ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಕಪ್ಪತಗುಡ್ಡ ರಕ್ಷಣೆಗಾಗಿ ಚಾರಣ ಮತ್ತು ಸಾಹಿತ್ಯ ಅವಲೋಕನ ಕಾರ್ಯಕ್ರಮ
ಪರಿಸರದಲ್ಲಿ ಮನುಷ್ಯನ ಹಸ್ತಕ್ಷೇಪ ನಿಲ್ಲದಿದ್ದರೆ ಪರಿಸರ ಉಳಿಯಲ್ಲ. ಮನುಷ್ಯ ನಾಡಿಗೆ ಪ್ರಭುವಾಗಲಿ ಕಾಡಿಗೆ ಪ್ರಭುವಾಗದೇ ಸೇವಕರಾಗೋಣ ಎಂದು ರವಿವಾರ ದಿ 25 ರಂದು ಬೆಳಗಾವಿ ಜಿಲ್ಲಾ ಕ. ಸಾ. ಪ.ವತಿಯಿಂದ ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಹಮ್ಮಿಕೊಳ್ಳಲಾದ “ಕಪ್ಪತಗುಡ್ಡ ರಕ್ಷಿಸಿ ಅಭಿಯಾನ, ಚಾರಣ ಮತ್ತು ಸಾಹಿತ್ಯಾವಲೋಕನ” ಕಾರ್ಯಕ್ರಮದಲ್ಲಿ ಕಪ್ಪದಗುಡ್ಡದ ನಂದಿವೇರಿ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ರಕ್ಷಣೆ ಕುರಿತಾಗಿ ಮಾತನಾಡಿದರು.
70 ಗುಡ್ಡಗಳಿಗಿಂತ ಮಿಗಿಲಾದ ಸಸ್ಯಸಂಕುಲದ ಕಪ್ಪತಗುಡ್ಡ ನಾವೆಲ್ಲ ಉಳಿಸಿ, ಬೆಳೆಸಿ ಬಳಸಬೇಕಿದೆ. ಸಾವಿರಾರು ತರಹದ ಔಷಧಿ ಗಿಡಮೂಲಿಕೆಗಳು ಮತ್ತು ಹೇರಳವಾದ ಕಬ್ಬಿಣ ಮತ್ತು ಚಿನ್ನದ ಖನಿಜ ಸಂಪತ್ತು ಹೊಂದಿರುವ ಕಪ್ಪತಗುಡ್ಡದ 80 ಸಾವಿರ ಎಕರೆ ಪ್ರದೇಶವನ್ನು ಅಕ್ರಮ ಗಣಿಗಾರಿಕೆ ಮತ್ತು ಕಾಡುಗಳ್ಳರಿಂದ ರಕ್ಷಿಸಬೇಕಿದೆ.1882 ರಲ್ಲಿ ಬ್ರಿಟಿಷರಿಂದ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲ್ಪಟ್ಟ ಈ ಭಾಗ ನಿರಂತರವಾಗಿ ಗಣಿಗಾರಿಕೆಯಿಂದ ಹಾಳಾಗಿದೆ. ಇಲ್ಲಿ ಮಳೆ ಆದರೆ 16 ಜಿಲ್ಲೆಗಳಿಗೆ ಬೆಳೆಯಾಗುತ್ತದೆ. ಕಳೆದ 20 ವರ್ಷಗಳಿಂದ ಈ ಭಾಗದ ಎಲ್ಲಾ ಶ್ರೀಗಳು ಮತ್ತು ಜನತೆ ಶ್ರಮ ವಹಿಸಿದ್ದರಿಂದ ಕಪ್ಪತಗುಡ್ಡ ನಿಧಾನವಾಗಿ ಬೆಳೆಯುತ್ತಿದೆ. ಈ ಭಾಗದ ಸಹ್ಯಾದ್ರಿ ಎಂದೇ ಹೆಸರಾಗಿರುವ ಈ ಗುಡ್ಡವನ್ನು ರಕ್ಷಿಸೋಣ. ಶುದ್ಧ ಗಾಳಿ, ಶುದ್ಧ ನೀರು ನಮ್ಮ ಬದುಕು. ಬದುಕನ್ನು ಹಾಳು ಮಾಡುವುದು ಬೇಡ ಬನ್ನಿ ಎಲ್ಲರೂ ಒಗ್ಗೂಡಿ ಕಪ್ಪತಗುಡ್ಡ ಉಳಿಸಿ ಬೆಳೆಸೋಣ ಎಂದು ಕಪ್ಪತಗುಡ್ಡದ ಇತಿಹಾಸ ಮತ್ತು ಈಗಿನ ಬದಲಾವಣೆ ಕುರಿತು ವಿವರಿಸಿದ್ದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷ ಮಂಗಲಾ ಮೆಟಗುಡ್ಡ ಮಾತನಾಡಿ ಗುಡ್ಡದ ಪರಿಸರ ಬೆಳೆಸಿ ಉಳಿಸಲು ಎಲ್ಲರೂ ಒಗ್ಗೂಡೋಣ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ದೂರ ಮಾಡಿ ಆದಷ್ಟು ಪರಿಸರಕ್ಕೆ ಹತ್ತಿರವಾಗೋಣ ಎಂದರು.
ಇದೇ ಸಂದರ್ಭದಲ್ಲಿ ಸಂಡೂರಿನ ರೈತ ಶ್ರೀಕಂಠಯ್ಯ ಹತ್ತು ಸಾವಿರ ಬೀಜದ ಉಂಡೆಗಳನ್ನು ಗುಡ್ಡದಲ್ಲಿ ಚರಗ ರೂಪದಲ್ಲಿ ಚೆಲ್ಲಿ ಗಿಡ ಬೆಳೆಸಲು ಶ್ರೀಗಳಿಗೆ ನೀಡಿದರು. ಕಪ್ಪತಗುಡ್ಡ ರಕ್ಷಣೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಾಜ ಸೇವಕ ರಾಮದುರ್ಗದ ಬಾಲಚಂದ್ರ ಜಾಬಶೆಟ್ಟಿ ಇತ್ತೀಚಿನ ದಿನಗಳಲ್ಲಿ ಶ್ರೀಗಳಿಂದ ಮತ್ತು ಇಲ್ಲಿಯ ಜನತೆಯ ಶ್ರಮದಿಂದ ಕಪ್ಪತಗುಡ್ಡದಲ್ಲಿ ಆಗುತ್ತಿರುವ ಅಭಿವೃದ್ಧಿ ಮತ್ತು ರಕ್ಷಣಾ ಮತ್ತು ಕಾಳಜಿಯ ಕುರಿತು ಮತ್ತು ಇಲ್ಲಿನ ಔಷಧೀಯ ಸಸ್ಯಗಳ ಶೈಕ್ಷಣಿಕ ಉಪಯೋಗ ಯಾವ ರೀತಿ ವಿಶ್ವವಿದ್ಯಾಲಯಗಳು ಮಾಡಿಕೊಳ್ಳುತ್ತವೆ ಎಂಬುದನರ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸಾಹಿತಿಗಳಿಂದ ಪರಿಸರ ಕುರಿತಾದ ಕವಿ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ,ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ, ಸುನಿತಾ ನಂದೆನ್ನವರ, ಮಹಾನಂದಾ ಪರುಶೆಟ್ಟಿ, ಜ್ಯೋತಿ ಮಾಳಿ ಸೀಮಾ ಮಸೂತಿ,ಲಲಿತಾ ಪಾರ್ವತರಾವ, ಅಕ್ಕಮಹಾದೇವಿ ಹುಲಗಬಾಳಿ, ಸರೋಜಿನಿ ಹೊಸಕೇರಿ, ಗೀತಾ ಪಾಟೀಲ, ಸುಮಿತ್ರ ಮಲ್ಲಾಪುರ ಪ್ರೇಮಾ ಪಾಟೀಲ, ಶಾಂತಾ ಕಬ್ಬೂರ, ಶಾಲಿನಿ ಚಿನಿವಾಲರ, ಲಕ್ಷ್ಮಿ ಮೂಡಗ್ಲಿಮಠ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ಎಮ್ ವೈ ಮೆಣಸಿನಕಾಯಿ ಸ್ವಾಗತಿಸಿ ಬುದ್ಧಿಜೀವಿಗಳಾದ ಸಾಹಿತಿಗಳು ಪರಿಸರ ಪರವಾಗಿ ಧ್ವನಿ ಎತ್ತುವುದರ ಮೂಲಕ ಕರುನಾಡಿನ ನಿಸರ್ಗ ಸಿರಿಯನ್ನು ಮುಂಬರುವ ಪೀಳಿಗೆಗೆ ಉಳಿಸಲು ಶ್ರಮಿಸಬೇಕಿದೆ ಎಂದು ಚಾರಣ ಮತ್ತು ಕಾರ್ಯಕ್ರಮ ಕುರಿತಾದ ವಿವರಣೆ ನೀಡಿದರು. ಶಿವಾನಂದ ತಲ್ಲೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಠದ ಆವರಣದ ಕಾರ್ಯಕ್ರಮದ ನಂತರ ಮಠದ ಶ್ರೀಗಳು ಕಪ್ಪತ ಗುಡ್ಡದ ಸುತ್ತ ಸುಮಾರು ಹತ್ತು ಕಿಲೋ ಮೀಟರ್ ವರೆಗೆ ಬಂದಿದ್ದ ಎಲ್ಲಾ ಸಾಹಿತಿಗಳನ್ನು ಮತ್ತು ಪರಿಸರ ಆಸಕ್ತರನ್ನು ಚಾರಣಕ್ಕೆ ಕರೆದುಕೊಂಡು ಹೋಗಿ ಔಷಧ ಸಸ್ಯಗಳ ಮಹತ್ವವನ್ನು ಮತ್ತು ಖನಿಜ ಸಂಪತ್ತಿನ ವಿವರಣೆಯನ್ನು ಮತ್ತು ಹರಿಯುತ್ತಿದ್ದ ಬಂಗಾರದ ಕೆರೆ ಮತ್ತು ಅಲ್ಲಿ ನೀರಿನ ಸಂಗ್ರಹಕ್ಕೆ ಕಟ್ಟಲಾದ ಚೆಕ್ ಡ್ಯಾಮ್ ಗಳನ್ನು, ಕೆರೆಗಳನ್ನು . ಬಾವಿಗಳನ್ನು ತೋರಿಸುವದರ ಮೂಲಕ ನೀರಿನ ಮಹತ್ವ ಕಾಡಿನ ಮಹತ್ವ ಮತ್ತು ಪರಿಸರದ ಮಹತ್ವವನ್ನು ಪರಿಸರ ತೋರಿಸುತ್ತಾ ಕಪ್ಪತಗುಡ್ಡವನ್ನು ರಕ್ಷಿಸುವ ಹೊಣೆಯನ್ನು ನಾವೆಲ್ಲರೂ ಹೊರಬೇಕಿದೆ ಎಂದು ಜಾಗೃತಿ ಮೂಡಿಸಿದರು.