ಸಿಂದಗಿ – ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ ಅಡಿಪಾಯ ಎಂದು ಎಚ್. ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಜ್ಯೋತಿ ಕಲ್ಯಾಣ ಮಂಟಪದಲ್ಲಿ ಮಂದಾರ ಶಾಲೆ ಮತ್ತು ಲಿಟಲ್ ವಿಂಗ್ಸ್ ಶಾಲೆಗಳ ಅಡಿಯಲ್ಲಿ ನಡೆದ ಅಜ್ಜ ಅಜ್ಜಿಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ವಿಶೇಷ ಪ್ರೀತಿ ಮತ್ತು ಕಾಳಜಿಯ ಮೂಲಕ, ಅಜ್ಜಿಯರು ಕುಟುಂಬವನ್ನು ಹೃದಯಕ್ಕೆ ಹತ್ತಿರವಾಗಿಸುತ್ತಾರೆ. ಇಂದು ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇದರಿಂದ ಹಿರಿಯರ ಪ್ರೀತಿ, ಮಮಕಾರ ವಾತ್ಸಲ್ಯ ಮತ್ತು ಅವರ ಸಂಸ್ಕಾರಗಳು ಇಂದಿನ ಮಕ್ಕಳಿಗೆ ಸಿಗುತ್ತಿಲ್ಲ ಇದು ಸಮಾಜದ ದೊಡ್ಡ ಮಾರಕ. ಇಂದಿನ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದು ಸಲ್ಲದು. ಮಕ್ಕಳಿಗೆ ಹಿರಿಯರ ಪ್ರೀತಿ ವಾತ್ಸಲ್ಯ ಸಂಸ್ಕಾರ ಹಿತವಾಗಿರುವಂತಹ ಮಾತುಗಳು ನೀಡಿದ್ದಲ್ಲಿ ಮಕ್ಕಳ ಬದುಕು ಬಂಗಾರವಾಗುತ್ತದೆ ಎಂದರು.
ಈ ವೇಳೆ ಶಕುಂತಲಾ ಹಿರೇಮಠ, ಎಸ್. ಎ. ದೊಡ್ಡಮನಿ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಹಿರಿಯರಿಂದ ಬರುವ ಸಂಸ್ಕಾರವು ಮಕ್ಕಳ ಹೃದಯಕ್ಕೆ ತಟ್ಟುತ್ತದೆ. ಅದು ಯಾವ ಕಾಲಕ್ಕೂ ಮಕ್ಕಳು ಅದನ್ನ ದೂರ ಮಾಡುವುದಿಲ್ಲ. ಹಿರಿಯರನ್ನ ಗೌರವಿಸುವ, ಪೂಜಿಸುವ ಸಂಸ್ಕೃತಿ ನಮ್ಮದಾಗಬೇಕು ಆಗ ಮಾತ್ರ ಶಿಕ್ಷಣಕ್ಕೆ ಯೋಗ್ಯ ಬೆಲೆ ಬರಲಿದೆ ಎಂದರು.
ವೇದಿಕೆಯ ಮೇಲೆ ಸುನಿತಾ ತೇಲಿ, ಸಂಸ್ಥೆಯ ಅಧ್ಯಕ್ಷೆ ಭಾರತಿ ಚೌಧರಿ, ಶಿವಶಂಕರಗೌಡ ಪಾಟೀಲ ಇದ್ದರು.
ಕಾರ್ಯಕ್ರಮದ ಮುಂಚೆ ಮೊಮ್ಮಕ್ಕಳು ಅಜ್ಜ ಅಜ್ಜಿಯಂದಿರ ಪಾದ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಅಜ್ಜ ಅಜ್ಜಿಯಂದಿರು ಹೆಜ್ಜೆ ಹಾಕಿ ಸಂತೋಷಪಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಪೂಜಾ ಗಾಯಕವಾಡ, ನಗ್ಮಾ ಪಾಟೀಲ್, ಅಭಿಷೇಕ್ ಚೌಧರಿ, ಭಾಗ್ಯಶ್ರೀ ಕೋತಂಬರಿ, ಭಾರತಿ ಜೋಗುರ್, ಸಂಗೀತಾ ಕರಾಬಿ, ಪೂರ್ಣಿಮಾ ಗುಮಟೆ, ಸುರಭಿ. ಎಸ್, ಖುಷಿ ಪಾಟೀಲ್, ಪ್ರೀತಿ, ಸುಮಾ, ಶ್ವೇತಾ ಕೋಲಾರ್, ಸರಸ್ವತಿ ಮತ್ತು ದೇವರಾಜ್ ಸೇರಿದಂತೆ ಇತರರು ಇದ್ದರು.