ಗೋಕಾಕ – ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಕೋರಿದ್ದಾರೆ.
ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ಮಾರಕವಾಗಿದ್ದ ರಾಕ್ಷಸಿ ಸಮೂಹವನ್ನು ಸಂಹಾರ ಮಾಡಿ ಶೋಷಣೆ ರಹಿತ, ವರ್ಗ ರಹಿತ, ಜಾತಿ ರಹಿತ, ಸಮಪಾಲು- ಸಮಬಾಳು, ಸರಿ ಸಮಾನವಾದ ಅವಕಾಶದ ಸಂದೇಶಗಳನ್ನು ಸಾರಿದ್ದಾರೆ. ಈ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ.
ರಾಮಾಯಣವನ್ನು ರಚನೆ ಮಾಡಿ ಆದಿ ಕವಿಯಾಗಿಯಾಗಿದ್ದಾರೆ. ರಾಮಾಯಣದಲ್ಲಿ ರಾಜ ಭಕ್ತಿ, ಪಿತೃ ಭಕ್ತಿ, ಸ್ವಾಮಿ ಭಕ್ತಿ, ಆಚಾರ್ಯ ನಿಷ್ಟೆ, ಸಹೋದರತ್ವ, ಸ್ವಾರ್ಥ ತ್ಯಾಗ ಮುಂತಾದ ಅರ್ಥಗರ್ಭಿತ ವಿಷಯಗಳನ್ನು ಮನೋಜ್ಞವಾಗಿ ರೂಪಿಸಿದ್ದಾರೆ.
ಈ ಮೂಲಕ ಪ್ರತಿಯೊಬ್ಬರೂ ಅಕ್ಷರ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆನ್ನುವ ಸಂದೇಶವನ್ನು ಮನು ಕುಲಕ್ಕೆ ವಾಲ್ಮೀಕಿಯವರು ಸಾರಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಅಕ್ಷರ ಸುಖಿ ಸುಂದರ ಸಮಾಜವನ್ನು ನಿರ್ಮಾಣವಾಗಬೇಕು. ಶ್ರೇಷ್ಠ ಮಹಾಕಾವ್ಯವಾದ ರಾಮಾಯಣವನ್ನು ಪಠಿಸಿ ಜೀವನವನ್ನು ಸಾಕಾರಗೊಳಿಸೋಣ ಎಂದು ಅವರು ಹೇಳಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಮಟ್ಟದಲ್ಲಿ ಆಚರಿಸಲು ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವು ೨೦೧೧ ರ ಅಕ್ಟೋಬರ್ ತಿಂಗಳಲ್ಲಿ ಸುತ್ತೋಲೆ ಹೊರಡಿಸಿತು. ಜತೆಗೆ ವಾಲ್ಮೀಕಿಯ ಜಯಂತಿಯಂದು ಸಾರ್ವಜನಿಕ ರಜೆಯನ್ನು ಘೋಷಿಸಿತು ಎಂದು ಸ್ಮರಿಸಿಕೊಂಡರು.
ಸಮಾಜದ ಬದಲಾವಣೆಗಾಗಿ ಪ್ರತಿಯೊಬ್ಬರೂ ಸಾಕ್ಷರವಂತರಾಗಬೇಕು. ಅಕ್ಷರ ಜ್ಞಾನವನ್ನು ಹೊಂದಿದರೆ ಮಾತ್ರ ನಾವು ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಾಗುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಮಹರ್ಷಿ ವಾಲ್ಮೀಕಿಯವರ ಸಂದೇಶಗಳನ್ನು ಪಾಲಿಸಬೇಕು. ಉತ್ತಮವಾದ ಸುಂದರ ಸಮಾಜವನ್ನು ನಿರ್ಮಿಸುವ ಮೂಲಕ ಆದಿ ಕವಿಗೆ ಗೌರವಾರ್ಪಣೆ ಸಲ್ಲಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಶುಭ ಕೋರಿದ್ದಾರೆ.