ಹಾಸನದಲ್ಲಿ ನಿರಂತರ ನಡೆದುಕೊಂಡು ಬಂದಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 325ನೇ ಮನೆ ಮನೆ ಕವಿಗೋಷ್ಠಿಯಲ್ಲಿ ಭಾರತಿ ಹಾದಿಗೆಯವರ ‘ನಕ್ಕಳಾ ಫಾತಿಮಾ’ ಕಥಾ ಸಂಕಲನ ಕುರಿತು “ಆಂತರಿಕ ಸಾಮಾಜಿಕ ಸಮಸ್ಯೆಗಳು ಹಾಗು ವರ್ತಮಾನದ ಸಾಮಾಜಿಕ ತಲ್ಲಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ” ಎ೦ದು ಯುವ ಕವಯಿತ್ರಿ ನಿಷ್ಕಲಾ ಗೊರೂರು ಅಭಿಪ್ರಾಯಪಟ್ಟರು
ಹಾಸನದ ವಿದ್ಯಾನಗರದ ಪ್ರೊಫಂಡ್ ಟೂಟರ್ಸ್ , ಶಿವಾನಿ ನಿಲಯದಲ್ಲಿ ಕವಿ ಶರತ್ ಪಿ.ಕೆ ಯವರ ಪ್ರಾಯೋಜಕತ್ವದಲ್ಲಿ
ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇಂದಿನ ಮಕ್ಕಳ ಬಗೆಗಿರುವ ತಂದೆ ತಾಯಿಯರ ಆತಂಕ, ಮಕ್ಕಳ ಸ್ಥಿತಿ, ಸಮಯ ನೀಡಲಾಗದೆ ಹಣಕೊಟ್ಟು ಅಡ್ಡದಾರಿಗೆ ಎಡೆಮಾಡಿಕೊಡುತ್ತಿರುವ ಪರಿಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ. ಸರ್ವಸ್ವವೇ ಆದ ಗಂಡ ಮಧ್ಯೆ ಬದುಕಿನಿಂದ ದೂರವಾದಾಗ ಆಕೆ ಸಮಾಜದ ಎದುರು ಎದುರಿಸುವ ತಲ್ಲಣಗಳು ಹಾಗು ಮಕ್ಕಳನ್ನು ಹಾಗು ಸಂಸಾರವನ್ನು ಸಂಬಾಳಿಸಿ ಗೆಲ್ಲುವ ಹೆಣ್ಣುಮಕ್ಕಳ ಹೃದಯಸ್ಪರ್ಶಿ ಕತೆಗಳು ಈ ಕಥಾಸಂಕಲನದಲ್ಲಿವೆ. ಸಾಧ್ಯವಾದರೆ ಇಂತಹ ಕಥೆಗಳನ್ನು ಆಡಿಯೋ ರೂಪದಲ್ಲಿ ಧ್ವನಿ ಮುದ್ರಣ ಮಾಡಿ ಇಂದಿನ ಮಕ್ಕಳಿಗೆ ಹಾಗು ಪೋಷಕ ವೃಂದಕ್ಕೆ ಕೇಳಿಸುವ ತುರ್ತು ಇದೆ ಎಂದು ನಿಷ್ಕಲ ಅಭಿಪ್ರಾಯ ಪಟ್ಟರು.
ಕೃತಿ ಕರ್ತೃ ಭಾರತಿ ಹಾದಿಗೆ ಮಾತನಾಡುತ್ತಾ ಈ ಕಥೆಗಳು ಕೇವಲ ಬರೆಯಬೇಕೆಂದು ಬರೆದವಲ್ಲ. ತುಂಬಾ ದಿನಗಳು ಕಾಡಿ ಅವೇ ಬರೆಸಿಕೊಂಡಿವೆ. ಸಮಾಜದಲ್ಲಿ ಕ೦ಡುಂಡ ಕೆಲವು ಸತ್ಯಘಟನೆಗಳಿಗೆ ಕತೆ ರೂಪ ನೀಡಲಾಗಿದೆ. ಕಥೆ ಬರೆಸಿಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಡಿದೆ. ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಮತ್ತಷ್ಟು ಕಥೆಗಳನ್ನು ಬರೆಯಲು ಪ್ರೇರಣೆಯಾಗಿದೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಯಮುನಾವತಿ ಹೆಚ್.ಕೆ, ಸುಶೀಲಾ ಸೋಮಶೇಖರ್, ಶೈಲಜಾ ಹಾಸನ, ವಿಜಯ ಹಾಸನ, ಹೇಮರಾಗ ಎನ್ ಎಲ್ ಚನ್ನೇಗೌಡ, ತಮ್ಮಣ್ಣಯ್ಯ, ಪುಟ್ಟೇಗೌಡ, ಮಲ್ಲೇಶ್ ಜಿ, ಗೊರೂರು ಅನಂತರಾಜು ಸ್ವರಚಿತ ಕವನ ವಾಚಿಸಿದರು. ಜಯಾ ರಮೇಶ್, ಸುಮಾ ರಮೇಶ್, ಬಾಲಕೃಷ್ಣ,ಎಸ್.ಎನ್ ಯೋಗೇಶಪ್ಪ, ಆರ್ ಮೋಹನ್ ರಾಥೋಡ್ , ಶಿವಾಗ್ನಿ ಶ್ರೀರಾಜ್, ವೇದಶ್ರೀರಾಜ್, ಶೋಭರಾಣಿ ಸಹನಾ ಪಾಟೀಲ್ , ಜಯದೇವಪ್ಪ ಮುಂತಾದವರು ಉಪಸ್ಥಿತರಿದ್ದರು.
ಕೃತಿ ಕರ್ತೃ ಭಾರತಿ ಹಾದಿಗೆ ಹಾಗು ವಿಮರ್ಶಕಿ ನಿಷ್ಕಲಾ ಗೊರೂರು ರವರನ್ನು ಮನೆ ಮನೆ ಕವಿಗೋಷ್ಠಿಯ ವತಿಯಿಂದ ಗೌರವಿಸಲಾಯಿತು.
ಸಂಚಾಲಕರರಾದ ಸಾಹಿತಿ ಗೊರೂರು ಅನಂತರಾಜು ಸ್ವಾಗತಿಸಿ ಸಾಹಿತಿ ಸಮುದ್ರವಳ್ಳಿ ವಾಸು ವಂದಿಸಿದರು. ತಮ್ಮಣ್ಣಯ್ಯ ಬಾಲಕೃಷ್ಣ ರವರಿಂದ ಹಾಡುಗಾರಿಕೆ ನಡೆಯಿತು.