spot_img
spot_img

ಆಲೂರು ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಂಪಾದಕಿ ಲೀಲಾವತಿ

Must Read

spot_img
- Advertisement -

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಲೂರು ತಾಲ್ಲೂಕು ಘಟಕದಿಂದ ಆಲೂರು ತಾ. ೩ನೇ ಸಾಹಿತ್ಯ ಸಮ್ಮೇಳನ ಭಾನುವಾರ ಹರಿಹಳ್ಳಿಯಲ್ಲಿ ನಡೆಯುತ್ತಿದೆ.

ಸಮ್ಮೇಳನಾಧ್ಯಕ್ಷರಾಗಿ ಹಾಸನ ವಾಣಿ ದಿನಪತ್ರಿಕೆಯ ಸಂಪಾದಕಿ ಲೀಲಾವತಿ ಆಯ್ಕೆ ಆಗಿದ್ದಾರೆ. ಅವರು ಇದೇ ಹರಿಹಳ್ಳಿ ಗ್ರಾಮದವರು. ಸದ್ಯ ಹಾಸನದ ವಾಸಿ. ಮೇಡಂ ಮೊದಲು ವರದಿಗಾರ್ತಿಯಾಗಿ ಕೃ.ನ.ಮೂರ್ತಿ ಅವರ ಜನಮಿತ್ರ ದಿನಪತ್ರಿಕೆಗೆ ಹಾಸನ ಮಾಧ್ಯಮ ದಿನಪತ್ರಿಕೆಯ ಸಂಪಾದಕರು ಕೆ.ಶೇಷಾದ್ರಿಯವರ ಮುಖೇನ ದಿ. ೧೫-೮-೧೯೭೫ರಂದು ಸೇರಿ ಸರಿಸುಮಾರು ೫೦ ವರ್ಷಗಳ ಪತ್ರಿಕೋದ್ಯಮ ಜೀವನದ ಅನೇಕ ಏಳು ಬೀಳು ಕಂಡವರು. ೧೧ ವರ್ಷ ಜನಮಿತ್ರ ಸೇವೆಯ ನಂತರ ೧೯೮೮ರಿಂದ ೨೦೦೫ವರೆಗೆೆ ಕನ್ನಡ ಪ್ರಭ ದಿನಪತ್ರಿಕೆಗೆ ವರದಿಗಾರ್ತಿ. ೨೦೦೫ರಿಂದ ಹಾಸನವಾಣಿ ದಿನಪತ್ರಿಕೆ ಪ್ರಾರಂಭಿಸಿ ೨೦ ವರ್ಷಗಳ ಸುಧೀರ್ಘ ಸಂಪಾದಕಿ.

ಪತ್ರಿಕೋದ್ಯಮ ಎಂದರೆ ಅದೊಂದು ಸಾಹಸದ ಕಥೆ. ಅನೇಕ ಏಳುಬೀಳುಗಳ ಸಂತೆ. ಈ ಸಂತೆಯಲ್ಲಿ ನಾನು ಕೆಲವು ವರ್ಷ ಸಂತನಾಗಿ ಸಾಕಪ್ಪ ಈ ಸಹವಾಸ ಎಂದು ದೂರವಾದವನು. ಆದರೂ ಇಂದಿಗೂ ನಾನು ದಿನನಿತ್ಯದ ನೆನೆಯುವುದೇ ಪತ್ರಿಕೆಗಳನ್ನು. ಏಕೆಂದರೆ ನನ್ನ ಸಾಹಿತ್ಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರವೇ ಪ್ರಮುಖ. ಸಾಹಿತಿ ಮಿತ್ರ ಕೊಟ್ರೇಶ್ ಎಸ್. ಉಪ್ಪಾರ್ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟು ಹಾಕಿ ಅದನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿ ಸಾಹಿತ್ಯ ಚಟುವಟಿಕೆ ನಡೆಸಿಕೊಂಡು ಬಂದಿದ್ದಾರೆ. ಆಲೂರು ಹಾಸನ ಜಿಲ್ಲೆಯ ಚಿಕ್ಕ ತಾಲ್ಲೂಕು. ಇಲ್ಲಿ ಈವರೆಗೂ ೯ ಕ.ಸಾ.ಪ. ತಾಲ್ಲೂಕು ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಜಿಲ್ಲೆಯ ಬೇರೆ ಯಾವುದೇ ತಾಲ್ಲೂಕಿಗೆ ಹೋಲಿಸಿದರೆ ಇದು ಹೆಚ್ಚೆ ಹೌದು. ಸಮ್ಮೇಳನ ಹಿನ್ನೆಲೆಯಲ್ಲಿ ಮೇಡಂ ಅವರನ್ನು ನೆನ್ನೆ ಭೇಟಿಯಾದೆ. ತಮ್ಮ ಸಾಂಸರಿಕ ಜೀವನ ಪತ್ರಿಕೆ ಕುರಿತಾಗಿ ಮಾತನಾಡುತ್ತಾ ನನಗೆ ೧೫ನೇ ವರ್ಷಕ್ಕೆ ಮದುವೆಯಾಯಿತು. ೨೩ ಜನರ ದೊಡ್ಡ ಕುಟುಂಬ. ತಂದೆ ಹೆಚ್.ಎಸ್. ವೆಂಕಟನಾರಾಣಪ್ಪ. ತಾಯಿ ಗೌರಮ್ಮ. (ಜನ್ಮ ದಿನಾಂಕ ೨೩-೧೧-೧೯೫೦) ತಂದೆ ಶ್ಯಾನುಬೋಗರು.

- Advertisement -

ಪಿತ್ರಾರ್ಜಿತ ಜಮೀನು ೩೦೦ ಎಕರೆ. ಆದರೆ ಉಳುವವರೇ ಭೂಮಿ ಒಡೆಯ ಕಾನೂನಿಗೆ ಈಗ ಏನೂ ಇಲ್ಲ. ಹಿರಿ ಸೊಸೆ ಮನೆಗೆ ಹಿರಿ ಮಗಳು ಹೀಗೆ ತುಂಬು ಸಂಸಾರದ ಕಥೆ ಹೇಳಿದರು. ಕಡೆಗೆ ಇವೆಲ್ಲಾ ಬರೆಯುವುದು ಬೇಡ ಎಂದರು.

ಸರಿ ನಿಮ್ಮ ಅನುಭವ ಕಥೆಯನ್ನು ಬರೆಯಿರಿ ಎಂದೆ. ದಿನ ಪೂರ್ತಿ ಪತ್ರಿಕೆಯದೇ ತಲೆ ಬಿಸಿ.. ಆಗ ಒಂದು ಪೋನ್ ಬಂತು. ನೋಡಿದ್ರಾ ಪತ್ರಿಕೆ ಜೊತೆಗೆ ಇದೊಂದು ತಲೆಬಿಸಿ ಎಂದರು. ಏಕೋ ಮೇಡಂಗೆ ನಾನು ತೊಂದರೆ ಕೊಡುತ್ತಿರುವೆನೋ ಎನಿಸಿದ್ದು ಸುಳ್ಳಲ್ಲ. ಆದರೆ ಅವರಿಗೆ ಮೊದಲೇ ಪೋನ್ ಮಾಡಿ ಸಮಯ ತೆಗೆದುಕೊಂಡಿದ್ದೆನಷ್ಟೇ. ಮೇಡಂ ಕವಯಿತ್ರಿಯೂ ಹೌದು. ಅವರೊಟ್ಟಿಗೆ ಒಂದಿಷ್ಟು ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದೇನೆ. ಸುಮಾರು ೯೦ ಕವಿತೆ ಬರೆದಿರುವೆ ಪುಸ್ತಕ ಪ್ರಕಟಿಸಿಲ್ಲ ಎಂದರು. ಆದರೆ ಪತ್ರಿಕೆಯ ಸಂಪಾದಕೀಯ ಲೇಖನಗಳ ಪುಸ್ತಕ ಪ್ರಕಟಿಸಿದ್ದಾರೆ. ಅದರ ಒಂದು ಪ್ರತಿಯೂ ಸದ್ಯ ನನ್ನ ಬಳಿ ಇಲ್ಲ ಎಂದು ಪೇಚಾಡಿಕೊಂಡರು. ಹಾಸನವಾಣಿ ಪತ್ರಿಕೆಗೆ ನಾನು ಈ ಹಿಂದೆ ಹಾಸನ ಜಿಲ್ಲೆಯ ದೇವಾಲಯಗಳ ದರ್ಶನ ಶೀರ್ಷಿಕೆಯಲ್ಲಿ ೬೮ ಭಾನುವಾರ ಬರೆದಿದ್ದು ಅದು ಪುಸ್ತಕವಾಗಿ ಪ್ರಕಟವಾಗಿದೆ. ಈಗ ನನ್ನ ಬಳಿಯೂ ಆ ಪುಸ್ತಕದ ಒಂದು ಪ್ರತಿಯೂ ಇಲ್ಲ. ಆಗ ನನ್ನದು ಅದೆಂತಹ ಕಮಿಟ್‌ಮೆಂಟ್ ಎಂದರೆ ಮೇಡಂ ನನಗೆ ಒದಗಿಸಿದ್ದ ಅಂಕಣ ಬರಹಕ್ಕೆ ಬ್ರೇಕ್ ಬೀಳಬಾರದೆಂದು ಶನಿವಾರದ ಹೊತ್ತಿಗೆ ಜಿಲ್ಲೆಯ ಯಾವುದಾದರೂ ಒಂದು ಧಾರ್ಮಿಕ ಕ್ಷೇತ್ರದ ಸ್ಥಳ ಪುರಾಣ ಮಾಹಿತಿ ಸಂಗ್ರಹಿಸಿ ಪೋಟೋ ಜೊತೆಗೆ ಹಾಸನವಾಣಿ ಆಫೀಸಿಗೆ ೧ ಗಂಟೆ ಒಳಗೆ ಹೋಗುತ್ತಿದ್ದೆ. ಅಲ್ಲಿ ಜಗದೀಶ್‌ರವರು ಅದೇನು ವೇಗವಾಗಿ ಅರ್ಧಗಂಟೆಯಲ್ಲಿ ನನ್ನ ಲೇಖನ ಟೈಪ್ ಮಾಡಿ ಬೇರೆ ಯಾರೋ ಲೇಖಕಿ ಬರೆಯುತ್ತಿದ್ದ ಅಂಕಣ ಬರಹವನ್ನು ಟಾಪ್‌ನಲ್ಲಿ ಕೂರಿಸಿ ಎಡ ಪಕ್ಕ ಎರಡು ಕಾಲಂನಲ್ಲಿ ಎರಡು ಕವನಗಳನ್ನು ಅಳವಡಿಸಿ ಜಾಗ ಉಳಿದರೆ ಇನ್ಯಾವುದಾರೂ ಒಂದು ಲೇಖನವನ್ನು ಅಡ್ಜಸ್ಟ್ ಮಾಡಿ ಸುಮಾರು ಒಂದು ಗಂಟೆ ಅವಧಿಯಲ್ಲಿ ಒಂದು ಪೇಜ್ ಮುಗಿಸಿ ಆಫೀಸಿಗೆ ಬೀಗ ಹಾಕಿ ಇನ್ನೊಂದು ಪೇಪರ್ ಆಫೀಸ್‌ಗೆ ಹೊರಡುತ್ತಿದ್ದರು. ಈ ಮೊದಲು ನಾನು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ಮಹಾನಂದಿ ದಿನಪತ್ರಿಕೆಯ ಭಾನುವಾರದ ಸಂಚಿಕೆಗೆ ಪ್ರಸೆಂಟ್ ಪಾಲಿಟಿಕ್ಸ್ ಆಧರಿಸಿ ೨೦ ವಾರ ಕುಡುಕ ಕರಿಯಪ್ಪನ ಕಥೆಗಳು ಹಾಸ್ಯ ವಿಡಂಬನೆ ಲೇಖನ ಬರೆದಿದ್ದೆನು. ಇದನ್ನು ಗಮನಿಸಿಯೋ ಏನೋ ಜಗದೀಶ್ ಹಾಸನವಾಣಿಗೂ ಬರೆಯಿರಿ ಎನ್ನಲು ಜೋಕ್ಸ್ ಆಧಾರಿತ ಎರಡು ಪಾತ್ರಗಳ ಕಿರು ಸ್ಕಿಟ್‌ಗಳನ್ನು ಬರೆದು ಅದು ೨೦ ವಾರ ಬಂದು ಕಿರು ಹಾಸ್ಯ ಪ್ರಹಸನಗಳು ಪುಸ್ತಕವೂ ಹೊರ ಬಂತು. ಮೇಡಂ ಪತ್ರಿಕೆ ಪ್ರಾರಂಭದಿಂದಲೂ ೪ ಪುಟಗಳ ಪತ್ರಿಕೆಗೆ ಭಾನುವಾರ ಒಂದು ಪುಟ ಸಾಹಿತ್ಯಕ್ಕೆ ಮೀಸಲಿರಿಸಿದ್ದಾರೆ. ಇದರ ಸದುಪಯೋಗವನ್ನು ನನ್ನಂತೆಯೇ ಅನೇಕ ಸಾಹಿತಿಗಳು ಪಡೆದಿದ್ದಾರೆ.

೨೦೧೧-೧೪ರ ಅವಧಿಯಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಮೇಡಂ ಅವರಿಗೆ ‘ಪೇಪರ್ ನಡೆಸುವುದು ತುಂಬಾ ಕಷ್ಟ ಮತ್ತು ನಷ್ಟ. ಇದನ್ನು ಹೇಗೆ ನಿಭಾಯಿಸಿದಿರಿ ಎಂದೆ. ವೈಯುಕ್ತಿಕವಾಗಿ ಇದರ ಗಾಢ ಅನುಭವ ನನಗಿಲ್ಲ. ನಾನು ತೋ.ಚ. ಅನಂತಸುಬ್ಬರಾಯರು ಬೇಲೂರಿನಿಂದ ಪ್ರಕಟಿಸುತ್ತಿದ್ದ ಮಾರ್ಗಪ್ರಭಕ್ಕೆ ಹಾಸನದಿಂದ ವರದಿ ಕೆಲ ದಿನ ಕಳಿಸಿದೆ. ಸಂಕೇನಹಳ್ಳಿ ರಂಗನಾಥ್ ನಡೆಸಿದ ಒಕ್ಕೂಟ ಪತ್ರಿಕೆಯ ಗೌ. ಸಹ ಸಂಪಾದಕನಾಗಿ ೬ ವಾರ ಪುಕ್ಕಟೆ ಕೆಲಸ ಮಾಡಿ ಅಷ್ಟಕ್ಕೆ ಅದು ನಿಂತು ಹೋಯಿತು. ರವಿ ಬೆಳಗೆರೆ ಬಳ್ಳಾರಿಯಿಂದ ಹೊರ ತರುತ್ತಿದ್ದ ಕ್ರೈಮ್ ಸಮಾಚಾರ ಪತ್ರಿಕೆಗೆ ಐಡಿ ಕಾರ್ಡ್ ಪಡೆದು ಒಂದೆರೆಡು ಕ್ರೈಮ್ ನ್ಯೂಸ್ ಕಳಿಸಿ ಸುಮ್ಮನಾದೆ. ಬೆಂಗಳೂರಿನ ಸಂಜೆವಾಣಿ ಪತ್ರಿಕೆ ಹಾಸನ ತರಿಸಿ ಏಜೆಂಟ್ ವೃತ್ತಿಗೆ ವಿದಾಯ ಹೇಳಿದೆ. ಆಗಿನ ವಾರ್ತಾಧಿಕಾರಿ ತೋಪೇಗೌಡರ ಜೊತೆ ವ್ಯಾನ್‌ನಲ್ಲಿ ಆಲೂರು ತಾಲ್ಲೂಕಿನ ಒಂದು ಹಳ್ಳಿಗೆ ಮಾಜಿ ಪ್ರಧಾನಿಗಳ ವಿಲೇಜ್ ಸಭೆಯ ವರದಿ ಬರೆಯಲು ಹೋಗಿ ರಾತ್ರಿ ಊಟಕ್ಕೆ ತಾಪತ್ರಯವಾಗಿ ಅದನ್ನು ಬಿಟ್ಟೆ. ಆಗ ನೂರು ರೂ. ಕೊಟ್ಟು ಪತ್ರಕರ್ತರ ಸಂಘದ ಮೆಂಬರ್ ಆಗಿದ್ದನಷ್ಟೇ.! ಈ ಗ್ರೇಟ್ ಎಕ್ಸ ಪೀರಿಯನ್ಸಲ್ಲಿ ಒಬ್ಬ ಮಹಿಳಾ ವರದಿಗಾರ್ತಿ ಸಂಪಾದಕಿಯಾಗಿ ತಮಗೆ ತಾವೆ ಪ್ರಮೋಟ್ ಆಗಿ ಪತ್ರಿಕೆ ಮುನ್ನೆಡೆಸಿಕೊಂಡು ಬಂದಿರುವುದು ನಿಜಕ್ಕೂ ಸಾಹಸವೇ. ಅನಂತರಾಜು, ನಾನು ಹಾಸನವಾಣಿ ಪತ್ರಿಕೆಯ ಒಂದು ರೂಪಾಯಿಯನ್ನು ನನ್ನ ಕುಟುಂಬಕ್ಕೆ ಬಳಸಿಕೊಂಡಿಲ್ಲ. ನನ್ನ ಜೀವನ ನಡೆದಿದ್ದರೆ ಮನೆ ಕಟ್ಟಿದ್ದರೆ ಅದು ಆಡ್ಸ್ನಿಂದ ಅಷ್ಟೇ.

- Advertisement -

ನಾನು ಕನ್ನಡಪ್ರಭ, ಜನವಾಹಿನಿ ಒಳಗೊಂಡು ಕೆಲವು ಪತ್ರಿಕೆಗಳಿಗೆ ಜಾಹೀರಾತು ಸಂಗ್ರಹಿಸಿ ಈ ಕಮಿಷನ್ ಲಾಭವೇ ಜೀವನೋಪಾಯ ಎಂದರು. ಆಗೆಲ್ಲಾ ಪತ್ರಿಕೆಗಳಲ್ಲಿ ಪ್ರಕಟಿತ ವರದಿಗೆ ಕಾಲಂ ಸೆಂ.ಮೀ. ಅಳತೆ ಟೇಪ್ ಲೆಕ್ಕದಲ್ಲಿ ಪೇಮೆಂಟ್ ಎಂದರು. ಪತ್ರಿಕೋಧ್ಯಮ ಜೀವನದ ಹಲವು ವಿಚಾರಗಳನ್ನು ಸಂಘರ್ಷ ಸಂಕಷ್ಟಗಳನ್ನು ಹೇಳಿ ಕಡೆಯಲ್ಲಿ ಪ್ಲೀಸ್ ಆಫ್ ದಿ ರೆಕಾರ್ಡ್ ಎಂದರು.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group