ದಾಸವಾಣಿ ಕರ್ನಾಟಕದ ವತಿಯಿಂದ ಚಾಮರಾಜಪೇಟೆ ಶ್ರೀಪಾದರಾಜ ಮಠದಲ್ಲಿ ವಿಜಯ ದಾಸರ ಆರಾಧನೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ದಾಸಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿದವರು ಮಾತನಾಡುತ್ತಾ, ಪರಿಶುದ್ಧತೆಗೆ ನೈತಿಕತೆಗೆ ಹೆಚ್ಚಿನ ಮಹತ್ವವನ್ನು ದಾಸರು ನೀಡಿದ್ದಾರೆ,ವ್ಯಕ್ತಿತ್ವದ ನಿರ್ಮಿತಿಯಲ್ಲಿ ಮೌಲ್ಯಗಳ ಪಾತ್ರವನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಧರ್ಮ ತತ್ವ ಜ್ಞಾನಗಳು ಆಡಂಬರ ಡಾಂಭಿಕತೆಯ ಮುಸುಕಿನಲ್ಲಿ ಮರೆಯಾಗಿದ್ದವು, ಇವೆರಡಕ್ಕೂ ಅಂಟಿದ ಜಾಡ್ಯವನ್ನು ತೊಳೆದು ತಿಳಿಯಾಗಿಸಿದವರು ವಿಜಯದಾಸರು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಧ್ಯಾಪಕಿ ಡಾ. ಶೀಲಾ ದಾಸ್ ವಿಜಯ ದಾಸರ ಸುಳಾದಿ ಗಳು ಕುರಿತು ಮಾತನಾಡುತ್ತಾ, ಮಧ್ಯಕಾಲೀನ ಕರ್ನಾಟಕ ಸಂಸ್ಕೃತಿಯಲ್ಲಿ ದಾಸ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಕನ್ನಡದ ಸಮೃದ್ಧ ಪರಂಪರೆಗೆ ದಾಸ ಸಾಹಿತ್ಯ ರೂಪಗೊಳ್ಳಲು ವಿಜಯದಾಸರ ಕೊಡುಗೆ ಅಪಾರವಾದದ್ದು. ವಿಜಯದಾಸರು ಜೀವಿಸಿದ್ದ ಕಾಲದ ಪರಿಸ್ಥಿತಿಯನ್ನು ಅವಲೋಕಿಸಿದರೆ ಭಕ್ತಿ ಮಾರ್ಗ ದಾಸಪಂಥದ ಬೆಲೆ ತಿಳಿದೀತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಮಹನೀಯರಿಗೆ ದಾಸವಾಣಿ ಕರ್ನಾಟಕ ಮಹಾಪೋಷಕರತ್ನ ಪ್ರಶಸ್ತಿ ಮತ್ತು ದಂಪತಿ ಗಾಯನ ಪ್ರಶಸ್ತಿಗಳನ್ನು ವಿಜಯ ದಾಸರ ಗಾಯನ ಸ್ಪರ್ಧೆಯ ಬಹುಮಾನ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಡಾ. ಹ.ರಾ ನಾಗರಾಜ ಆಚಾರ್ಯ , ವಿದುಷಿ ಶ್ರೀಮತಿ ಸ್ರೋತಸ್ವಿನಿ ಅಚ್ಯುತ , ನಿರ್ವಾಹಕರಾದ ಶ್ರೀಮತಿ ಪದ್ಮ ಎಸ್ ಆಚಾರ್ಯ ಮತ್ತು ಸುಬ್ರಹ್ಮಣ್ಯ ಆಚಾರ್ಯ, ಕೃಷ್ಣಮೂರ್ತಿ ಜಿಎಸ್ ಅವರು ಉಪಸ್ಥಿತರಿದ್ದರು. ದಾಸವಾಣಿ ಕರ್ನಾಟಕ ಸಂಸ್ಥಾಪಕ ಜಯರಾಜ್ ಕುಲಕರ್ಣಿ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕೋಲಾಟ, ಗಾಯನ ನೆರವೇರಿತು.
ಶ್ರೀಮತಿ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ಸಮೂಹ ಗಾಯನದಲ್ಲಿ ಶ್ರೀಮತಿ ಗೌರಿ ಕುಲಕರ್ಣಿ, ಶ್ರೀಮತಿ ಪದ್ಮಜಾ ಪುರಾಣಿಕ್, ಶ್ರೀಮತಿ ಶೈಲಜಾ ಆನಂದ್, ಶ್ರೀಮತಿ ಲತಾ ಕುಲಕರ್ಣಿ ಇವರುಗಳು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.