ಕನ್ನಡ ಸಾಹಿತ್ಯಲೋಕದಲ್ಲಿ ರಾಂ.ಕೆ.ಹನುಮಂತಯ್ಯನವರು ಎಂದೇ ಜನಜನಿತರಾಗಿರುವ ಹಿರಿಯ ಸಾಹಿತಿ, ಚಿರೋತ್ಸಾಹಿ ಸಂಘಟಕ, ನಿಸ್ಪೃಹ ಸಮಾಜ ಸೇವಕ, ಅಪ್ಪಟ ಕವಿಹೃದಯದ ನಿವೃತ್ತ ಪೋಲೀಸ್ ಅಧಿಕಾರಿಗಳಾದ ರಾಂ.ಕೆ.ಹನುಮಂತಯ್ಯನವರ ಸಾರಥ್ಯದ ಕನ್ನಡಿಗರ ಸ್ನೇಹಕೂಟದ ಆಶ್ರಯದಲ್ಲಿ ಡಾ.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಶಾಲ ಸಭಾಂಗಣದಲ್ಲಿ ಕಳೆದ ವಾರ ಸಂಪನ್ನಗೊಂಡ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ವೇದಿಕೆಯ ೧೯ ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಿದ್ದಾಗ.. ಈ ಮೇಲಿನ ನುಡಿಗಳು ನನ್ನೊಳಗಷ್ಟೇ ಅಲ್ಲ ನೆರೆದಿದ್ದ ಸಮಸ್ತ ಸಭಿಕರೆದೆಗಳಲ್ಲಿ ಮಾರ್ದನಿಸಿದವು..
ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸುತ್ತ-ಮುತ್ತಲ ಸರಕಾರಿ ಶಾಲಾಮಕ್ಕಳಿಂದ ವರ್ಣರಂಜಿತ ಮನರಂಜನಾ ಕಾರ್ಯಕ್ರಮ, ವಿಶೇಷ ಚೇತನ ಮಕ್ಕಳಿಂದ ಗೀತನೃತ್ಯ, ಕವಿಗೋಷ್ಠಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಹೀಗೆ ಇಡೀ ದಿನ ಕನ್ನಡ ಡಿಂಡಿಮ.
ಈ ಬಾರಿಯ ರಾಜ್ಯೋತ್ಸವ ಪುರಸ್ಕೃತರಾದ ಭೈರಮಂಗಲ ರಾಮೇಗೌಡರಿಗೆ ಅಭಿನಂದನಾ ಕಾರ್ಯಕ್ರಮ, ಕೂಡ್ಲೂರು ವೆಂಕಟಪ್ಪನವರ ಅಧ್ಯಕ್ಷತೆ, ಸಂತೋಷ್ ಹಾನಗಲ್ ಅವರಿಂದ ಉದ್ಘಾಟನೆ, ಅತಿಧಿ ಮಾನ್ಯರ ಉಪಸ್ಥಿತಿ, ರಾಂ.ಕೆ. ಅವರ ಪ್ರಾಸ್ತಾವಿಕ, ಶೃಂಗೇಶ್ವರರ ನಿರೂಪಣೆ, ಅಸಂಖ್ಯಾತ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳ ಸಾನ್ನಿಧ್ಯದಿಂದ ಸಮಾರಂಭ ಅತ್ಯದ್ಭುತ ಯಶಸ್ಸು, ಶ್ರೇಯಸ್ಸುಗಳಿಗೆ ಸಾಕ್ಷಿಯಾಯಿತು.
ರಾಂ.ಕೆ ಅವರ ಶ್ರೀಮತಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಬಂಧು-ಮಿತ್ರರು ಕನ್ನಡಪ್ರೀತಿಯನ್ನು ಉಸಿರಾಗಿಸಿಕೊಂಡು, ಇಡೀ ಸಮಾರಂಭವನ್ನು ಮನೆ-ಮನದ ಹಬ್ಬದಂತಾಚರಿಸಿದ್ದು ಆ ದಿನದ ಮೆರುಗಷ್ಟೇ ಅಲ್ಲ, ಪ್ರತಿಯೊಬ್ಬರನ್ನು ಪುಳಕಿಸಿ ಮೂಕವಿಸ್ಮಿತವಾಗಿಸಿದ ಬೆರಗು. ಮತ್ತೊಂದು ಸೋಜಿಗದ ಸಂಗತಿಯೆಂದರೆ ಮೊಮ್ಮಕ್ಕಳಿಂದ ಹಿರಿಯರಾದಿಯಾಗಿ ರಾಂ.ಕೆ.ಅವರ ಪರಿವಾರದ ಯಾರೂ ಸಹ ತಮ್ಮ ಜನ್ಮದಿನೋತ್ಸವ, ವಿವಾಹ ವಾರ್ಷಿಕೋತ್ಸವ, ಹೀಗೆ ಯಾವುದೇ ವೈಯಕ್ತಿಕ ಆಚರಣೆಗಳನ್ನು ಆಚರಿಸಿಕೊಳ್ಳುವುದಿಲ್ಲ. ಆ ವರ್ಷದ ಎಲ್ಲರ ಆಚರಣೆಗಳ ಸಡಗರವನ್ನು ಈ ವಾರ್ಷಿಕೋತ್ಸವದಲ್ಲಿ ಸಹಸ್ರಾರು ಜನರೊಂದಿಗೆ ಕನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೇಳದಲ್ಲಿ ಹಬ್ಬದಂತೆ ಸಂಭ್ರಮಾಚರಣೆ ಮಾಡುತ್ತಾರೆ
ಇಂತಹ ಅಪೂರ್ವ ಸಮಾರಂಭದಲ್ಲಿ, ಅರಬ್ಬಿ ತೀರದ ಈ ಅನಾಮಿಕನ ಅಕ್ಷರಲೋಕದ ಅಲ್ಪ ಸಾಧನೆಯನ್ನು ಗುರುತಿಸಿ, ಆಮಂತ್ರಿಸಿ ಅತ್ಯದ್ಭುತವಾಗಿ ಅರ್ಧಾಂಗಿ ಸಮೇತ ಪ್ರಶಸ್ತಿಯೊಡನೆ ಪುರಸ್ಕರಿಸಿದ್ದು, ಅತೀವ ಅಕ್ಕರೆ ಅಂತಃಕರಣಗಳಿಂದ ಸನ್ಮಾನಿಸಿ ಸತ್ಕರಿಸಿದ್ದು ನನ್ನೀ ಬದುಕಿನ ಚಿರಸ್ಮರಣೀಯ ಕ್ಷಣ. ರಾಂ.ಕೆ. ಮತ್ತು ಅವರ ಕುಟುಂಬವರ್ಗಕ್ಕೆ ನಾನು ಚಿರಋಣಿ, ಕನ್ನಡಿಗರ ಸ್ನೇಹಕೂಟ ಬಳಗಕ್ಕೆ, ಆಯೋಜಕರಿಗೆ ಹಾಗೂ ಮುಖಾಮುಖಿಯಾದ ಸಮಸ್ತ ಸಾಹಿತ್ಯಿಕ ಹೃದಯಗಳಿಗೆ ನಾನು ಆಭಾರಿ.
ಅಕ್ಷರ ಲೋಕದ ಈ ಎಲ್ಲ ಅವಿಸ್ಮರಣೀಯ ಕ್ಷಣಗಳಿಗೆ ನಿತ್ಯ ಓದಿ ಹಾರೈಸುತ್ತಿರುವ ಆತ್ಮೀಯ ಅಕ್ಷರಬಂಧುಗಳಾದ ನೀವೇ ಅನವರತ ಕಾರಣ, ನೀವೇ ಅನಂತ ಪ್ರೇರಣ. ಎದೆತುಂಬಿದ ಕ್ಷಣಗಳ ದೃಶ್ಯಗುಚ್ಛವನ್ನು ನಿಮ್ಮ ಅಂಗೈಗೆ ಅರ್ಪಿಸುತ್ತಿದ್ದೇನೆ. ನೋಡಿ ಹರಸಿ ಬಿಡಿ –
ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.