ದೂರಾಗಿ ದುಃಖಿಸುವ ಶ್ರೀರಾಮಸೀತೆಯರ
ಒಂದುಗೂಡಿಸಿಬಿಟ್ಟ ವಾಯುಪುತ್ರ
ಅಗಲಿರುವ ಜೀವಾತ್ಮ ಪರಾಮಾತ್ಮರೈಕ್ಯಕ್ಕೆ
ಪವನಜನೆ ಕಾರಣನು – ಎಮ್ಮೆತಮ್ಮ
ಶಬ್ಧಾರ್ಥ
ವಾಯುಪುತ್ರ = ಹನುಮಂತ. ಪವನಜ = ಆಂಜನೇಯ
ತಾತ್ಪರ್ಯ
ಇದು ರಾಮಾಯಣದಲ್ಲಿ ಬರುವ ಹನುಮಂತನ ಪ್ರಸಂಗ.
ಸೀತೆಯನ್ನು ರಾವಣ ಅಪಹರಣ ಮಾಡಿಕೊಂಡುಹೋಗಿ
ಲಂಕೆಯ ಅಶೋಕವನದಲ್ಲಿ ಇಟ್ಟಿದ್ದ. ಸೀತೆ ಅಲ್ಲಿ ದುಃಖಿಸುತ್ತ
ಕಾಲ ಕಳೆಯುತ್ತಿದ್ದಳು. ಆಗ ಹುಡುಕುತ್ತ ಕಿಷ್ಕಿಂದೆಗೆ ಬಂದ
ರಾಮಲಕ್ಷ್ಮಣರಿಗೆ ಹನುಮಂತ ಮತ್ತು ಸುಗ್ರೀವ ಸ್ನೇಹಿರಾದರು.
ಸೀತೆಯನ್ನು ಹುಡುಕಲು ಸುಗ್ರೀವ ಹನುಮಂತನನ್ನು ದಕ್ಷಿಣಕ್ಕೆ ಕಳಿಸಿದ. ಹನುಮಂತ ಲಂಕೆಗೆ ಹಾರಿ ಸೀತೆಗೆ ರಾಮ ಕೊಟ್ಟ ಉಂಗುರ ಕೊಟ್ಟು ಲಂಕೆಸುಟ್ಟು ವಾಪಾಸು ಬಂದ.ಆಮೇಲೆ ರಾಮ ರಾವಣನ ಮೇಲೆ ಯುದ್ಧ ಮಾಡಿ ಸೀತೆಯನ್ನು ತಂದ. ಇದು ಮೇಲ್ನೋಟಕ್ಕೆ ಕಥೆ.ಆದರೆ ಇದರಲ್ಲಿ ಅಧ್ಯಾತ್ಮದ ತಂತ್ರ ಅಡಗಿದೆ. ರಾಮನೆಂದರೆ ಆತ್ಮರಾಮ ಪರಮಾತ್ಮ ಸೀತೆ ಎಂದರೆ ಶಾಂತಿಯಿಲ್ಲದ ಜೀವಾತ್ಮ. ಇವೆರಡು ದೇಹದಲ್ಲಿ ಬೇರೆಯಿರುವುದರಿಂದ ದುಃಖದುಮ್ಮಾನ.ಇವೆರಡನ್ನು ಒಂದುಗೂಡಿಸಿದರೆ ಶಾಂತಿ.ಆ ಕೆಲಸವನ್ನು ಉಸಿರಿಗೆ ಅಧೀನವಾಗಿರುವ ಮನಸ್ಸು ಮಾಡುತ್ತದೆ. ವಾಯುಪುತ್ರ ಎಂದರೆ ಕಪಿಯಂತಿರುವ ಮನಸ್ಸು. ಹನುಮಂತನಿಗೆ ಅಂಜಿನೀಪುತ್ರ ಆಂಜನೇಯ ಎಂದು ಕರೆವರು. ಅಂಜನ ಎಂದರೆ ವಿಶೇಷವಾದ ಕಾಡಿಗೆಯಿಂದ ನೋಡುವ ನೋಟ. ಉಸಿರು, ಕಣ್ಣು ಮತ್ತು ಮನಸುಗಳು ಕೂಡಿದರೆ ಜೀವಾತ್ಮ ಪರಮಾತ್ಮನನ್ನು ಸೇರುತ್ತದೆ. ಕೂಡಿಸುವ ಮನವೆ ಪವನಜ
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099