ಸ್ವ ಪಕ್ಷದವರ ಮೇಲೂ ಸಲಗರ್ ಕಿಡಿ
ಬೀದರ್ -ವಾಲ್ಮೀಕಿ ಹಗರಣ, ಮುಡಾ ಹಗರಣ ಆಗಿದ್ದೇ ಉಪ ಚುನಾವಣೆಯಲ್ಲಿ ಹಣ ಹಂಚಲು.ಹಗರಣದ ನೂರಾರು ಕೋಟಿ ಹಣದ ಹೊಳೆಯನ್ನೇ ಹರಿಸಿ ಇಂದು ಕಾಂಗ್ರೆಸ್ ಮೂರು ಕಡೆ ಗೆದ್ದಿದೆ ಎಂದು ಶಾಸಕ ಶರಣು ಸಲಗರ್ ಬಸವಕಲ್ಯಾಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶದ ನಂತರ ಮಾಧ್ಯಮದವರೊಡನೆ ಮಾತನಾಡಿದ ಅವರು, ಇದು ನಮ್ಮ ನಿಜವಾದ ಸೋಲಲ್ಲ ಹಗರಣಗಳನ್ನು ಮಾಡಿ ಜನರಿಗೆ ಆಮಿಷ ತೋರಿಸಿದ್ದರಿಂದ ಸೋಲಾಗಿದೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಕಾಂಗ್ರೆಸ್ ನವರು ಎಂದರು.
ಮತ ಹಾಕದೆ ಇದ್ದರೆ ಗ್ಯಾರಂಟಿ ಬಂದ್ ಮಾಡುತ್ತೇವೆ ಎಂದು ಹೇಳಿದ ಪರಿಣಾಮ ಜನರು ಕಾಂಗ್ರೆಸ್ ಗೆ ಮತ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ನೀರಿಕ್ಷೆಗೆ ಮೀರಿ ಫಲಿತಾಂಶ ಬಂದಿದೆ. ಮೂರು ಕ್ಷೇತ್ರದ ಮತದಾರರಿಗೆ ನಾವು ಕಾಂಗ್ರೆಸ್ ಸರ್ಕಾರ ಮಾಡಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿಸಲು ವಿಫಲರಾಗಿದ್ದೇವೆ. ಆದರೂ ಫಲಿತಾಂಶವನ್ನು ಸ್ವಾಗತಿಸುತ್ತೇವೆ ಎಂದರು.
ವಕ್ಫ್ ವಿರುದ್ಧ ಹೋರಾಟ ಮಾಡುತ್ತಿರುವ ಅಧ್ಯಕ್ಷ ಬಿ ವೈ ವಿಜಯೇಂದ್ರಗೆ ಅಪ್ಪ ಅಮ್ಮ ಇಲ್ಲ ಎನ್ನುವ ಯತ್ನಾಳ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಲಗರ್, ವಕ್ಫ ವಿರುದ್ದ ಹೋರಾಟ ಮಾಡುತ್ತಿರುವ ಯತ್ನಾಳ ಟೀಂ ಅನಾಥವಾಗಿದೆ. ಮಾಜಿ ಎಂಎಲ್ಸಿಗಳನ್ನು, ಮಾಜಿ ಎಂಪಿಗಳು ಹಾಗೂ ಮನೆಯಲ್ಲಿ ಕುಳಿತಕೊಂಡವರನ್ನು ಟೀಂಗೆ ಸೇರಿಸಿದ್ದಾರೆ. ಹೀಗಾಗಿ ಈ ಟೀಂಗೆ ತಾಯಿ ತಂದೆ ಇದ್ದಾರಾ ಎಂದು ಪ್ರಶ್ನೆ ಮಾಡಿದ ಅವರು, ನಮ್ಮ ಟೀಂಗೆ ಒರಿಜಿನಲ್ ತಂದೆ ತಾಯಿ ಇದ್ದಾರೆ. ನಾವು ಮಾಡಿದ ಹೋರಾಟ ಅವರು ಮಾಡುತ್ತಿದ್ದಾರೆ. ಆ ಹೋರಾಟಕ್ಕೆ ನಾನು ಹೋಗಬೇಕಾ ಬೇಡ ಎಂದು ನಮ್ಮ ಪಕ್ಷದ ಅಧ್ಯಕ್ಷರ ಕರೆಗೆ ಬದ್ಧನಾಗಿದ್ದೇನೆ. ಯತ್ನಾಳ ಅವರೇ ನಿಮ್ಮ ನಡೆ ಎಲ್ಲೋ ಒಂದು ಕಡೆ ಜನರ ದಾರಿ ತಪ್ಪಿಸುತ್ತಿದೆ. ಇವತ್ತು ಈ ರೀತಿಯ ಸಂಶಯದಿಂದಾಗಿ ಮೂರು ಕಡೆ ಸೋಲಾಗಿದೆ ಎಂದು ಸ್ವಪಕ್ಷೀಯರ ವಿರುದ್ಧವೆ ಸಲಗರ್ ಕಿಡಿ ಕಾರಿದರು.
ವರದಿ : ನಂದಕುಮಾರ ಕರಂಜೆ, ಬೀದರ