ಕೊಟ್ಟು ನೋಡುವನೊಮ್ಮೆ ಕಳೆದುನೋಡುವನೊಮ್ಮೆ
ಈ ರೀತಿ ಮಾನವರ ಪರಿಕಿಸುವನು
ಕೊಟ್ಟಾಗ ಗಳಗದಿರು ಕಳೆದಾಗ ಗೊಣಗದಿರು
ಮೆಚ್ಚುವನು ಪರಮೇಷ್ಠಿ ಎಮ್ಮೆತಮ್ಮ
ಶಬ್ಧಾರ್ಥ
ಪರಿಕಿಸು = ಪರೀಕ್ಷಿಸು. ಗಳಹು = ಸುಮ್ಮನೆ ಮಾತಾಡು ಗೊಣಗು = ವಟಗುಡು, ಅಸಮಾಧಾನದ ಮಾತಾಡು
ತಾತ್ಪರ್ಯ
ದೇವರು ಒಮ್ಮೆ ಸುಖ ಕೊಟ್ಟು ನೋಡುವನು. ಮತ್ತೊಮ್ಮೆ
ಕಷ್ಟ ಕೊಟ್ಟು ನೋಡುವನು. ಹೀಗೆ ಮಾನವನ ಗುಣವನ್ನು
ಪರೀಕ್ಷೆಮಾಡುತ್ತಾನೆ.ಸುಖ ಕೊಟ್ಟಾಗ ನನ್ನ ದುಡಿತದಿಂದ ಸುಖ ದೊರೆಯಿತೆಂದು ಗರ್ವದಿಂದ ದೇವರನ್ನು ಮರೆತು ಮಾತಾಡಬಾರದು. ಕಷ್ಟ ಕೊಟ್ಟಾಗ ನನ್ನ ಕರ್ಮ ಎಂದು ವಟಗುಡುಗುತ್ತ ದೇವರನ್ನು ದೂರಬಾರದು. ಯಾರು ಕಷ್ಟವೆ ಬರಲಿ ಸುಖವೆ ಬರಲಿ ಸ್ಥಿತಪ್ರಜ್ಞನಾಗಿ ದೇವರನ್ನು ಮರೆಯುವುದಿಲ್ಲವೋ ಅವರನ್ನು ದೇವರು ಮೆಚ್ಚುತ್ತಾನೆ. ಅವನು ಕೊಟ್ಟ ಕೆಲವು ಪರೀಕ್ಷೆಯಲ್ಲಿ ಉತ್ತೀರ್ಣನಾದರನ್ನು ದೇವರು ಕೈಹಿಡಿದು ಮೇಲಕೆತ್ತುತ್ತಾನೆ. ಇದನ್ನೆ ಮಡಿವಾಳ ಮಾಚಿದೇವರು ತಮ್ಮದೊಂದು ವಚನದಲ್ಲಿ ಹೀಗೆ ಹೇಳಿದ್ದಾರೆ.
ಸುಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.ದುಃಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.ಅಂದರೆ ಜೀವನದಲ್ಲಿ ಏನೇ ಬಂದರು ಅದು ಶಿವನ ಪ್ರಸಾದ.ಅವನು ಕೊಟ್ಟದ್ದು ಕೆಟ್ಟದ್ದಿರಲಿ ಅಥವಾ ಒಳ್ಳೆಯದಿರಲಿ ಅದನ್ನು ಪ್ರೀತಿಯಿಂದ ಸ್ವೀಕರಿಸಿ ಸಮಾಧಾನಿಯಾಗಿದ್ದರೆ ದೇವ ಮೆಚ್ಚುತ್ತಾನೆ ಮತ್ತು ಸದ್ಗತಿ ತೋರುತ್ತಾನೆ. ದೇವ ಕಷ್ಟವೆ ಕೊಡಲಿ ಅಥವಾ ಸುಖವ ಕೊಡಲಿ ನಮಗೆ ಪಾಠ ಕಲಿಸಲು ಕೊಡುತ್ತಾನೆ. ಅದರಿಂದ ಪಾಠ ಅಥವಾ ಶಿಕ್ಷಣ ಪಡೆವುದಕ್ಕಾಗಿ ಭುವಿಗೆ ಬಂದಿದ್ದೇವೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990