ವಿಷ್ಣು ಗೋವಿಂದ ಭಟ್ಟ (ಡಿಸೆಂಬರ್ ೩, ೧೯೨೫ – ಏಪ್ರಿಲ್ ೬, ೧೯೯೧) ಅವರು ವಿ. ಜಿ. ಭಟ್ಟ ಎಂಬ ಹೆಸರಿನಿಂದ ಪ್ರಖ್ಯಾತರಾದ ಕನ್ನಡದ ಕವಿ.
ಜನನ
ಡಿಸೆಂಬರ್ ೩, ೧೯೨೩
ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮ
ವೃತ್ತಿ
ಖಾದಿ ಗ್ರಾಮೋದ್ಯೋಗದಲ್ಲಿ ನಿರ್ದೇಶಕರು, ಸಾಹಿತಿಗಳು
ವಿಡಂಬನಾತ್ಮಕ ಕವಿತೆಗಳು
ಜೀವನ
ವಿ.ಜಿ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ ೩, ೧೯೨೩ರ ವರ್ಷದಲ್ಲಿ ಜನಿಸಿದರು. ತಂದೆ ಗೋವಿಂದಭಟ್ಟರು ಮತ್ತು ತಾಯಿ ಗಂಗಮ್ಮನವರು. ಭಟ್ಟರ ಪ್ರಾರಂಭಿಕ ಶಿಕ್ಷಣ ಹೊನ್ನಾವರ, ಜಮಖಂಡಿಗಳಲ್ಲಿ ನೆರವೇರಿತು. ಮುಂದೆ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಪುಣೆ ಪ್ರಾಂತ್ಯಕ್ಕೇ ಪ್ರಪ್ರಥಮ ಸ್ಥಾನ ಪಡೆದರು. ಸಾಂಗ್ಲಿಯಲ್ಲಿ ಕಾಲೇಜು ಶಿಕ್ಷಣ ನಡೆಸಿ ಪುಣೆ ಮತ್ತು ಕೊಲ್ಲಾಪುರದಲ್ಲಿ ಸ್ನಾತಕಕೋತ್ತರ ಪದವಿ ಪಡೆದರು. ಸು. ರಂ. ಎಕ್ಕುಂಡಿ, ರಾಕು ಮತ್ತೆ ಕೆಲವು ನವೋದಯ ಲೇಖಕರು ಇವರ ಸಹಪಾಠಿಗಳಾಗಿದ್ದವರು.
ವಿ. ಜಿ. ಭಟ್ಟರು ಶಿಕ್ಷಕರಾಗಿ ಕೆಲಕಾಲ ದುಡಿದ ನಂತರದಲ್ಲಿ ಸಂಶೋಧನೆಯ ಕುರಿತು ಆಸಕ್ತಿ ತಾಳಿ ಧಾರವಾಡಕ್ಕೆ ಬಂದರಾದರೂ, ೧೯೪೭ರಲ್ಲಿ ಸ್ಥಾಪನೆಯಾದ ಖಾದಿಗ್ರಾಮೋದ್ಯೋಗದಲ್ಲಿ ಉದ್ಯೋಗ ದೊರೆತು ನಿರ್ದೇಶಕರವರೆಗೂ ಬಡ್ತಿ ಪಡೆದರು. ೧೯೮೧ರಲ್ಲಿ ನಿವೃತ್ತಿಯ ನಂತರ ಮುಂಬಯಿಯಲ್ಲಿ ನೆಲೆಸಿದರು.
ಕಾವ್ಯದ ಹಾದಿ
ಬಾಲ್ಯದಿಂದಲೂ ಗೋಕಾಕರು ಮತ್ತು ಬೇಂದ್ರೆಯವರ ಪ್ರಭಾವದಿಂದ ಪದ್ಯದ ಕುರಿತು ಭಟ್ಟರಲ್ಲಿ ಆಸಕ್ತಿ ಮೊಳೆಯಿತು. ಇವರ ಮೊದಲ ಕವನ ಸಂಕಲನ ‘ಸವಿನೆನಪು’ ೧೯೪೬ ರ ವರ್ಷದಲ್ಲಿ ಪ್ರಕಟಗೊಂಡಿತು. ಮುಂದೆ ತಮ್ಮ ಕೊನೆಯ ಕವನ ಸಂಕಲನ ಪ್ರಾರ್ಥನೆಯವರೆಗೆ ಅವರು 22 ಕವನ ಸಂಕಲನಗಳನ್ನು ಪ್ರಕಟಿಸಿದರು. ೧೯೪೬ ರಿಂದ ೧೯೭೬ ರವರೆಗೆ ಸಾಗಿದ ಇವರ ಕಾವ್ಯಕೃಷಿಯು ಇದ್ದಕ್ಕಿದ್ದಂತೆ ಬತ್ತಿ ಹೋದಂತೆನಿಸಿ ಪುನಃ ಥಟ್ಟನೆ ಚಿಗುರೊಡೆದದ್ದು ೧೯೮೩ರ ವರ್ಷದಲ್ಲಿ.
ಭಟ್ಟರ ಮೊದಲರ್ಧ ಭಾಗದ ಕವಿತೆಗಳಲ್ಲಿ ತುಂಟತನ, ವಿಡಂಬನೆಗಳು ತುಂಬಿದ್ದವು. ಭಟ್ಟರ ಈ ಕವಿತೆಗಳಲ್ಲಿ ವಿಡಂಬನೆ ಮತ್ತು ಚೇಷ್ಟೆ ಎದ್ದು ಕಾಣುತ್ತದೆ. ‘ಪಲಾಯನ’, ‘ರಕ್ತಾಂಜಲಿ’, ‘ಕಾವ್ಯವೇದನೆ’, ‘ಲಹರಿ’ ಮುಂತಾದವು ಅವರ ಕೆಲವು ಪ್ರಮುಖ ಕಾವ್ಯ ಸಂಕಲನಗಳು. ಇವುಗಳಲ್ಲಿ ‘ಲಹರಿ’ ಸಂಕಲನದಲ್ಲಿ ಹಾಸ್ಯ ಕವನಗಳು ತುಂಬಿವೆ. ಈ ಕವನಗಳನ್ನು ಭಟ್ಟರೇ ‘ಕ್ಷುದ್ರ ಗೀತೆಗಳು’ ಎಂದು ಕರೆದುಕೊಂಡಿದ್ದಾರೆ. ಇಲ್ಲಿ ತಾವು ಪುರುಷ ಸರಸ್ವತಿಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳುತ್ತಾರೆ. ಮುಂದಿನ ಘಟ್ಟದಲ್ಲಿ ಬಂದ ಅವರ ಕವಿತೆಗಳಲ್ಲಿ ವೇದಾಂತ, ದರ್ಶನ, ಚಿಂತನೆ ಮುಂತಾದ ಅನುಭಾವಗಳು ಮೈದಳೆದಿವೆ.
ಇತರ ಸಾಹಿತ್ಯ ಸೃಷ್ಟಿ
ಭಟ್ಟರ ಗದ್ಯ ಕೃತಿಗಳಲ್ಲಿ ‘ಸಹ್ಯಾದ್ರಿ’ ಉತ್ತರ ಕನ್ನಡದ ಜೀವನ ಚಿತ್ರವಾದರೆ, ‘ಬುರುಕಿ’, ‘ದಿವ್ಯ ಕಥೆಗಳು’ ಮತ್ತು ‘ಪೆದ್ದಂಕಥೆಗಳು’ ಕಥಾ ಸಂಗ್ರಹಗಳಾಗಿವೆ. ಅವರ ‘ಧ್ರುವ ದೋಸ್ತ್’ ಮಕ್ಕಳ ಕಥಾ ಸಂಗ್ರಹ. ‘ಖಾದಿ ಗ್ರಾಮೋದ್ಯೋಗ’ ಅನುವಾದಿತ ಕೃತಿ. ‘ಉಪ್ಪಿನ ಮಾರಾಟ’ ಎಂಬುದು ನಾಟಕ. ಭಟ್ಟರು ಕೆಲಕಾಲ ‘ಗ್ರಾಮ ಜೀವನ’ ಎಂಬ ಪತ್ರಿಕೆಯನ್ನು ನಡೆಸಿದರು.
ಪ್ರಕಾಶನ
೧೯೮೪ರ ನಂತರ ಭಟ್ಟರು ತಮ್ಮ ಕವನ ಸಂಕಲನಗಳನ್ನು ದಿವಂಗತ ಪತ್ನಿಯ ಹೆಸರಿನಲ್ಲಿ ಸ್ಥಾಪಿಸಿದ ‘ರುಕ್ಮಿಣೀ ಪ್ರಕಾಶನ’ದಲ್ಲಿ ಹೊರತಂದರು.
ಪ್ರಶಸ್ತಿ ಗೌರವಗಳು
ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದ ವಿ. ಜಿ. ಭಟ್ಟರನ್ನು ೧೯೮೩ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಅರಸಿ ಬಂತು.
ವಿದಾಯ
ವಿ. ಜಿ. ಭಟ್ಟರು ಏಪ್ರಿಲ್ ೬, ೧೯೯೧ರ ವರ್ಷದಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ