spot_img
spot_img

ಅವಮಾನ ಮೀರಲು ಅಧಿಕಾರಿಯಾದೆ: ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಅವರ ಅಭಿಮತ

Must Read

spot_img
- Advertisement -

ನಮ್ಮ ಊರುಕೇರಿಗಳಲ್ಲಿ ಹಲವಾರು ಕಾರಣಗಳಿಗಾಗಿ ಅವಮಾನ ಆಗುತ್ತಿತ್ತು. ಇದನ್ನು ಮೀರಬೇಕಾದರೆ ದೊಡ್ಡ ಸಾಧನೆ ಮಾಡಬೇಕು, ದೊಡ್ಡ ಅಧಿಕಾರಿಯಾಗಬೇಕು ಎಂದು ಹತ್ತು ವರ್ಷಗಳ ಕಾಲ ಶ್ರಮಪಟ್ಟು ಕೆ.ಎ.ಎಸ್ ಅಧಿಕಾರಿಯಾದೆ ಎಂದು ಕೋಲಾರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಎಸ್.ಎಂ.ಮಂಗಳಾ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ವತಿಯಿಂದ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಂಡಿರುವ ೫ ದಿನಗಳ “ಸೌಹಾರ್ದಗಿರಿ-ಗ್ರಾಮೀಣ ಶಿಬಿರ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳೊಂದಿಗೆ ಸಮಾಜಸೇವೆ ಕುರಿತು ಸಂವಾದ ನಡೆಸುತ್ತಾ ತಮ್ಮ ಸಾಧನೆಯ ಅನುಭವಗಳನ್ನು ಹಂಚಿಕೊಂಡರು.

ನನ್ನ ತಂದೆತಾಯಿಯರು ನೀಡಿದ ಪ್ರೋತ್ಸಾಹದಿಂದ, ಶಿಕ್ಷಣ ತಜ್ಞರಾದ ಎಚ್.ನರಸಿಂಹಯ್ಯ, ಪ್ರಸಿದ್ಧ ಐಎಎಸ್ ಅಧಿಕಾರಿಗಳಾದ ಬಸವಯ್ಯ ಮೊದಲಾದವರ ಸಾಧನೆ ಮತ್ತು ಸಮಾಜಸೇವೆಯಿಂದ ಸ್ಪೂರ್ತಿಗೊಂಡು ನಾನೂ ಇಂತಹ ಸಾಧನೆ ಮಾಡಬೇಕೆಂದು ಶ್ರಮವಹಿಸಿದ್ದಕ್ಕೆ ಈ ಹಂತಕ್ಕೆ ಬಂದಿದ್ದೇನೆ. ನಿಮಗೂ ಇಂತಹ ಎಷ್ಟೋ ಅವಕಾಶಗಳಿವೆ. ಅದನ್ನು ಬಳಸಿಕೊಂಡು ಒಳ್ಳೆಯ ಅಧಿಕಾರಿಗಳಾದರೆ ಜನರಿಗೆ ಒಳ್ಳೆಯ ಸೇವೆಯನ್ನು ನೀಡಬಹುದು. ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಬಹುದು ಎಂದರು.
ಸಾಧನೆಯ ಹಾದಿಯಲ್ಲಿ ಹೆಣ್ಣುಮಕ್ಕಳಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ನಾವು ಅವುಗಳಿಗೆ ಹೆದರಿ ಎದೆಗುಂದಬಾರದು, ನಕಾರಾತ್ಮಕವಾಗಿ ಯೋಚಿಸಬಾರದು. ಯಾವಾಗಲೂ ಸಕಾರಾತ್ಮಕವಾಗಿ ಸಶಕ್ತರಾಗುತ್ತಾ ಹೋಗಬೇಕು. ಸವಾಲುಗಳನ್ನು ಮೀರಿದಾಗಲೇ ಸಾಧನೆಗಳನ್ನು ಮಾಡಲು ಸಾಧ್ಯ. ನಾನೂ ಅಧಿಕಾರಿಯಾಗಿ ಬಂದಾಗಲೂ ವಿವಿಧ ಸವಾಲುಗಳನ್ನು ಎದುರಿಸಿ, ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತಾ ಜನಪರವಾಗಿ ಯರ್ರಗೋಳ್ ಡ್ಯಾಂ, ಪಿಂಚಣಿ, ರೈತರಿಗೆ ಪರಿಹಾರ ಧನ, ಬರಪೀಡಿತ ಪ್ರದೇಶಗಳ ಅಭಿವೃದ್ಧಿ ಮೊದಲಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

- Advertisement -

ಆದಿಮದ ಟ್ರಸ್ಟಿಗಳಾದ ಹ.ಮಾ.ರಾಮಚಂದ್ರ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಕ್ರಿಯೆ ಎಂಬುದು ರೋಗ, ಪ್ರಕ್ರಿಯೆ ಎಂಬುದು ಔಷಧಿ. ಇಂತಹ ಪ್ರಕ್ರಿಯೆಯ ಭಾಗವಾಗಿಯೇ ಆದಿಮ ಹುಟ್ಟಿದ್ದು. ನಾವು ಬದುಕಬೇಕು, ಇತರರನ್ನು ಬದುಕಲುಬಿಡಬೇಕು. ನಾವು ನಮ್ಮನ್ನು ಪ್ರಶ್ನಿಸಿಕೊಳ್ಳುವ ಮೂಲಕ ಕನಿಷ್ಠ ವಿವೇಕವನ್ನು ಬೆಳೆಸಿಕೊಳ್ಳಬೇಕು. ನೆಲಮುಖಿಯಾಗಿ ಬದುಕಬೇಕು. ನಮ್ಮೊಳಗೆ ಹಠ, ಛಲ ಇದ್ರೆ ಒಳ್ಳೆಯ ಅಧಿಕಾರಿಯಾಗಬಹುದು, ಜನಪರ ಹಾಗೂ ಜೀವಪರ ಕೆಲಸ ಮಾಡಬಹುದು ಎಂದು ತಿಳಿಸಿದರು.

ಪತ್ರಕರ್ತರಾದ ಸಿ.ವಿ.ನಾಗರಾಜ್ ಅವರು ಶಿಬಿರಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ, ನಾವು ಎಲ್ಲಿಯೇ ಇರಲಿ ಅಲ್ಲಿನ ಜನಜೀವನ, ವಾತಾವರಣದೊಂದಿಗೆ ಹೊಂದಿಕೊಂಡು ಬಾಳುವುದೇ ಒಂದು ದೊಡ್ಡ ಜೀವನ ಕೌಶಲ್ಯ ಮತ್ತು ಮೌಲ್ಯ ಎಂದು ತಿಳಿಸಿದರು. ಯಾಕೆಂದರೆ ಇಂದು ಹೊಸಪೀಳಿಗೆಯು ನಡೆಯುತ್ತಿರುವ ರೀತಿಯನ್ನು ನೋಡಿದರೆ ಭಯ ಆಗ್ತದೆ, ಭವಿಷ್ಯದ ಬಗ್ಗೆ ಆತಂಕ ಆಗ್ತದೆ. ತಂದೆತಾಯಿಯರು ತಮ್ಮ ಮಕ್ಕಳು ಒಳ್ಳೆಯ ಸಾಧನೆ ಮಾಡಿ ಒಳ್ಳೆಯ ವ್ಯಕ್ತಿಗಳಾಗಬೇಕು ಎಂತ ಕನಸು ಕಾಣ್ತಾರೆ. ಅಂತಹ ಕನಸುಗಳನ್ನು ನೀವು ಸಾಕಾರಗೊಳಿಸುವಂತೆ ಹೆಚ್ಚೆಚ್ಚು ಓದಿರಿ, ತಂತ್ರಜ್ಞಾನ ತಿಳೀರಿ, ನೀವೂ ಈ ನೆಲದ ಭಾರತರತ್ನಗಳಾಗಿರಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಉರಿಗಿಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿರಾಜು, ಹಿರಿಯ ಮುಖಂಡ ಉರಿಗಿಲಿ ವೆಂಕಟಸ್ವಾಮಿ, ಜನ್ನಘಟ್ಟ ಗ್ರಾಮಪಂಚಾಯಿತಿಯ ಉಪಾಧ್ಯಕ್ಷರಾದ ಕಲ್ಲೂರು ಚಲಪತಿ ಮಾತನಾಡಿದರು. ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರದ ಸಂಯೋಜಕರಾದ ಡಾ.ಶಶಿಕುಮಾರ್, ಕನ್ನಡ ಉಪನ್ಯಾಸಕ ಹಾಗೂ ಶಿಬಿರದ ಸಂಯೋಜಕರಾದ ಡಾ. ಕುಪ್ಪನಹಳ್ಳಿ ಎಂ. ಬೈರಪ್ಪ, ಉಪನ್ಯಾಸಕರಾದ ಡಾ.ಅರುಣ್‌ಕುಮಾರ್, ಡಾ.ದೀಕ್ಷಿತ್ ಕುಮಾರ್, ಡಾ.ಜನನಿ, ಡಾ.ರೇಚಲ್, ಡಾ.ಅಶೋಕ್, ಡಾ.ಆಸ್ಟಿನ್ ರಿಚರ್ಡ್ ಮೊದಲಾದವರು ಉಪಸ್ಥಿತರಿದ್ದರು. ೭೫ ಶಿಬಿರಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

- Advertisement -

*ವಿಶೇಷ ಸುದ್ದಿ*

ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಾಮಾಜಿಕ ಚಟುವಟಿಕೆಗಳ ಕೇಂದ್ರ ಹಾಗೂ ಚುನಾವಣಾ ಸಾಕ್ಷರತಾ ಸಂಘಗಳ ಸಹಯೋಗದಲ್ಲಿ “ಸೌಹಾರ್ದಗಿರಿ-ಗ್ರಾಮೀಣ ಶಿಬಿರ”ದ ಅಂಗವಾಗಿ ತೇರಹಳ್ಳಿಯಲ್ಲಿ ಆಯೋಜಿಸಲಾಗಿದ್ದ “ಚುನಾವಣಾ ಜಾಗೃತಿ ಹಾಗೂ ಮತದಾರ ಚೀಟಿ ನೋಂದಣಿ” ಅಭಿಯಾನವು ಯಶಸ್ವಿಯಾಗಿ ನಡೆಯಿತು. ಶಿಬಿರದ ೭೫ ಶಿಬಿರಾರ್ಥಿಗಳು ತೇರಹಳ್ಳಿಯಲ್ಲಿ ರ್ಯಾಲಿಯ ಮೂಲಕ ಚುನಾವಣಾ ಜಾಗೃತಿ ಮೂಡಿಸಿದರು. ಮನೆ ಮನೆಗೂ ತೆರಳಿ ಮತದಾರ ಚೀಟಿಗಳನ್ನು ಪರಿಶೀಲಿಸಿ, ಅರಿವು ಮೂಡಿಸಿ ಸುಮಾರು ೪೫ಕ್ಕೂ ಹೆಚ್ಚು ಮತದಾರ ಚೀಟಿಗಳನ್ನು ನೊಂದಣಿ ಮಾಡಿಸಿದರು. ಅಬಾ ಎಂಬ ಆರೋಗ್ಯ ಕಾರ್ಡಿನ ಬಗ್ಗೆ ತಿಳಿಸಿ ಸುಮಾರು ೨೫ ಕಾರ್ಡುಗಳನ್ನು ನೋಂದಣಿ ಮಾಡಿಸಿದರು. ಜೊತೆಗೆ ತೇರಹಳ್ಳಿಯ ಗೌರಿಗಂಗಾಧರೇಶ್ವರ ದೇವಾಲಯದ ಆವರಣವನದನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಗ್ರಾಮಸ್ಥರಿಗೆ ಸ್ವಚ್ಛತೆಯನ್ನು ಕುರಿತು ಅರಿವು ಮೂಡಿಸಿದರು.

ಜಾಗೃತಿ ಅಭಿಯಾನ, ಮತದಾರ ಚೀಟಿ ನೋಂದಣಿ ಹಾಗೂ ಸ್ವಚ್ಛತಾ ಕಾರ್ಯಕ್ರಮದ ನೇತೃತ್ವವನ್ನು ಕ್ರಿಸ್ತು ಜಯಂತಿ ಕಾಲೇಜಿನ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ಡಾ.ದೀಕ್ಷಿತ್ ಕುಮಾರ್, ಸಾಮಾಜಿಕ ಚಟುವಟಿಕೆಗಳ ಕೇಂದ್ರದ ಸಂಯೋಜಕರಾದ ಡಾ.ಶಶಿಕುಮಾರ್, ಶಿಬಿರದ ಸಂಯೋಜಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group