ಹುಯಿಲಗೋಳ ನಾರಾಯಣರಾಯರು ( 1884 – 1971 ) – ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.
1884 ಅಕ್ಟೋಬರ್ 4 ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902 ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. 1907 ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಮುಂಬೈಗೆ ತೆರಳಿ ಕಾನೂನು ಪದವಿಯನ್ನು ಪಡೆದು 1911 ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.
ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ.
# ನಾಟಕಗಳು
ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದ್ದಾರೆ. ಅವುಗಳ ಪಟ್ಟಿ ಕೆಳಕಂಡಂತಿವೆ.
ವಜ್ರಮುಕುಟ (1910)
ಕನಕವಿಲಾಸ (1913)
ಪ್ರೇಮಾರ್ಜುನ (1912)
ಮೋಹಹರಿ (1914)
ಅಜ್ಞಾತವಾಸ (1915)
ಪ್ರೇಮವಿಜಯ (1917)
ಸಂಗೀತ ಕುಮಾರರಾಮ ಚರಿತ (1917)
ವಿದ್ಯಾರಣ್ಯ (1921)
ಭಾರತಸಂಧಾನ (1918)
ಉತ್ತರ ಗೋಗ್ರಹಣ (1922)
ಸ್ತ್ರೀಧರ್ಮರಹಸ್ಯ (1919)
ಶಿಕ್ಷಣಸಂಭ್ರಮ (1920)
ಪತಿತೋದ್ಧಾರ (1952)
1954 ರಲ್ಲಿ ಇವರ “ಪತಿತೋದ್ಧಾರ” ನಾಟಕಕ್ಕೆ ಮುಂಬಯಿ ಸರಕಾರದ ಬಹುಮಾನ ದೊರೆಯಿತು. ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆ ಗದಗಿನಲ್ಲಿ ವಿಧ್ಯಾದಾನ ಸಮಿತಿಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು.
ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರು ರಚಿಸಿದ ಗೀತೆ, ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ 1924 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಮಹಾತ್ಮ ಗಾಂಧಿಯವರು ಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು 1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.
ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ