ತನಿಖೆ ಮಾಡಿಸದಿದ್ದರೆ ಹಣ ವಸೂಲಿ ಆಡಿಯೋ ಬಿಡುಗಡೆ – ಗಡಾದ ಎಚ್ಚರಿಕೆ
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಗಳ ಸಮಯದಲ್ಲಿ ಸಚಿವರುಗಳ/ ಅಧಿಕಾರಿಗಳ ಆತಿಥ್ಯದ ಹೆಸರಲ್ಲಿ ಇಲಾಖಾ ಮುಖ್ಯಸ್ಥರುಗಳು ಹಣ ವಸೂಲಿ ಮಾಡುತ್ತಿರುವುದನ್ನು ವಿಧಾನ ಸಭೆಯ ಸಚಿವಾಲಯದ ನಿರ್ದೇಶನದ ಪ್ರಕಾರ ತನಿಖೆ ನಡೆಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಧಿವೇಶನಕ್ಕಾಗಿ ಹಣ ವಸೂಲಿ ಮಾಡುತ್ತಿರುವ “ಅಧಿಕಾರಿಗಳ ಆಡಿಯೋ ಸಂಭಾಷಣೆ” ಯನ್ನು ಬರುವ ಅಧಿವೇಶನದ ಸಮಯದಲ್ಲಿ ಸುವರ್ಣ ಸೌಧದಲ್ಲಿಯೇ ಬಿಡುಗಡೆ ಮಾಡಲಾಗುವದು ಎಚ್ಚರಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಜಿಲ್ಲಾಧಿಕಾರಿ ಬೆಳಗಾವಿ ಇವರಿಗೆ ಪತ್ರ ಬರೆದಿದ್ದಾರೆ.
ಸಚಿವರುಗಳು/ ಅಧಿಕಾರಿಗಳು/ ಸಿಬ್ಬಂದಿಗಳ ಆತಿಥ್ಯದ ಹೆಸರಲ್ಲಿ ಹಣ ವಸೂಲಿ ಮಾಡಲಾಗುತ್ತಿದ್ದು ಇದರಿಂದಾಗಿ ಬೆಳಗಾವಿಯ ಅಧಿವೇಶನಕ್ಕೆ ಕಪ್ಪು ಚುಕ್ಕೆ ಬಂದಿರುವುದಲ್ಲದೇ ಸಚಿವರು/ ಅಧಿಕಾರಿಗಳ ಘನತೆ-ಗೌರವಗಳಿಗೂ ಚ್ಯುತಿ ಬರುತ್ತಿರುವುದರಿಂದ ಈ ವಿಷಯದ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ದಿ: 27/12/2022 ರಂದು ಹಾಗೂ ದಿ: 04/01/2024 ರಂದು ಉಭಯ ಪೀಠಗಳ ಮಾನ್ಯ ಸಭಾಧ್ಯಕ್ಷರುಗಳಿಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ತಮ್ಮಿಂದ ವಸೂಲಿ ಮಾಡಲಾಗುತ್ತಿರುವ ಹಣದ ವಿಷಯವನ್ನು ಯಾರ ಮುಂದಾದರೂ ಬಾಯಿ ಬಿಟ್ಟರೆ ತಮ್ಮ ನೌಕರಿಗೆ ಕುತ್ತು ಬಂದರೆ ಹೇಗೆ? ಎಂದು ಹೆದರಿಕೊಂಡು ಯಾರ ಮುಂದೆಯೂ ಬಾಯಿ ಬಿಡದ ಇಂಥ ಅಧಿಕಾರಿ/ ಸಿಬ್ಬಂದಿಗಳು ಮಾನಸಿಕವಾಗಿ ನೊಂದು ಹಿಂಸೆ ಅನುಭವಿಸುತ್ತಾ ಬೆಳಗಾವಿಯ ಅಧಿವೇಶನಕ್ಕೆ ಹಿಡಿ ಶಾಪ ಹಾಕುತ್ತಿರುವ ವಿಷಯವನ್ನು ಮತ್ತು ಜಿಲ್ಲೆಯಲ್ಲಿರುವ ವೈನ್ ಶಾಪ್, ಬಾರ್ ರೆಸ್ಟೋರೆಂಟ್‌ಗಳಿಂದಲೂ ಅಧಿವೇಶನದ ಆತಿಥ್ಯದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವುದರಿಂದಲೇ, ಅಧಿವೇಶನದ ಸಮಯದಲ್ಲಿ 180 ಎಮ್.ಎಲ್ ಬಾಟಲಿಗೆ 30 ರೂ.ಗಳಷ್ಟು ದರ ಹೆಚ್ಚಳ ಮಾಡುತ್ತಿರುವುದದನ್ನು ಸಾರಾಯಿ ಕೊಳ್ಳುವವರು ಅಂಗಡಿ ಮಾಲೀಕರನ್ನು ಪ್ರಶ್ನಿಸಿದರೆ “ಚಳಿಗಾಲದ ಅಧಿವೇಶನ ನಡದೈತಿಪಾ ಅವರಿಗೆ ರೊಕ್ಕಾ ಕೂಡಿಸಿ ಕೊಡಬೇಕು, ಅದಕ್ಕಾಗಿ ಕ್ವಾರ್ಟರಿಗೆ 30 ರೂ. ರೇಟ್ ಹೆಚ್ಚ ಮಾಡೇತಿ ನೋಡ್ರಿಪಾ” ಎಂದು ವೈನ್ ಶಾಪ್‌ಗಳ ಮಾಲಿಕರು ಕೂಗಿ ಹೇಳುತ್ತಿರುವ ವಿಷಯವನ್ನು ಸಹ ಪೀಠಾಧ್ಯಕ್ಷರುಗಳಿಗೆ ಬರೆದ ಈ ಪತ್ರಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ವಿಧಾನ ಸಭೆಯ ಸಚಿವಾಲಯದಿಂದ ದಿ: 16/02/2024 ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿತ್ತು. ಇದರ ಪ್ರಕಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದಿ: 05/06/2024 ರಂದು ಮತ್ತು 06/08/2024 ರಂದು ಪತ್ರಗಳನ್ನು ಬರೆದಿದ್ದರೂ ಕೂಡಾ ಜಿಲ್ಲಾಡಳಿತವು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಜಿಲ್ಲಾಡಳಿತವು ಇದರಲ್ಲಿ ಭಾಗಿಯಾಗಿರುವುದೆ? ಅಥವಾ ಅಧಿವೇಶನದಲ್ಲಿ ಭಾಗವಹಿಸುವವರು ತಮ್ಮ ಆತಿಥ್ಯದ ಸಲುವಾಗಿ ಅಧಿಕಾರಿಗಳಿಂದ ಹಣ ಸಂಗ್ರಹಿಸಲು ಹೇಳಿರುವರೇ? ಎಂಬ ಅನುಮಾನಗಳು ಉಂಟಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕಾರಣ ಬೆಳಗಾವಿಯ ಅಧಿವೇಶನದ ಮತ್ತು ಸಚಿವರುಗಳ/ ಅಧಿಕಾರಿಗಳ ಘನತೆ-ಗೌರವಗಳನ್ನು ಕಾಪಾಡುವ ಸಲುವಾಗಿ ಆತಿಥ್ಯದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ಗುಪ್ತಚರ ಇಲಾಖೆ/ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಲು ಆದೇಶ ಹೊರಡಿಸದೇ ಇದ್ದಲ್ಲಿ ಅಧಿವೇಶನದ ಸಮಯದಲ್ಲಿಯೇ ಸುವರ್ಣ ಸೌಧದಲ್ಲಿ ಈ ಕುರಿತಾಗಿ ಇರುವ “ಅಧಿಕಾರಿಗಳ ಆಡಿಯೋ ಸಂಭಾಷಣೆ” ಬಿಡುಗಡೆ ಮಾಡಲಾಗುವದು. ಇದರಿಂದ ಅಧಿವೇಶನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಘನತೆ-ಗೌರವಗಳಿಗೂ ಚ್ಯುತಿ ಬಂದು ಇದರ ಮುಂದಿನ ಆಗು-ಹೋಗುಗಳಿಗೆ ಜಿಲ್ಲಾಡಳಿತವೇ ಹೊಣೆಗಾರರಾಗಬೇಕಾಗುವದು ಎಂಬ ಅಂಶವನ್ನು ಕೂಡಾ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ ಆತಿಥ್ಯದ ಹೆಸರಲ್ಲಿ ಕೆಲವು ಪ್ರಮುಖ ಇಲಾಖೆಗಳು ಸಂಗ್ರಹಿಸಲಾಗುತ್ತಿರುವ ಹಣದ ವಿವರವನ್ನೂ ಗಡಾದ ಅವರು ನೀಡಿದ್ದು ಅದು ಈ ಕೆಳಗಿನಂತಿದೆ.
ಅಬಕಾರಿ ಇಲಾಖೆ – ಜಿಲ್ಲೆಯಲ್ಲಿರುವ ಪ್ರತಿಯೊಂದು ವೈನ್ ಶಾಪಗಳಿಂದ ತಲಾ 13 ಸಾವಿರ ರೂ.ಗಳನ್ನು ವಸೂಲಿ ಮಾಡಲಾಗುತ್ತಿದ್ದು, ಈ ಕಾರಣದಿಂದಲೇ ಅಧಿವೇಶನ ಸಮಯದಲ್ಲಿ ಪ್ರತಿ ಕ್ವಾರ್ಟರಿಗೆ 30 ರೂ.ಗಳ ದರ ಹೆಚ್ಚಳ ಮಾಡಲಾಗುತ್ತದೆ.
* ಪೌರಾಡಳಿತ ಇಲಾಖೆ ಜಿಲ್ಲೆಯಲ್ಲಿರುವ ಪ್ರತಿಯೊಂದು ಪಟ್ಟಣ ಪಂಚಾಯತಿಗಳಿಂದ ತಲಾ 50 ಸಾವಿರ ಮತ್ತು ಪುರಸಭೆಗಳಿಂದ 75 ಸಾವಿರ ಹಾಗೂ ನಗರ ಸಭೆಗಳ ಮುಖಾಂತರ 01 ಲಕ್ಷ ಹಣ ಸಂಗ್ರಹಿಸಲಾಗುತ್ತಿದ್ದು, ಮಹಾನಗರ ಪಾಲಿಕೆಗೆ ಎಷ್ಟು ಎಂಬುದು ಗೊತ್ತಿರುವುದಿಲ್ಲ
ಕಂದಾಯ ಇಲಾಖೆ ಹೊಸ ತಾಲೂಕುಗಳಲ್ಲಿರುವ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಪ್ರತಿಯೊಂದು ಕಛೇರಿಯಿಂದ ತಲಾ 25 ಸಾವಿರ ರೂ.ಗಳು ಅದರಂತೆ ಹಳೆಯ ತಾಲೂಕಿನ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಕಛೇರಿಗಳಿಂದ ತಲಾ 50 ಸಾವಿರ ಹಣ ಸಂಗ್ರಹಿಸಲಾಗುತ್ತದೆ.
ತಾಲೂಕ ಪಂಚಾಯತಿ –
ಜಿಲ್ಲೆಯಲ್ಲಿರುವ ಪ್ರತಿಯೊಂದು ತಾಲೂಕ ಪಂಚಾಯತಿಗಳಿಂದ ತಲಾ 50 ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ.
ಪಶು ಸಂಗೋಪನಾ ಇಲಾಖೆ –
ಪಶು ವೈದ್ಯಾಧಿಕಾರಿಗಳಿಂದ 4,000, ಪಶು ವೈದ್ಯಕೀಯ ಪರೀಕ್ಷಕರಿಂದ 2,500, ಪಶು ವೈದ್ಯಕೀಯ ಸಹಾಯಕರಿಂದ 1,500 ರೂ.ಗಳನ್ನು ಇಲಾಖಾ ಮುಖ್ಯಸ್ಥರು ಸಂಗ್ರಹಿಸುತ್ತಿರುವುದಾಗಿ ತಿಳಿದು ಬಂದಿದೆ.
ಇನ್ನುಳಿದ ಇಲಾಖೆಗಳಿಂದ ಸಂಗ್ರಹಿಸಲಾಗುತ್ತಿರುವ ಹಣದ ವಿವರದ ಮಾಹಿತಿ ಲಭ್ಯವಿರುವುದಿಲ್ಲ ಎಂದು ಭೀಮಪ್ಪ ಗಡಾದ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕು