ಹಾಸನದ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಸಾಣೇನಹಳ್ಳಿ ಶಿವಸಂಚಾರ ತಂಡದವರು ಭಾನುವಾರ ಪ್ರದರ್ಶಿಸಿದ ೨ನೇ ನಾಟಕ ತುಲಭಾರ.
ಶಿಕ್ಷಕ ಬರಿ ನೌಕರನಲ್ಲ ಕ್ರಿಯಾಶೀಲ ಆಧ್ಯಯನ ಶೀಲ, ಶಿಷ್ಯವತ್ಸಲ ಕವಿ ವಿಮರ್ಶಕ ಸಾಧಕ ಇಂಥ ಹತ್ತು ಹಲವು ಮೌಲ್ಯಗಳ ಪಾತ್ರವೇ ಮೈನೋದ್ದೀನ್ ಮಾಸ್ತರ ಕವಿ ಕತೆಗಾರ ನಾಟಕಕಾರ ಕಾದಂಬರಿಕಾರ ಲಾವಣಿಕಾರ.. ಹಲವು ಪ್ರಕಾರಗಳ ಡಾ.ಬಿ.ಆರ್.ಪೋಲೀಸ್ ಪಾಟೀಲ ರಚನೆ, ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರವರ ನಿರ್ದೇಶನದಲ್ಲಿ ಪ್ರದರ್ಶಿಸಿದ ಕಥಾವಸ್ತು ಅಂದಿನಾದರೂ ಇಂದಿಗೂ ಪ್ರಸ್ತುತ. ನಾವು ಓದಿರುವ ಅನೇಕ ಕಾದಂಬರಿ ಕತೆ ಸಿನಿಮಾಗಳಲ್ಲಿ ಒಂದು ಊರಿನ ಏಳ್ಗೆಯಲ್ಲಿ ಆದರ್ಶ ಶಿಕ್ಷಕನ ಮಹತ್ವದ ಪಾತ್ರ ಗಮನಿಸಿದ್ದೇವೆ. ನಿಜ ಜೀವನದಲ್ಲೂ ಕಂಡಿದ್ದೇವೆ. ಸ್ಕೂಲ್ ಮಾಸ್ಟರ್ ಸಿನಿಮಾ ನೋಡಿದ್ದೀವಲ್ಲಾ ಅಂತಹದೇ ಒಂದು ಕಥೆ ಇದು. ಇಂದಿನ ಜಾತಿ ಧರ್ಮ ಸಂಕೋಲೆಯಲ್ಲಿ ನಲುಗುತ್ತಿರುವ ಸಮಾಜಕ್ಕಿದ್ದು ಒಂದು ಪಠ್ಯ ಪಾಠ.
ತೋರಿಕೆಗೆ ಇದು ಒಬ್ಬ ಶಿಕ್ಷಕನ ವೃತ್ತಿ ಜೀವನದ ಸುತ್ತ ಹೆಣೆದ ಕತೆಯೇ ಆದರೂ ಒಟ್ಟು ಶಿಕ್ಷಣ ವ್ಯವಸ್ಥೆಯ ಭಾರತೀಯ ಗುರುಪರಂಪರೆಯ ಹಾಗೂ ನಮ್ಮ ಸಮಾಜ ವ್ಯವಸ್ಥೆಯ ವಾಸ್ತವ ಚಿತ್ರಣ.
ಚಂದೂರಿನ ಪ್ರೈಮರಿ ಶಾಲೆಗೆ ೭೫ ವರ್ಷ ಪೂರೈಸಿ ನಿಷ್ಟಾವಂತ ಮಾಸ್ತರ ಮೈನೋದ್ಧೀನ್‌ರಿಗೆ ತುಲಭಾರ ಮಾಡಬೇಕು ಎಂದು ಚಂದೂರು ಗ್ರಾಮದಲ್ಲಿ ಉತ್ಸವ ಸಂಭ್ರಮ ಸಡಗರ ಸಿದ್ಧತೆಯೊಂದಿಗೆ ನಾಟಕ ಪ್ರಾರಂಭವಾಗುತ್ತದೆ. ಒಬ್ಬ ಮಾಸ್ತರಿಗೆ ತುಲಾಭಾರ ಮಾಡಬೇಕೆಂದರೆ ಶಾಲೆಗೆ ಆತನ ಕೊಡುಗೆಯೇನು? ಆತನಿಂದ ಊರು ಹೇಗೆ ಸಂಸ್ಕಾರ ಜ್ಞಾನಾರ್ಜನೆಯ ಪ್ರಗತಿಯ ಊರಾಗಿ ಪರಿವರ್ತನೆ ಕಂಡಿತು ಎಂಬುದನ್ನು ನಾಟಕ ತೋರಿಸುತ್ತದೆ. ತುಲಭಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥನ ಮಾತಿನ ಫ್ಲಾಷ್ ಬ್ಯಾಕ್‌ನಲ್ಲಿ ಗ್ರಾಮದ ಪೂರ್ವ ಚರಿತ್ರೆ ತೆರೆದುಕೊಳ್ಳುತ್ತದೆ.
ಮೈನೋದ್ಧೀನ್ ಚಂದೂರಿನ ಪ್ರೈಮರಿ ಶಾಲೆಗೆ ಮಾಸ್ತರಾಗಿ ಸರ್ಕಾರದಿಂದ ನೇಮಕಗೊಂಡು ಊರಿಗೆ ಬಂದಾಗ ಅವನನ್ನು ಸ್ವಾಗತಿಸುವ ಅರಳಿಮರದ ಕೆಳಗೆ ಇಸ್ಪಿಟ್ ಆಡುವ ಮಹನೀಯರು ಲೇವಡಿ ಮಾಡಿ ನಗುವರು. ಕಡೆಗೆ ಮಾಸ್ತರ ಪ್ರಾಮಾಣಿಕ ಕಾರ್ಯ ವೈಖರಿಗೆ ಬೆರಗಾಗಿ ಶರಣಾಗುವರು. ಈಗಾಗಲೇ ಇದ್ದ ಶಾಲೆಗೆ ಇದ್ದೊಬ್ಬ ಹೆಡ್‌ಮಾಸ್ತರ ತಿಂಗಳಿಗೊಮ್ಮೆ ಹಾಜರಿ ಹಾಕಿ ಶಾಲೆಯನ್ನು ಹಾಳುಗೆಡವಿದ್ದ ಪುಣ್ಯ ಪುರುಷ. ಒಂದು ಶಾಲೆಯ ಸ್ವಚ್ಛತೆ ಪ್ರಗತಿ ಒಂದು ಊರ ಸ್ವಚ್ಛತೆ ಪ್ರಗತಿಯನ್ನು ಸಾಂಕೇತಿಸುವುದು ಸರಿಯಷ್ಟೇ. ಚಂದೂರಿಗೆ ಬಂದ ಯುವಕ ಮೈನೋದ್ಧೀನ್ ಮಾಸ್ತರ ಊರಿನಲ್ಲೇ ಒಕ್ಕಲು ಹೂಡಿ ಜನ ಸಮಾನ್ಯರೊಂದಿಗೆ ಬೆರೆತು ಊರು ಶಾಲೆ ಪ್ರಗತಿಗೆ ನಿಸ್ವಾರ್ಥ ಪಾತ್ರ ನಿರ್ವಹಿಸುವುದೇ ನಾಟಕದ ಸ್ಥೂಲ ಚಿತ್ರಣ. ಸರ್ಕಾರಿ ಸಂಬಳಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುವ ಬಯಕೆಯ ಹೊಸ ಮಾಸ್ತರಿಗೆ ಅಪ್ರಾಮಾಣಿಕ ಸೀನಿಯರ್ ಮಾಸ್ತರ ಮಗ್ಗಲುಮುಳ್ಳು. ಈ ಮುಳ್ಳು ಮೈನೋದ್ದೀನ್ ಮಾಸ್ತರನ್ನು ಚುಚ್ಚಿ ನೋಯಿಸುತ್ತದೆ.
ಒಬ್ಬ ಕವಿಯಾಗಿ ಮೈನೋದ್ದೀನ್ ತನ್ನದೇ ಕಲ್ಪನ ಸಾಮ್ರಾಜ್ಯದಲ್ಲಿ ಶಾಲೆ ಅಭಿವೃದ್ಧಿ, ಊರು ಪ್ರಗತಿ ಜ್ಞಾನಾರ್ಜನೆಯ ಕನಸು ಕಂಡವ. ತನ್ನ ಕನಸಿನ ಕನವರಿಕೆಯಲ್ಲಿ ಹಲವು ಸಂಕಷ್ಟ ಎದುರಿಸಿ ಊರ ಮಂದಿಯ ಅಭಿಮಾನದ ತುಲಾಭಾರಕ್ಕೆ ಪಾತ್ರನಾದ ಎಂದರೆ ಅದೊಂದು ಅದ್ಭುತ ಸಾಧನೆಯೇ ಸೈ. ತುಲಾಭಾರ ಅಂದರ ತೂಗೋದು ಯಾರಿಗೂ ಭಾರ ಆಗದಂಗ ತೂಗೋದು ಎರಡೂ ಪರಡಿ ಸಮ ಆಗಮಟಾ ತೂಗೋದು, ಇದನ್ನ ನೋಡಿ ಕೇಳಿದವರು ತೂಗಿದವರ ಪ್ರೀತಿಗೆ ತೂಗಿಸಿಕೊಂಡವರ ನೀತಿಗೆ ತಲೆಬಾಗೋದು, ನೀಗಿಸಿಕೊಂಡು ನೀಗೊ ಜೀವಿಗಳ ಜೀವನ ಪ್ರೀತಿಗೆ ಮತ್ತ ಮತ್ತ ಮಣಿಯೋದು..ಇದು ತುಲಾಭಾರದ ವ್ಯಾಖ್ಯಾನ. ಒಬ್ಬ ಸಮರ್ಥ ಶಿಕ್ಷಕ ಒಂದು ವಿಶಿಷ್ಟ ಸಂಸ್ಸೃತಿಯ ನಿರ್ಮಾತೃ ಆಗಬಹುದು, ಒಂದು ಪರಂಪರೆಯನ್ನು ನಿರ್ಮಿಸಬಹುದು ಎಂಬುದನ್ನು ಮೈನೋದ್ಧಿನ್ ಮಾಸ್ತರ ನಿರೂಪಿಸುತ್ತಾರೆ.
ಶಾಲೆಗೆ ೭೫ ವರ್ಷ ತುಂಬಿದೆ ಎಂದ ಮೇಲೆ ನಾವು ಅಷ್ಟು ಹಿಂದಕ್ಕೆ ನಮ್ಮ ಊರು ಓದು ವ್ಯಾಸಂಗದತ್ತ ಗಮನ ಹರಿಸಿದರೆ, ನಮ್ಮೂರು ಕೂಡ ಒಂದು ಮಾದರಿ ಗ್ರಾಮವೆಂದು ನಾನು ಓದಿದ ಪ್ರೈಮರಿ ಶಾಲೆೆ ಮಾದರಿ ಶಾಲೆಯೆಂದೇ ಹೆಸರಾಗಿತ್ತು. ಆ ಕಾಲದಲ್ಲಿ ಜೀವಿಸಿದ್ದ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆ ಪ್ರಬಂಧ ಸಾಹಿತ್ಯದಲ್ಲಿ ಇದನ್ನು ಓದಬಹುದು. ಡಾ, ಗೊರೂರರು ಆ ಕಾಲದಲ್ಲೇ ನಮ್ಮೂರಿನಲ್ಲಿ ೧೦ ದಿನಗಳ ವಯಸ್ಕರ ಶಿಕ್ಷಣ ಶಿಬರ ನಡೆಸಿದ್ದರು. ಅಂತೆಯೇ ಇಲ್ಲೂ ಕೂಡ ಮಾಸ್ತರ ಶಾಲೆಯನ್ನು ಪುನಶ್ಚೇತನಗೊಳಿಸಿ ಮೂರು ಮತ್ತೊಂದು ಇದ್ದ ಮಕ್ಕಳ ಹಾಜರಾತಿ ಮುನ್ನೂರಕ್ಕೆ ಹೆಚ್ಚಿಸುತ್ತಾನೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ರಾತ್ರಿ ಶಾಲೆ ನಡೆಸಿ ಅನಕ್ಷರಸ್ಥರನ್ನು ಆಕರ್ಷಿಸಿ ಅಕ್ಷರ ಕಲಿಸುತ್ತಾನೆ. ಸಾಮಾಜಿಕ ಪಿಡುಗಾಗಿದ್ದ ದೇವದಾಸಿ ಪದ್ಧತಿ ವಿರುದ್ದ ಜನಜಾಗೃತಿ ಮೂಡಿಸುತ್ತಾನೆ. ಈ ತರಹ ಜನಜಾಗೃತಿ ಬೀದಿ ನಾಟಕಗಳು ಹಾಸನ ಜಿಲ್ಲೆಯ ಸಾಕ್ಷರತಾ ಆಂದೋಲನ ನಾನು ಪಠ್ಯ ಪುಸ್ತಕ ರಚನೆ ಸಮಿತಿ ಸಂಪನ್ಮೂಲ ವ್ಯಕ್ತಿಯಾಗಿ ಇಂತಹ ಪಾಠಗಳನ್ನು ಅಳವಡಿಸಿದ್ದ್ಕು ನೆನಪಾಯಿತು. ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ ಎಂಬಂತೆ ಈ ಮುಗ್ಧ ಮಾಸ್ತರ ಮೇಲೆ ಶಿಕ್ಷಣಾಧಿಕಾರಿಗೆ ಮೂಗರ್ಜಿ ಬರೆದು ಹೆಡ್‌ಮಾಸ್ತರ ಗ್ರಾಮಸ್ಥರ ಸಮಕ್ಷಮ ವಿಚಾರಣೆಯಲ್ಲಿ ತಾನೇ ಅಪರಾಧಿಯಾಗಿ ಸಿಕ್ಕಿಬಿದ್ದು ಗ್ರಾಮಸ್ಥರಿಂದ ಉಪ ನಿರ್ದೇಶಕನಿಂದ ಛೀಮಾರಿಗೆ ಒಳಗಾಗುತ್ತಾನೆ. ಹೈಸ್ಕೂಲು ಕಟ್ಟಲು ದೇಣಿಗೆ ಸಂಗ್ರಹಿಸಲು ಹೊರಟು ಈ ಹಣವನ್ನು ಮಾಸ್ತರ ತಿಂದನೆಂಬ ಅಪಾದನೆ, ರಾತ್ರಿ ಶಾಲೆ ಅನೈತಿಕ ಸಂಬಂಧ ಇಂತಹ ಸಲ್ಲದ ಆಪಾದನೆಗಳಿಗೆ ಮೈನೋದ್ದೀನ್ ಜರ್ಜರಿತನಾಗಿ ಊರು ಶಾಲೆ ಬಿಟ್ಟು ಹೋಗಲು ತಯಾರಾಗುತ್ತಾನೆ. ಇದೇ ಮಾಸ್ತರ ಶಾಲೆಗೆ ಬೇಕೆಂದು ಊರಿನವರು ತಾ. ಶಿಕ್ಷಣಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸುವುದು ಇದಕ್ಕೆ ಮಣಿಯದ ಮಾಸ್ತರ ಕನಸಿನಲ್ಲಿ ಕಾಣಿಸಿಕೊಳ್ಳುವ ಭಗವಂತನಿಂದ ಮನಸ್ಥೈರ್ಯ ಪಡೆದು ಅಜ್ಞಾನದ ಕತ್ತಲಿಗೆ ಬೆಳಕಾಗುವಲ್ಲಿ ತುಲಾಭಾರದ ಹಣವನ್ನು ಊರಲ್ಲಿ ಶಿಕ್ಷಣ ಕಾಲೇಜು ಕಟ್ಟಲು ಗ್ರಾಮಕ್ಕೆ ಮರಳಿಸಿ ಅದರ ಮೇಲೆ ತನ್ನದೂ ಒಂದು ಸಾವಿರ ಇಟ್ಟು ಆದರ್ಶ ಮೆರೆಯುವಲ್ಲಿ ನಾಟಕ ಮುಗಿಯುತ್ತದೆ. ನಾಟಕ ನೀಡುವ ಸಂದೇಶ ವಾಚ್ಯವಾಗದೇ ನಟರ ಚುರುಕು ಮಾತು ಸಂಭಾಷಣೆ ವೇಗವಾಗಿ ಸಾಗಿ ಹಾಡಿನ ಹಿನ್ನಲೆಯಲ್ಲಿ ಕ್ವಿಕಾಗಿ ರಂಗಸಜ್ಜಿಕೆ ದೃಶ್ಯ ಬದಲಾವಣೆಯಲ್ಲಿ ನಾಟಕ ಇಷ್ಟವಾಗುತ್ತದೆ.
ರಂಗದಲ್ಲಿ ಕಥಾನಾಯಕ ಮೈನೋದ್ಧೀನ್ ಪಾತ್ರವನ್ನು ಮೂವರು ಕಲಾವಿದರು ಭಾಸ್ಕರ್ ಹಿತ್ತಲಮನಿ, ಸಾಗರ ದನದಮನಿ, ಸಂತೋಷ್ ಕಲಾಲ್ ನಿಭಾಯಿಸಿದರು. ನಾಟಕದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಹೆಡ್ ಮಾಸ್ತರ ಆಕಾಶ್ ಜಿ ಚುಟುಕು ಮೀಸೆ ನಟನೆಯಲ್ಲಿ ವಿಡಂಬನೆಯಾಗಿ ನಗಿಸುತ್ತಾರೆ. ಉಳಿದಂತೆ ಉಪ ನಿರ್ದೇಶಕ ಅಕ್ಷಯ್ ಎಸ್. ಗ್ರಾಮಸ್ಥರು ಬಸವರಾಜ ಹೂಗರ ದಿನೇಶ್ ನಾಯ್ಕ, ಚಿನ್ಮಯರಾಮ ಎಸ್.ವೈ, ಪವನ್‌ಕುಮಾರ್ ವೈ, ತೇಜೇಶ್ ಶ ಕಪ್ಪಲಿ, ಸ್ತ್ರೀ ಪಾತ್ರಗಳಲ್ಲಿ ಭಾಗ್ಯಮ್ಮ, ನಾಗರತ್ನ ಸಿ.ಎಚ್. ರೇಷ್ಮಾ ಎಸ್. ಎಲ್ಲರೂ ತಮ್ಮ ಬಹುಮುಖಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.