ಡಾಕ್ಟರ್ ಎಂ ಎಂ ಕಲಬುರ್ಗಿ ಅವರು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನ ಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ, ಹಸ್ತ ಪ್ರತಿ ಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪೂರ್ಣ ಅಧ್ಯಯನವಿದೆ ಎಂದು ಡಾ. ವೀರಣ್ಣ ದಂಡೆ ಹೇಳಿದರು
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 27 ನೆಯ ದಿವಸ ಅವರು ಮಾತನಾಡಿದರು.
ಡಾ. ಎಂ. ಎಂ. ಕಲ್ಬುರ್ಗಿ ಅವರು ಇಂದಿಗೆ ಹತ್ಯೆಯಾಗಿ ಒಂಬತ್ತು ವರ್ಷ ಕಳೆದವು, ಇದು ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯಿತು ಎಂದು ಅವರು ವೇದನಾಪೂರ್ವಕ ನುಡಿದರು
ಡಾಕ್ಟರ್ ಎಂ ಎಂ ಕಲ್ಬುರ್ಗಿಯವರು 1938ರ ನವೆಂಬರ್ 28ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು ಇವರ ತಾಯಿ ಗುರಮ್ಮ ತಂದೆ ಮಡಿವಾಳಪ್ಪನವರು.ಕಲ್ಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ 1960ರಲ್ಲಿ ಬಿಎ ಮತ್ತು 62 ರಲ್ಲಿ ಎಂ.ಎ ಪದವಿಗಳನ್ನು ಪ್ರಥಮ ಸ್ಥಾನದೊಂದಿಗೆ ಪಡೆದರು. 1968ರಲ್ಲಿ ಅವರು ಡಾಕ್ಟರ್ ಆರ್ ಸಿ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಸಂದಿತು .1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಲ್ಬುರ್ಗಿಯವರು 1960ನೇ ಇಸವಿಯಲ್ಲಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿ ಸುಮಾರು 19 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಕಲ್ಬುರ್ಗಿಯವರು ಒಟ್ಟಿನಲ್ಲಿ 39 ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಅನೇಕ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು 1998ರಿಂದ 2001 ರ ಕಾಲಾವಧಿಯಲ್ಲಿ ಕಲ್ಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು, ಎನ್ನುವುದನ್ನು ಹಂಚಿಕೊಂಡರು.
ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಮಾಡಿದ ಕಲ್ಬುರ್ಗಿಯವರು ನಿವೃತ್ತಿಯ ನಂತರವೂ ಅವರು ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನ ರಾದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ 15 ಸಂಪುಟಗಳ ವಚನ ಸಾಹಿತ್ಯ ಸಂಪುಟ ಮಾಲಿಕೆಗಳ ಪ್ರಧಾನ ಸಂಪಾದಕರಾಗಿದ್ದರು.ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲ್ಬುರ್ಗಿಯವರ ಪ್ರಧಾನ ಆಸಕ್ತಿ ಯಾಗಿತ್ತು ಅವರು 75ಕ್ಕೂ ಹೆಚ್ಚು ಪುಸ್ತಕಗಳನ್ನು ನಾನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ , ಮಾರ್ಗ, ಐತಿಹಾಸಿಕ ,ಯುವ ಸಂಶೋಧನಾ ಗ್ರಂಥಗಳು ಶಾಸನ ವ್ಯಾಸಂಗ ಶಾಸನ ಸಂಪದ, ಧಾರವಾಡ ಜಿಲ್ಲೆಯ ಶಾಸನ ಸೂಚಿ ಇವು ಶಾಸನ ಗ್ರಂಥಗಳು. ಅವರ ಪ್ರಮುಖ ಶೈಕ್ಷಣಿಕ ಗ್ರಂಥಗಳೆಂದರೆ ಕನ್ನಡ ಗ್ರಂಥ ಸಂಪಾದನಾ ಶಾಸ್ತ್ರ, ಕನ್ನಡ ಹಸ್ತಪ್ರತಿ ಶಾಸ್ತ್ರ, ಕನ್ನಡ ಸಂಶೋಧನಾ ಶಾಸ್ತ್ರ ಮತ್ತು ಕನ್ನಡ ಸ್ಥಳ ನಾಮ ವಿಜ್ಞಾನ. ಅವರ 30ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದರು.ಶಿವಯೋಗ ಪ್ರದೀಪ ಕೊಂಡಗುಳಿಕೆ ಶ್ರೀ ರಾಜನ ಕೃತಿಗಳು ಬಸವಣ್ಣನ ಟೀಕಿನ ವಚನಗಳು ನಾಯಕನ ಸಾಂಗತ್ಯ ಹೀಗೆ ಅವರ ಸಂಪಾದನೆಗಳು ಬೃಹತ್ ಪಟ್ಟಿ ಬೆಳೆಯುತ್ತದೆ. ಅಪಾರ ಸಾಧನೆ ಮಾಡಿರುವ ಕಲ್ಬುರ್ಗಿ ಅವರ ಪ್ರಮುಖ ಕೃತಿಗಳೆಂದರೆ ಜಾನಪದ ಮಾರ್ಗ ಮತ್ತು ಉತ್ತರ ಕರ್ನಾಟಕದ ಜನಪದ ಸಾಹಿತ್ಯ ಎನ್ನುವುದನ್ನು ಸ್ಮರಿಸಿದರು.
ಕಲ್ಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಂಪ ಪ್ರಶಸ್ತಿ ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ಮಾರ್ಗ ನಾಲ್ಕು ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಕಳಿಸಿದೆ ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ ಕಲ್ಬುರ್ಗಿ 60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಲಾಗಿರುವ ಅಭಿನಂದನಾ ಗ್ರಂಥಗಳಲ್ಲಿ ಮುಖ್ಯವಾದವು. ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ನೃಪತುಂಗ ಪ್ರಶಸ್ತಿ ಪ್ರಧಾನ ಮಾಡಿತ್ತು ಎನ್ನುವುದನ್ನು ಹಂಚಿಕೊಂಡರು.
ಗದುಗಿನ ತೋoಟದ ಸಿದ್ಧಲಿಂಗೇಶ್ವರ ಮಠ, ಬೆಳಗಾವಿಯ ನಾಗನೂರು ಮಠ, ನಿಡಸೋಸಿಯ ಶಿವಲಿಂಗೇಶ್ವರ ಮಠ, ಸುತ್ತೂರು ಮಠ, ವಿಜಯಪುರದ ಸಾರಂಗಮಠ, ಮಲೆನಾಡಿನ ಅನಂತಪುರದ ಮಠ, ಇಲ್ಲಿ ಪ್ರತಿಯೊಂದು ಕಡೆಯೂ ಅಧ್ಯಯನ ಸಂಸ್ಥೆ ಸ್ಥಾಪಿಸುವ ವಿಚಾರ ಮತ್ತು ಶಕ್ತಿ ಕಲ್ಬುರ್ಗಿ ಅವರದು ಎನ್ನುವುದನ್ನು ಅಭಿಮಾನದಿಂದ ಹಂಚಿಕೊಂಡರು.
ಕಲ್ಬುರ್ಗಿ ಅವರ ಹತ್ಯೆಯ ಕೊನೆಯ ಕ್ಷಣಗಳ ಕರ್ನಾಟಕದ ಎಲ್ಲ ಪೇಪರ್ ಗಳಲ್ಲಿ ಬಂದ ವರದಿಯನ್ನು ಮತ್ತು ಜಗತ್ತಿನಾದ್ಯoತ ಅಂತಾರಾಷ್ಟ್ರೀಯ ಪತ್ರಿಕೆಗಳ ಕಿರುನೋಟವನ್ನು ನಮ್ಮೊಂದಿಗೆ ಅತ್ಯಂತ ಕಳಕಳಿಯಿಂದ ಹಂಚಿಕೊಳ್ಳುತ್ತಾ, ತಮ್ಮ ಮಾತುಗಳಿಗೆ ವಿರಾಮ ಹೇಳಿದರು
ಡಾ. ಶಶಿಕಾಂತ ಪಟ್ಟಣ ಅವರು ತಾವು PUC ಕಲಿಯುವಾಗ ಮೊಟ್ಟಮೊದಲು ಕಲ್ಬುರ್ಗಿ ಸರ್ ಅವರನ್ನು ನೋಡಿದ್ದು, ನಂತರದ ದಿನಗಳಲ್ಲಿ ಅವರಿಗೆ ಅತ್ಯಂತ ಆಪ್ತರಾಗಿದ್ದು, ಧಾರವಾಡಕ್ಕೆ ಹೋದಾಗಲೊಮ್ಮೆ ಅವರ ಜೊತೆಗೆ ಐದು -ಆರು ತಾಸುಗಳ ವೈಚಾರಿಕ ಚಿಂತನೆಯನ್ನು ಹೇಳುತ್ತಾ, ಅವರ ಗುಣಗ್ರಾಹಿಕೆ, ಹಾಸ್ಯ ಪ್ರವೃತ್ತಿ, ನಿರಪೇಕ್ಷತೆಯ ಗುಣ, ಸ್ನೇಹಪರ ವ್ಯಕ್ತಿತ್ವವನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡರು. ಅವರು ಕೋಲoಬಸ್ ಇದ್ದ ಹಾಗೆ, ಅವರು ನಡೆದದ್ದೇ ದಾರಿ, ಎಂದು ನೆನೆಸಿಕೊಳ್ಳುತ್ತಾ, ಕಲ್ಬುರ್ಗಿ ಅವರು ಬಿದ್ದ ಮರವಲ್ಲ, ಬಿತ್ತಿದ ಬೀಜ, ಅವರ ಸತ್ಯವನ್ನು ಎಂದೆಂದೂ ಕೊಲ್ಲಲಾಗುವುದಿಲ್ಲ ಎನ್ನುವ ತಮ್ಮ ಮನದಾಳದ ನುಡಿಗಳನ್ನು ಹೇಳಿ, ಕಲ್ಬುರ್ಗಿ ಮನೆತನದವರು ಎಂ. ಎಂ. ಕಲ್ಬುರ್ಗಿ ಪ್ರತಿಷ್ಟಾನ ಸ್ಥಾಪಿಸಿ, ಅದರ ಮೂಲಕ ವಚನ ಸಿರಿ ಮತ್ತು ಸಾಹಿತ್ಯ ಸಿರಿ ಪ್ರಶಸ್ತಿ ಕೊಡುತ್ತಿರುವ ಶ್ಲಾಘನೀಯ ಕಾರ್ಯವನ್ನು ಹಂಚಿಕೊಂಡರು
ಸಂವಾದದಲ್ಲಿ ಕಲ್ಬುರ್ಗಿಯವರ ವಿದ್ಯಾರ್ಥಿಗಳಾದ ಡಾ. ವೀಣಾ ಎಲಿಗಾರ ಮೇಡಂ,ಡಾ. ಕಸ್ತೂರಿ ದಳವಾಯಿ ಮೇಡಂ ಡಾ. ಬಸಮ್ಮ ಗಂಗನಳ್ಳಿ ಮೇಡಂ ಅವರು ಅತ್ಯಂತ ಗದ್ಗದಿತರಾಗಿ ತಮ್ಮ ಅಭಿಮಾನದ ನುಡಿಗಳನ್ನು ಹಂಚಿಕೊಂಡರು.
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಡಾ. ಸರೋಜಾ ಜಾಧವ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ
ಶರಣೆ ಪ್ರೇಮಕ್ಕ ಅಣ್ಣಿಗೇರಿ ಅವರ ಶರಣು ಸಮರ್ಪಣೆ, ಶರಣೆ ಬಬಿತಾ ಪಂಚಣ್ಣವರ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯ್ತು. ಶರಣೆ ಸ್ಮಿತಾ ಪಾವಟೆ ಅವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ