ಮುನವಳ್ಳಿ : ಸವದತ್ತಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಿಂದೋಗಿಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಚನ ದಿನ ಆಚರಿಸಲಾಯಿತು.
“ಶರಣರ ವಚನಗಳು ಅರ್ಥಗರ್ಭಿತವಾಗಿದ್ದು, ಇವುಗಳನ್ನು ಅರ್ಥೈಸಿಕೊಳ್ಳಬೇಕು. ವಚನಗಳು ಬದುಕಿನ ಮೌಲ್ಯಗಳನ್ನು ಒಳಗೊಂಡಿವೆ ವಚನಗಳು ನಮ್ಮ ಜೀವನದಲ್ಲಿ ಮಹತ್ವ ಪಾತ್ರ ವಹಿಸಿವೆ”ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ ಎಚ್ ಪಾಟೀಲ ತಿಳಿಸಿದರು.
ತಾಲೂಕು ಕದಳಿ ವೇದಿಕೆ ಅಧ್ಯಕ್ಷ ರಾದ ಅನ್ನಪೂರ್ಣ ಲಂಬೂನವರ ಮಾತನಾಡಿ “ಶರಣರ ವಚನಗಳು ನಮಗೆ ದಾರಿ ದೀಪ. ಮಹಿಳೆಯ ಸಂಘಟನೆ ಹಾಗೂ ಶರಣ ಸಾಹಿತ್ಯವನ್ನು ಪ್ರಚಾರ ಮಾಡಲು ಶರಣ ಸಾಹಿತ್ಯ ಪರಿಷತ್’ನ ಅಂಗಸಂಸ್ಥೆಯಾಗಿ ಸ್ಥಾಪನೆಯಾದ ‘ಕದಳಿ ಮಹಿಳಾ ವೇದಿಕೆಯಲ್ಲಿ ಮುಂದಿನ ದಿನಗಳಲ್ಲಿ ವಚನೋತ್ಸವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುವ ಕುರಿತು ಈ ಸಂದರ್ಭದಲ್ಲಿ ತಿಳಿಸಿದರು. ಶಿಕ್ಷಕ ಬಿ ಬಿ ಹುಲಿಗೊಪ್ಪ “ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಶಾಲೆಯಾದರೂ ಕೂಡ ಇಲ್ಲಿ ಶರಣ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಹೊಂದಿರುವ ಶಿಕ್ಷಣ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಮಕ್ಕಳಲ್ಲಿ ನೈತಿಕತೆಯ ಬಿಂಬಿಸುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ. ಉಮೇಶ ಬಾಳಿಯವರು ದೂರದೃಷ್ಟಿಯ ಪರಿಣಾಮ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿಂಬಿಸುತ್ತಿದ್ದು ತಮ್ಮ ಮಕ್ಕಳು ಕೂಡ ಇದೇ ಶಾಲೆಯಲ್ಲಿ ಓದಿದ್ದು” ಎಂಬುದನ್ನು ತಿಳಿಸಿದರು. ಜೈಂಟ್ಸ್ ಗ್ರುಪ್ ಸದಸ್ಯ ಗಾಯಕ ಬಾಳು ಹೊಸಮನಿಯವರು ಬಸವಣ್ಣನವರ ವಚನವನ್ನು ಸುಶ್ರಾವ್ಯ ವಾಗಿ ಹಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಸಾಹಿತಿ ಶಿಕ್ಷಕ ವೈ ಬಿ ಕಡಕೋಳ ಶಾಲೆಯ ಶಿಕ್ಷಕರಾದ ಎ ವ್ಹಿ ನರಗುಂದ, ಕಿರಣ ನಾಯ್ಕರ, ಬಿ ಎಂ ಮನಗೂಳಿ, ನಿರ್ಮಲಾ ಗದ್ವಾಲ್, ಅಂಜುಂ ತೋಟಗಟ್ಟಿ, ಆಶಾ ಗಾಳಿ, ನೂತನ ದುಂಡಪ್ಪನವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸವಣ್ಣನವರು ಅಕ್ಕಮಹಾದೇವಿ ಅಲ್ಲಮಪ್ರಭು ಅಂಬಿಗರ ಚೌಡಯ್ಯ.ಮಡಿವಾಳ ಮಾಚಿದೇವರ ವೇಷಭೂಷಣ ಧರಿಸಿದ್ದರು. ಈ ಎಲ್ಲಾ ಶರಣರ ಜೀವನ ದರ್ಶನ ಹಿರಿಯ ವಿದ್ಯಾರ್ಥಿಗಳು ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ವಿಶೇಷ ಮೆರುಗು ತಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ ಬಾಳಿಯವರು ಮಾತನಾಡಿ, ‘ವಚನ ದಿನವಾಗಿ ಲಿಂ.ಡಾ.ರಾಜೇಂದ್ರ ಸ್ವಾಮೀಜಿ ಅವರ ಜನ್ಮದಿನದಂದು ಆಯೋಜಿಸಿದ್ದ ಕಾರ್ಯಕ್ರಮ ಮಾದರಿಯಾಗಿದ್ದು, ಶ್ರೀಗಳ ಜನ್ಮದಿನವೇ ಶರಣ ಸಾಹಿತ್ಯ ಪರಿಷತ್ತು ಜನ್ಮ ತಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.
ಪ್ರಧಾನ ಗುರುಗಳಾದ ಎ ವ್ಹಿ ರೋಣದ ಸ್ವಾಗತಿಸಿದರು. ಭಾಷಾ ಶಿಕ್ಷಕ ಬಸವರಾಜ ಬಂಡಿ ನಿರೂಪಿಸಿದರು.ಶಿಕ್ಷಕ ರಾಜಶೇಖರ ಮಲ್ಲಾಪುರ ಮಠ ವಂದಿಸಿದರು