ರಾಷ್ಟೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ
ಬೆಳಗಾವಿ : ಓದುವ ಹವ್ಯಾಸ ಉಳ್ಳವರು ಯಾವಾಗಲೂ ಕಲಿಯುತ್ತಿರುತ್ತಾರೆ,ಪ್ರಸ್ತುತ ಸಾಹಿತ್ಯ ಮತ್ತು ಮುಂಚಿನದಕ್ಕೂ ವ್ಯತ್ಯಾಸ ಇದೆ ಎಂದು ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ್ ಅವರು ಅಭಿಪ್ರಾಯ ಪಟ್ಟರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ದಿ.14 ರಂದು ನಡೆದ ರಾಷ್ಟೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದುವುದೇ ಮೂಲ ಮಂತ್ರ ಆಗಿರಲಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖಜಾನೆ ಇಲಾಖೆಯ ಉಪನಿರ್ದೇಶಕರಾದ ಪಿ.ವಿ ಮೇಟಿ ಅವರು, ಪರಿಣಾಮಕಾರಿ ಓದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಕುರಿತು ವಿವರಿಸಿ,ಪರೀಕ್ಷೆಗಳಲ್ಲಿ ಯಶಸ್ಸಿನ ಸೂತ್ರಗಳ ಬಗ್ಗೆ ಮಾತನಾಡಿದರು. ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರಾದ ರಾಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಉದ್ದೇಶ ಮತ್ತು ಸಾರ್ವಜನಿಕ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಳ್ಳಲು ಕರೆನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆರ್ ಸಿ ಯು,ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊಫೆಸರ್ ಡಾ.ವಿನಾಯಕ ಬಂಕಾಪುರ ಅವರು, ಗ್ರಂಥಾಲಯ ಕೇತ್ರದಲ್ಲಿ ಇರುವ ಅವಕಾಶಗಳ ಕುರಿತು ವಿವರಿಸಿ, ಇರುವ ಅವಕಾಶ ಬಳಸಿಕೊಳ್ಳಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಪ್ತಾಹ ನಿಮಿತ್ತ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ, ಗಾಯನ,ಪ್ರಬಂಧ ಬರಹ, ಭಾಷಣ, ಚಿತ್ರಕಲೆ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪರಿಣಾಮಕಾರಿಯಾಗಿ ಗ್ರಂಥಾಲಯ ಬಳಸಿದ ಸಾರ್ವಜನಿಕ ಓದುಗರಿಗೆ ಉತ್ತಮ ಓದುಗ ಪ್ರಶಸ್ತಿ ನೀಡಲಾಯಿತು.
ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸೇವಾ ಪುರಸ್ಕಾರ ನೀಡಲಾಯಿತು. ಏ ಏ ಕಾಂಬಳೆ ಅವರು ಸ್ವಾಗತಿಸಿದರು. ಅಂಬೇಕರ ಮತ್ತು ಪ್ರಕಾಶ ಇಚಲಕರಂಜಿ ಕಾರ್ಯಕ್ರಮ ನಿರ್ವಹಿಸಿದರು. ಸುನೀಲಕುಮಾರ್ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸುಮಾ ಸರಜೂ ಕಾಟ್ಕರ್, ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ, ಶಾಖಾ ಸೇವಾ ಕೇಂದ್ರ ಸಿಬ್ಬಂದಿ, ಮಕ್ಕಳು,ಗ್ರಂಥಾಲಯ ಓದುಗರು ಹಾಜರಿದ್ದರು.