ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ
ಶಿರಬಾಗು ಹಿರಿಯರಿಗೆ ಹೆತ್ತವರಿಗೆ
ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ
ಬಾಗಿದವ ಬಾಳುವನು – ಎಮ್ಮೆತಮ್ಮ
ಶಬ್ಧಾರ್ಥ
ಗಣ್ಯರು = ಗಣನೀಯವಾದವರು
ಮಾನ್ಯರು = ಮನ್ನಣೆಗೆ ಪಾತ್ರರಾದವರು
ತಾತ್ಪರ್ಯ
ಗುರುಗಳಲ್ಲಿ ಗಣ್ಯರಲ್ಲಿ ಮಾನ್ಯರಲ್ಲಿ ಹಿರಿಯರಲ್ಲಿ ಮತ್ತು
ತಂದೆತಾಯಿಗಳಲ್ಲಿ ಭಕ್ತಿಗೌರವ ಇರಬೇಕು. ಅವರನ್ನು
ನಮಸ್ಕರಿಸುವುದರಿಂದ ಅವರು ಹರಸಿ ಹಾರೈಸುತ್ತಾರೆ.
ಅವರಲ್ಲಿ ಒಂದು ಅದ್ಬುತ ಶಕ್ತಿಯಿರುತ್ತದೆ. ಅವರ ಹರಕೆಯಿಂದ ಜೀವನದಲ್ಲಿ ಒಳಿತು ಉಂಟಾಗುತ್ತದೆ.
ಗುರುಗಳಲ್ಲಿ ವಿನಮ್ರದಿಂದ ವರ್ತಿಸಿದರೆ ಅವರು ತಮ್ಮ
ವಿದ್ಯೆಯನ್ನು ಧಾರೆಯೆರೆಯುತ್ತಾರೆ. ವಿದ್ಯೆಗೆ ವಿನಯವೇ ಭೂಷಣ. ಗುರುಹಿರಿಯರನ್ನು ಅವಮಾನಿಸಿದರೆ ಕೇಡು ತಪ್ಪುವುದಿಲ್ಲ. ಅವರೆಲ್ಲ ದೇವರಿಗೆ ಸಮಾನರು. ಹಾಗೆ ತಂದೆ ತಾಯಿಗಳು ತಮ್ಮ ಜೀವನವನ್ನು ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸುತ್ತಾರೆ.ತಂದೆ ತಾಯಿಗಳ ಪಾದದಲ್ಲಿ ಸಕಲ ಪುಣ್ಯಕ್ಷೇತ್ರಗಳಿವೆ.ಅವರಿಗೆ ನಮಿಸುವುದರಿಂದ ಪುಣ್ಯಕ್ಷೇತ್ರ ದರ್ಶನಕಿಂತ ಹೆಚ್ಚಿನ ಪುಣ್ಯ ಬರುತ್ತದೆ. ಹಾಗೆಯೆ ನಮಗೆಲ್ಲ ಕೊಟ್ಟ ಭಗವಂತನಲ್ಲಿ ಸಂಪೂರ್ಣವಾಗಿ ಅಹಂ ತೊರೆದು ಅವನಲ್ಲಿ ಶರಣಾಗತನಾಗಬೇಕು.ಎಲ್ಲರಿಗೆ ಬಾಗಿ ವಿನಯದಿಂದ ನಡೆದುಕೊಳ್ಳುವವನು ನೂರ್ಕಾಲ ಸುಖವಾಗಿ ಬದುಕುತ್ತಾನೆ. ಬಾಗಿದ ಬಾಳೆ ಮತ್ತು ಭತ್ತ ದೇವರಿಗೆ ನೈವೇದ್ಯವಾಗುವಂತೆ ಬಾಗಿದವನ ಜೀವನ ಸಾರ್ಥಕವಾಗುತ್ತದೆ
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990