ಬಿಸಿಲ ಬೇಗೆಯನುಂಡು ಛತ್ರಿ ನೆರಳೀಯುವುದು
ನೆನೆನೆನೆದು ಮಳೆಯಿಂದ ರಕ್ಷಿಸುವುದು
ಕಷ್ಟಕೋಟಲೆ ನುಂಗಿ ಜನಕೆ ಸುಖ ನೀಡುವರು
ಸಾಧುಗಳ ಹೆಗ್ಗಳಿಕೆ – ಎಮ್ಮೆತಮ್ಮ
ಶಬ್ಧಾರ್ಥ
ಬೇಗೆ = ತಾಪ.ಈ = ಕೊಡು.ಕೋಟಲೆ = ತೊಂದರೆ.
ಸಾಧು = ಒಳ್ಳೆ ಸ್ವಭಾದವ.ಹೆಗ್ಗಳಿಕೆ = ದೊಡ್ಡಸ್ತಿಕೆ.
ತಾತ್ಪರ್ಯ
ಸೂರ್ಯನ ಚುರುಕಾದ ಬಿಸಿಲಿನ ತಾಪವನ್ನು
ತಡೆದುಕೊಂಡು ಮತ್ತು ಧಾರಾಕಾರವಾಗಿ ಸುರಿಯುವ
ಮಳೆಯ ನೀರಿನಿಂದ ತೊಯ್ಸಿಕೊಂಡು ಹಿಡಿದವನನ್ನು
ಛತ್ರಿ ಕಾಪಾಡುತ್ತದೆ. ಹಾಗೆ ಒಳ್ಳೆಯ ಸ್ವಭಾವದ ಮನುಷ್ಯರು
ತಮಗೆ ಬಂದ ಅನೇಕ ಸಂಕಟ ತೊಂದರೆಗಳನ್ನು
ಸಹಿಸಿಕೊಂಡು ಜನರ ಕಷ್ಟ ಪರಿಹರಿಸಲು ಸಹಾಯಮಾಡುತ್ತಾರೆ. ಅಂಥವರ ದೊಡ್ಡಸ್ತಿಕೆ ಮೆಚ್ಚುವಂಥದ್ದು. ಸಜ್ಜನರ ಮನಸ್ಸು ಬೆಣ್ಣೆಗಿಂತ ಶ್ರೇಷ್ಠ.
ಏಕೆಂದರೆ ಬೆಣ್ಣೆ ಬಿಸಿಗೆ ಮಾತ್ರ ಕರಗುತ್ತದೆ. ಆದರೆ ಇವರ
ಹೃದಯ ಜನರ ಕಷ್ಟಗಳನ್ನು ಕಂಡು ಕನಿಕರದಿಂದ ಕರಗಿ
ನೀರಾಗಿಬಿಡುತ್ತವೆ. ಗಿಡಗಳು ಹಣ್ಣುಬಿಡುವುದು, ಆಕಳು
ಹಾಲು ಕೊಡುವುದು , ಹೊಳಹಳ್ಳಗಳು ಹರಿಯುವುದು,
ಮೋಡ ಮಳೆ ಸುರಿಸುವುದು, ತಂಗಾಳಿ ಬೀಸುವುದು,
ಸೂರ್ಯ ಹೊಂಬೆಳಕು ಹರಿಸುವುದು, ಚಂದ್ರ ಬೆಳದಿಂಗಳು
ಸುರಿಸುವುದು ಮತ್ತು ಸಜ್ಜನರ ಸೇವೆಮಾಡುವುದು ಪರೋಪಕಾರಕ್ಕಾಗಿ. ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ ಎಂಬ ಕವಿವಾಣಿಯಂತೆ ಸಜ್ಜನರ ಬದುಕು ಸಾರ್ಥಕವಾದದ್ದು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990