ಅಲ್ಲಮನ ಸುಜ್ಞಾನ ಬಸವೇಶ್ವರನ ಭಕ್ತಿ
ಸಿದ್ಧರಾಮೇಶ್ಚರನ ಕರ್ಮಯೋಗ
ಚೆನ್ನವಸವೇಶ್ವರನ ವೈರಾಗ್ಯ ಭಾಗ್ಯಗಳ
ತಂದುಕೋ ನಿನ್ನಲ್ಲಿ – ಎಮ್ಮೆತಮ್ಮ
ತಾತ್ಪರ್ಯ
ಅಲ್ಲಮ ಪ್ರಭುದೇವರು ಜಗತ್ತು ಕಂಡು ಅದ್ವಿತೀಯ
ಅಪ್ರತಿಮ ಜ್ಞಾನಯೋಗಿ. ಆತನ ವಚನಗಳನ್ನು ಓದಿದರೆ
ಆತ ಎಂಥ ಅತ್ಯುನ್ನತ ಆಧ್ಯಾತ್ಮಿಕ ಎತ್ತರವನ್ನು ತಲುಪಿದ್ದ
ಎಂದು ತಿಳಿದುಬರುತ್ತದೆ. ಜ್ಞಾನರತ್ನವ ಅಲಂಕರಿಸಿದೆಯಾದರೆ
ನಿನಗಿಂತ ಸಿರಿವಂತರಿಲ್ಲ ಎಂದು ಹೇಳಿದ್ದಾನೆ. ಅಂತಹ
ಜ್ಞಾನಯೋಗವನ್ನು ಸಾಧಿಸಿ ಜ್ಞಾನಯೋಗಿಯಾಗಬೇಕು.
ಇನ್ನು ಬಸವೇಶ್ವರನಂಥ ಭಕ್ತ ಇನ್ನೊಬ್ಬರಿಲ್ಲ. ಆತ ಭಕ್ತಿ
ಭಂಡಾರಿ ಎಂಬ ಹೆಸರಿಗೆ ಭಾಜನನಾಗಿದ್ದನು. ಭೂಮಿಯಲ್ಲಿ
ಭಕ್ತಿಯ ಬೀಜ ನೆಟ್ಟು ಹೆಮ್ಮರವಾಗಿ ಬೆಳೆಸಿದನು. ನಾನೊಬ್ಬನೆ
ಭಕ್ತ ಉಳಿದವರೆಲ್ಲರು ಗುರುಲಿಂಗಜಂಗಮರು ಎಂಬ ಭಾವ
ಉಳ್ಳಾತನಾಗಿದ್ದ. ಆತನು ಭಕ್ತಿಯೋಗ ಸಾಧಿಸಿ ಭಕ್ತಿಯ
ಮೇರುಪರ್ವತವಾಗಿದ್ದ. ಆತನಂತೆ ಭಕ್ತಿಯೋಗಿಯಾಗಿ
ಸಾಧನೆ ಮಾಡಬೇಕು. ಸೊಲ್ಲಾಪುರದ ಸಿದ್ಧರಾಮೇಶ್ವರನು
ಸಕಲ ಜೀವರಾಶಿಗಳಿಗೆ ಲೇಸ ಬಯಸಿ ಕೆರೆಕಟ್ಟೆ ಭಾವಿಗಳನ್ನು
ನಿರ್ಮಿಸಿ ಕರ್ಮಯೋಗಿಯಾಗಿದ್ದ. ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನನಿಗೆ ಪ್ರೀತಿಪಾತ್ರನಾಗಿ ಆತನನ್ನೆ ಸೊಲ್ಲಾಪುರಕ್ಕೆ ಕರೆತಂದು ದೇವಾಲಯವನ್ನು ಕಟ್ಟಿಸಿದ್ದ. ಆಮೇಲೆ ಅಲ್ಲಮರ ಆದೇಶದಂತೆ ಶಿವಯೋಗ ಸಾಧಿಸಿ ಮಹಾಶರಣನಾಗಿದ್ದ. ಆತನಂತೆ ಕರ್ಮಯೋಗ ಮತ್ತು ಶಿವಯೋಗ ಸಾಧಿಸಬೇಕು.
ಚೆನ್ನಬಸವೇಶ್ವರನು ವೈರಾಗ್ಯದ ನಿಧಿಯಾಗಿದ್ದನು. ಕರುಣಹಸುಗೆ ಎಂಬ ವೈಜ್ಞಾನಿಕವಾದ ಆಧ್ಯಾತ್ಮಿಕ ಗ್ರಂಥ
ಬರೆದ ಮಹಾನುಭಾವ. ಆತನಂತೆ ವೈರಾಗ್ಯವನ್ನು ತಾಳಿ
ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿಯಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990