ಬೀದರ – ಒಂದೇ ರಾತ್ರಿ ಒಂಬತ್ತು ಮನೆಗೆ ಕನ್ನ, ಗ್ರಾಮಗಳಿಗೆ ನುಗ್ಗಿರೋ ದರೋಡೆ ಗ್ಯಾಂಗ್ ಕಂಡು ಇಡೀ ಗ್ರಾಮಸ್ಥರೇ ಶಾಕ್ ಆಗಿದ್ದಾರೆ. ಎರಡು ಬೈಕ್ ಮೇಲೆ ಬಂದಿದ್ದ ಆರು ಜನರ ಗ್ಯಾಂಗ್ ಬೀದರ್ ಪೊಲೀಸರ ನಿದ್ದೆಗೆಡಿಸಿದೆ. ಕೀಲಿ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿರುವ ಖದೀಮರು ಮನೆಗಳನ್ನ ದೋಚಿ ಪರಾರಿಯಾಗಿದ್ದಾರೆ. ಖದೀಮರ ಓಡಾಟವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ…
ಮನೆಗೆ ಬೀಗ ಹಾಕಿ ಊರಿಗೆ ಹೋಗ್ತೀರಾ?. ಹೀಗೆ ಮನೆಗೆ ಬೀಗ ಹಾಕಿ ಊರಿಗೆ ಹೋಗೋಕು ಮುನ್ನ ಹುಷಾರ್. ಮನೆಗೆ ಬೀಗ ಹಾಕಿ ದುಡಿಯೋಕೆ ಅಂತಾ ವಲಸೆ ಹೋಗಿರುವ ಮನೆಗಳನ್ನೇ ಖದೀಮರ ಗ್ಯಾಂಗ್‌ವೊಂದು ಟಾರ್ಗೆಟ್ ಮಾಡಿದೆ. ಟಾರ್ಗೆಟ್ ಮಾಡಿದ್ದಷ್ಟೇ ಅಲ್ಲದೇ, ಒಂದಲ್ಲ, ಎರಡಲ್ಲ, ಬರೋಬ್ಬರಿ ಒಂಬತ್ತು ಮನೆಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ದೋಚಿ ಪರಾರಿಯಾಗಿದ್ದಾರೆ. ಖದೀಮರ ಓಡಾಟ, ಸರಣಿಗಳ್ಳತನದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಹೌದು, ಸರಣಿ ಕಳ್ಳತನಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಒಂದೇ ರಾತ್ರಿ ಉಮ್ಮಾಪೂರ, ಕೊಂಗೇವಾಡಿ, ಚಂಡಕಾಪುರ ಗ್ರಾಮದಲ್ಲಿ 9 ಮನೆಗಳನ್ನ ದೋಚಿದ್ದಾರೆ. ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ನುಗ್ಗಿದ 6 ಜನರ ಗ್ಯಾಂಗ್ ಬರೋಬ್ಬರಿ 9 ಮನೆಗಳನ್ನ ದೋಚಿ ಮೂರು ಮನೆಗಳಲ್ಲಿದ್ದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ. ಇನ್ನು ದರೋಡೆ ಗ್ಯಾಂಗ್ ಗ್ರಾಮಕ್ಕೆ ನುಗ್ಗಿದ್ದಕ್ಕೆ ಬೆಚ್ಚಿಬಿದ್ದಿರೋ ಗ್ರಾಮಸ್ಥರು ಗ್ರಾಮದಲ್ಲಿ ಡಂಗೂರ ಸಾರಿ, ಎಚ್ಚರಿಕೆ ಸಂದೇಶ ಸಾರುತ್ತಿದ್ದಾರೆ…
ಈ ಸಂಬಂಧ ಪತ್ರಿಕೆಗಳೊಡನೆ ಮಾತನಾಡಿದ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮನೆಗೆ ಬೀಗ ಹಾಕಿ ದಿನ, ವಾರ, ತಿಂಗಳಗಟ್ಟಲೇ ಮನೆ ಬಿಟ್ಟು ಹೋಗುವವರು ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದ್ದರೂ. ಜನ ಹೇಳುತ್ತಿಲ್ಲ ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ