ಮನೆಯಲ್ಲಿ ಸಂಪತ್ತು ತುಂಬಿತುಳುಕಿದರೇನು?
ಮನದಲ್ಲಿ ದಾರಿದ್ರ್ಯ ತುಂಬಿದ್ದರೆ
ಮನೆಯ ಸಿರಿತನಕಿಂತ ಮನದ ಸಿರಿತನ ಮೇಲು
ಮನದಿ ನೀ ಧಣಿಯಾಗು – ಎಮ್ಮೆತಮ್ಮ
ಶಬ್ಧಾರ್ಥ
ಧಣಿ = ಧನಿಕ , ಒಡೆಯ, ಹಣವಂತ
ತಾತ್ಪರ್ಯ
ಭೌತಿಕ ಸಂಪತ್ತಿಗಿಂತ ಆಂತರಿಕ ಗುಣಸಂಪತ್ತು ಇರಬೇಕೆಂದು ಈ ಕಗ್ಗ ಉಸುರುತ್ತದೆ. ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಇಲ್ಲದೆ ಮನೆಯಲ್ಲಿ ಧನಕನಕ ತುಂಬಿದ್ದರೇನು ಉಪಯೋಗವಿಲ್ಲ. ಭಾವಸಂಪತ್ತು ಇದ್ದರೆ ಸಾಕು ಮನೆಯಲ್ಲಿ ತನ್ನಷ್ಟಕ್ಕೆ ತಾನು ಸಂಪತ್ತು ವೃದ್ಧಿಯಾಗುತ್ತದೆ. ನಮ್ಮ ಮನದಲ್ಲಿ ದರಿದ್ರತನ ಇದ್ದರೆ ಸಾಕು ಧನವೆಲ್ಲ ಕರಗಿಹೋಗಿ ಬಡತನ ಬಂದು ವಕ್ಕರಿಸುತ್ತದೆ. ಆದಕಾರಣ ಮನೆಯ ಸಿರಿತನಕಿಂತ ಮನದ ಸಿರಿತನ ಒಳ್ಳೆಯದು. ಏಕೆಂದರೆ ಮನದ ಸಿರಿತನದಿಂದ ಮನೆಯ ಸಿರಿತನ ಉಂಟಾಗುತ್ತದೆ. ಮನಸಿನ ಬಡತನದಿಂದ ಮನೆಯಲ್ಲಿ ಬಡತನವೆ ನುಸುಳುತ್ತದೆ. ಯಾವಾಗಲು ಸಿರಿತನದ ಬಗ್ಗೆ ಯೋಚಿಸುತ್ತದ್ದರೆ ಸಿರಿತನವೆ ಬರುತ್ತದೆ.
ಯದ್ಭಾವಂ ತದ್ಭವತಿ. ನಮ್ಮ ಯೋಚನೆಗೆ ಅದ್ಭುತ ಶಕ್ತಿಯಿದೆ.
ನಾನು ಶ್ರೀಮಂತನಿದ್ದೇನೆ ಎಂದು ಮನಸಿನಲ್ಲಿ ಚಿಂತಿಸುತ್ತ
ಕಲ್ಪನೆ ಮಾಡುತ್ತಿದ್ದರೆ ಆಕರ್ಷಣೆಯ ನಿಯಮ ಧನವನ್ನು
ಆಕರ್ಷಣೆ ಮಾಡಿ ತಂದುಕೊಡುತ್ತದೆ. ಅದಕ್ಕೆ ನಮ್ಮ ಸಂತರು
ಮನಸ್ಸನ್ನೆ ಚಿಂತಾಮಣಿ, ಕಲ್ಪವೃಕ್ಷ, ಕಾಮಧೇನು ಎಂದು
ಕರೆದಿದ್ದಾರೆ. ಅದು ಚಿಂತಿಸಿದ್ದನ್ನೆಲ್ಲ ಕೊಡುತ್ತದೆ.ಆದರೆ
ಬಲವಾದ ನಂಬಿಗೆ ಇರಬೇಕಾಗುತ್ತದೆ. ಆದಕಾರಣ
ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದ್ದರೆ ಸಾಕು ನಿಜವಾಗಿ
ಶ್ರೀಮಂತನಾಗುವುದು ಖಚಿತ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990