- Advertisement -
ಸಜ್ಜಾಗಿದ್ದೇವೆ ಹೊಸ ವರುಷಕೆ
ತಿನ್ನಲು ಕೂಳಿಲ್ಲ ನೀರಿಲ್ಲ
ಬಿರಿದ ನೆಲ ಬರಡು ಭೂಮಿ
ಬ್ಯಾಂಕ್ ಮುಂದೆ ಹಣಕ್ಕೆ ಸಾಲು
ಹೆಣಕ್ಕಿಲ್ಲ ಸಿಂಗಾರದ ಶಾಲು
ಸಾಲಕ್ಕೆ ರೈತರ ಆತ್ಮ ಹತ್ಯೆ
ಡಿಜಿಟಲ್ ಭಾರತದ ಕನಸು.
ಕಪ್ಪು ಹಣ ಬಿಳಿ ಮಾಡುವ ಯತ್ನ
ಎಲ್ಲಾ ಪಕ್ಷದವರು ಸತ್ಯವಂತರು.
ನ್ಯಾಯ ನೀತಿಗೆ ಸಾಯುವವರು.
ಪರ ದೇಶಕ್ಕೆ ಭೂಮಿ ಮಾರುವವರು.
ವಿಶ್ವ ಬ್ಯಾಂಕಿಗೆ ನಮ್ಮನ್ನು ಅಡವಿಟ್ಟವರು.
ಹೊರಗೆ ಕಚ್ಚಾಡಿ ಒಳಗೊಳಗೇ ಕೂಡಿದವರು
- Advertisement -
ಧರ್ಮದ ಅಫಿಮ್ ಕೊಟ್ಟು ಕುಣಿಸಿದವರು.
ಮರೆತಿದ್ದೇವೆ ಕುಣಿಕೆಗೆ ಕೊರಳ ಕೊಟ್ಟವರನ್ನು.
ನಾಡ ಉಳಿಸಲು ರಕ್ತ ಬಸಿದವರನ್ನು
ಮಾರಿಕೊಂಡಿದ್ದೇವೆ ಗಣಿ ನೆಲ ಜಲ
ದಶಕ ಕಳೆದರೂ ತೀರದ ಹಸಿವು
ಇಲ್ಲ ಮನೆ ಚಪ್ಪರ ಸೂರು
ಒಳ್ಳೆಯ ದಿನಗಳ ಬರುವಿಕೆಗೆ
ಕಾದಿದ್ದೇವೆ ಬಕ ಪಕ್ಷಿಯಂತೆ
ಬಂತು ಮತ್ತೆ ಹೊಸ ವರುಷ
ಉಳ್ಳವರಿಗೆ ಕುಡಿದು ಕುಪ್ಪಳಿಸುವ ಹರುಷ
ಗತಿಯಿಲ್ಲ ಬೆಂದೊಡಲ ಗಂಜಿಗೆ
ಸಜ್ಜಾಗಬೇಕು ಪಟಾಕಿ ಹೊಡೆಯಲು
ಕುಣಿಯಲು ಕೂಗಲು ಅಳಲು ನಗಲು
ಸಜ್ಜಾಗಿದ್ದೇವೆ ಹೊಸ ವರುಷಕೆ
ಡಾ.ಶಶಿಕಾಂತ.ಪಟ್ಟಣ ಪೂನಾ