ಸಿಂದಗಿ: ಮಂಡ್ಯದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ವಿಚಾರ ಖಂಡಿಸಿ, ಮಾಧ್ಯಮರಂಗ ಫೌಂಡಶನ್ ವತಿಯಿಂದ ಗುರುವಾರ ತಾಲೂಕು ಆಡಳಿತ ಕಚೇರಿ ಮುಂದೆ ಹೋರಾಟ ನಡೆಸಲಾಯಿತು.
ಯುವ ಬರಹಗಾರರು, ಫೌಂಡೇಶನ್ ಪದಾಧಿಕಾರಿಗಳು, ಪತ್ರಕರ್ತರು, ಕನ್ನಡ ಪರ ಸಂಘಟನೆಗಳ ಮುಖಂಡರು, ರೈತಪರ ಸಂಘಟನೆಗಳ ಮುಖಂಡರು, ಸಾಹಿತ್ಯದ ಅಭಿಮಾನಿಗಳು ಸೇರಿದಂತೆ ಸಮಾನ ಮನಸ್ಕರೆಲ್ಲ ಸೇರಿ ಪ್ರಸ್ತುತ ಚರ್ಚೆಯಲ್ಲಿರುವ ವಿಚಾರವನ್ನು ವಿರೋಧಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ, ಯುವ ಬರಹಗಾರ ನಾಗೇಶ ತಳವಾರ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯಕ್ಕೆ ಸಾವಿರಾರು ವರ್ಷ ಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಮ್ಮೇಳನಕ್ಕೆ ಗೌರವ ಘನತೆಯಿದೆ. ಈಗ ಚರ್ಚೆಗೆ ಗ್ರಾಸವಾಗಿರುವ ಸಾಹಿತ್ಯೇತರರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುವ ವಿಚಾರ ಸರಿಯಾದ ಕ್ರಮವಲ್ಲ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿಯವರ ನಡೆ ಸರಿಯಾದುದ್ದಲ್ಲ. ಯಾವುದೇ ಕಾರಣಕ್ಕೂ ಸಾಹಿತಿಗಳಿಗೆ ಅವಮಾನ ಮಾಡುವ ಕೆಲಸವಾಗಬಾರದು ಎಂದು ಆಕ್ರೋಶ ಹೊರ ಹಾಕಿದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಧ ಅಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನಕ್ಕೆ ಅದರದೆಯಾದ ಗೌರವವಿದೆ. ನಾಡಿಗೆ ಲೇಖಕರ ಕೊಡುಗೆ ದೊಡ್ಡದಿದ್ದು, ಅದೇ ಕ್ಷೇತ್ರದ ಸಾಧಕರನ್ನು ಹೊರತುಪಡಿಸಿ ಇತರರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಬಾರದು ಎಂದು ಒತ್ತಾಯಿಸಿದರು.
ಪತ್ರಕರ್ತ ನಿಂಗರಾಜ ಅತನೂರ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೂ ರಾಜಕಾರಣಿಗಳನ್ನು, ಮಠಾಧೀಶರನ್ನು ಸೇರಿ ಇತರರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವುದು ಸರಿಯಾದ ಕ್ರಮವಲ್ಲ. ಅವರಿಗೆ ಅವರದೆಯಾದ ವೇದಿಕೆಗಳಿವೆ. ಇಲ್ಲಿ ಲೇಖಕರಿಗೆ ಆದ್ಯತೆ ನೀಡಬೇಕು. ಇಲ್ಲದೆ ಹೋದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಫೌಂಡೇಶನ್ ಸಹ ಕಾರ್ಯದರ್ಶಿ ಮಲ್ಲು ಹಿರೋಳ್ಳಿ, ಸದಸ್ಯ ರಮೇಶ ಪೂಜಾರಿ(ಆಲಮೇಲ), ಯುವ ಬರಹಗಾರ ಸಿದ್ದರಾಮ ಬ್ಯಾಕೋಡ, ಕನ್ನಡಪರ ಸಂಘಟನೆಯ ಮುಖಂಡರಾದ ಸಂತೋಷ ಮಣಿಗಿರಿ, ಸಂತೋಷ ಮನಗೂಳಿ, ಚಂದ್ರಶೇಖರ ದೇವರೆಡ್ಡಿ, ರೈತ ಸಂಘಟನೆಯ ಬಸವರಾಜ ರಂಜಣಗಿ, ಶಿವಕುಮಾರ ಬಿರಾದಾರ, ಬಸವರಾಜ ಕೆ ಐರೋಡಗಿ, ಪತ್ರಕರ್ತರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮಹಾಂತೇಶ ನೂಲಾನವರ ಹಾಗೂ ರಾಜಶೇಖರ ಶೆಟ್ಟಿ, ರಾಸ್ಸರ ಕ್ಷತ್ರಿ, ರಾಮಚಂದ್ರ ಇಳಿಗೇರ, ಸುದೀಪ ಹಿರೋಳ್ಳಿ, ಕರ್ಣ ಪಾಟೀಲ, ವಿಜು ಪತ್ತಾರ ಸೇರಿದಂತೆ ಇತರರು ಭಾಗವಹಿಸಿದ್ದರು.