ಏಸುಯೀಶರ ನಾಮ ಬಸವಬುದ್ಧರ ನಾಮ
ರಾಮನಲ್ಲಾ ಕೃಷ್ಣಜಿನನ ನಾಮ
ಮನಸಿನೇಕಾಗ್ರತೆಗೆ ಬೇಕೊಂದು ಸವಿನಾಮ
ನೆನೆದದ್ದೆ ವರಮಂತ್ರ – ಎಮ್ಮೆತಮ್ಮ
ಶಬ್ಧಾರ್ಥ
ವರಮಂತ್ರ = ಶ್ರೇಷ್ಠಮಂತ್ರ
ತಾತ್ಪರ್ಯ
ಏಸು, ಈಶ, ಬಸವ, ಬುದ್ಧ, ರಾಮ, ಅಲ್ಲಾ, ಕೃಷ್ಣ, ಜಿನ ಮುಂತಾದ ಯಾವುದಾದರೊಂದು ನಾಮ ಮನಸಿನ ಏಕಾಗ್ರತೆಗಾಗಿ ಬೇಕಾಗುತ್ತದೆ. ಮೋಕ್ಷಕ್ಕೆರಡಕ್ಕರವೇ ಸಾಕು
ಎಂದು ಸರ್ವಜ್ಞ ಹೇಳಿದ್ದಾನೆ. ಎಲ್ಲ ಅಕ್ಷರಗಳು ಮಂತ್ರಗಳೆ.
ಮನನಾತ್ ತ್ರಾಯತೇ ಇತಿ ಮಂತ್ರಃ ಅಂದರೆ ಜಪಿಸಿದರೆ
ಯಾವುದು ರಕ್ಷಿಸುತ್ತದೆ ಅದುವೆ ಮಂತ್ರ. ಮಂತ್ರವನ್ನು ಜಪಿಸುವುದರಿಂದ ಭೂತ ಭವಿಷತ್ತಿನ ಬಗ್ಗೆ ಆಲೋಚನೆಗಳು
ನಿಂತು ಮನಸ್ಸು ವರ್ತಮಾನಕ್ಕೆ ಬರುವುದರಿಂದ ಮಾನಸಿಕ
ಒತ್ತಡ ನಿವಾರಣೆಯಾಗಿ ಮನಸಿಗೆ ಆನಂದ ಸಿಗುತ್ತದೆ.ಮಂತ್ರ ಪುನರಾವರ್ತನೆ ಮಾಡುವುದರಿಂದ ದೇಹದಲ್ಲಿ ಕಂಪನ ಉಂಟಾಗಿ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿಯ ಚಕ್ರಗಳು ಕ್ರಿಯಾಶೀಲವಾಗುತ್ತವೆ.ಆ ಮಂತ್ರ ಯಾವುದಾದರು ಇರಬಹುದು.ಅದಕ್ಕೆ ಬಸವಣ್ಣನವರು ಹೀಗೆ ಹೇಳುತ್ತಾರೆ.
ಆಳಿಗೊಂಡಿಹರೆಂದು ಅಂಜಲದೇಕೆ?ನಾಸ್ತಿಕವಾಡಿಹರೆಂದು ನಾಚಲದೇಕೆ? ಆರಾದಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ,ಏನೂ ಅರಿಯೆನೆಂದು ಮೌನಗೊಂಡಿರಬೇಡ, ಕೂಡಲಸಂಗಮದೇವರ ಮುಂದೆ ದಂದಣ-ದಿತ್ತಣ ಎನ್ನಿ.
ಮಂತ್ರ ಗೊತ್ತಿಲ್ಲದ್ದರು ದಂದಣ ದಿತ್ತಣ ಎಂದಾದರು ಅನ್ನಿ.
ಅದರಿಂದ ಮನ ಏಕಾಗ್ರವಾಗಿ ಮನಸಿಗೆ ಶಾಂತಿ ಸಿಗುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990