪದ ಕಲೆಗಳಿಂದ ಕಲಾವಿದರು ದೂರ ಸರಿಯುತ್ತಿದ್ದಾರೆ.
ಈ ಸಂಧರ್ಭದಲ್ಲಿ ನಾವು ನೆನೆಸಿಕೊಳ್ಳಬೇಕಾದ ಸಂಗತಿ ಎಂದರೆ ಹತ್ತಾರು ವರ್ಷಗಳ ಹಿಂದೆ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಇಡೀ ದೇಶದ ಕಲಾವಿದರ “”ಅಪನಾ ಉತ್ಸವ”” ಮೇಳ. ಮುಂದೆ ಇದು ಮತ್ತೆ ನಡೆಯಲಿಲ್ಲ.
ಆತ್ಮೀಯರೇ,
ಜನಪದ ಕಲೆಗಳು ಜೀವಂತವಾಗಿರಬೇಕೆಂದರೆ ಅವು ನಿರಂತರವಾಗಿ ಜರುಗುತ್ತಾ, ಕಲಾವಿದರ ಬದುಕಿಗೆ ಆಧಾರ ಆಗಬೇಕು. ಹೆಚ್ಚಾಗಿ ಗ್ರಾಮೀಣ ಪ್ರದೇಶಕ್ಕೆ ಸೀಮಿತ ಆಗಿರುವ ಜಾನಪದ ಕಲೆಗಳ ಪ್ರದರ್ಶನಗಳು ನಗರ ಪ್ರದೇಶಗಳಲ್ಲೂ ನಿರಂತರವಾಗಿ ನಡೆದು ನಗರ ಪಟ್ಟಣಗಳ ಪ್ರೇಕ್ಷಕರನ್ನು ಅವು ಆಕರ್ಷಿಸಬೇಕು.
ಪ್ರಿಯ ಓದುಗರೇ,
ಜನಪದ ಕಲೆಗಳು ರಾಜ್ಯ ರಾಜ್ಯಗಳ, ನಗರ – ಪಟ್ಟಣಗಳ ನಡುವಿನ ಭಾವೈಕ್ಯತೆಯ ಭಾವ ಸ್ಪಂದನಗಳು.
ಬನ್ನಿ,,,
ಅವುಗಳನ್ನು ಉಳಿಸಿಕೊಳ್ಳೋಣ. ಕಲಾವಿದರನ್ನು ಪ್ರೋತ್ಸಾಹಿಸೋಣ. ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡೋಣ.
ಹೇಮಂತ ಚಿನ್ನು ಕರ್ನಾಟಕ ಶಿಕ್ಷಕರ ಬಳಗ