ಎಡೆಬಿಡದೆ ಗಡಿಯಾರ ಸತತ ದುಡಿಯುವ ಹಾಗೆ
ಸೋಮಾರಿತನಬೇಡ ಕೆಲಸಮಾಡು
ಕಿಂಚಿತ್ತು ಕಂಪಿಸದ ಕಲ್ಲುಬಂಡೆಯ ಹಾಗೆ
ಧ್ಯಾನದಲಿ ಕೂತುಬಿಡು – ಎಮ್ಮೆತಮ್ಮ
ಶಬ್ಧಾರ್ಥ
ಎಡೆಬಿಡದೆ =ನಡುವೆ ಬಿಡದೆ, ಕಿಂಚಿತ್ತು = ಕೊಂಚ
ಕಂಪಿಸು = ನಡುಗು, ಅಲುಗಾಡು
ತಾತ್ಪರ್ಯ
ಹೇಗೆ ಗಡಿಯಾರ ೨೪ ತಾಸು ಸತತ ಕೆಲಸ ಮಾಡುತ್ತದೆ
ಹಾಗೆ ಮನುಷ್ಯ ಯಾವಾಗಲು ಚಟುವಟಿಕೆಯಿಂದ ಇರಬೇಕು. ಇಲ್ಲದಿದ್ದರೆ ಅನೇಕ ಯೋಚನೆಗಳು ಕಾಡತೊಡಗುತ್ತವೆ.Idle mind is devil’s workshop (ಸೋಮಾರಿಯ ತಲೆ ದೆವ್ವದ ಕಾರ್ಖಾನೆ) ಎಂಬ ಆಂಗ್ಲ ಗಾದೆಮಾತು ಇದನ್ನೆ ಪುಷ್ಟೀಕರಿಸುತ್ತದೆ. ಸೋಮಾರಿತನ ಮನುಷ್ಯನ ಮಹಾವೈರಿ. ಮನಸ್ಸು ಕೆಲಸದಲ್ಲಿ ಮಗ್ನವಾದರೆ ಯೋಚನೆಗಳು ಕಾಡುವುದಿಲ್ಲ. ಇದನ್ನೆ ಕರ್ಮಯೋಗ ಎಂದು ಕರೆಯುತ್ತಾರೆ. ಮನುಷ್ಯ ಜೀವನ ನಡೆಸಲಿಕ್ಕೆ ಕರ್ಮವನ್ನು ಮಾಡಬೇಕು. ಜೀವನೋಪಾಯಕ್ಕಾಗಿ ಹಣ ಗಳಿಸಬೇಕು. ಆಲಸ್ಯದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ಸದಾ ಕೆಲಸ ಮಾಡುತ್ತಿರಬೇಕು. ಹೇಗೆ ಕಲ್ಲು ಬಂಡೆ ಸ್ವಲ್ಪವೂ ಅಲುಗಾಡದೆ ಕೂತಿರುತ್ತದೆಯೊ ಹಾಗೆ ಕಣ್ಣುಮುಚ್ವಿ ಯೋಚನೆಗಳನ್ನು ಬದಿಗಿಟ್ಟು ಧ್ಯಾನಕ್ಕೆ ಕೂಡಬೇಕು. ಇದರಿಂದ ಚಂಚಲತೆ ತೊಲಗಿ ಮನ ಏಕಾಗ್ರವಾಗುತ್ತದೆ. ಮನದ ಏಕಾಗ್ರತೆಯಿಂದ ಯೋಚನೆಗಳು ನಿಂತು ಬುದ್ಧಿಯಾಗಿ ಬದಲಾಗಿ ಪರಮಜ್ಞಾನ ಉಂಟಾಗುತ್ತದೆ. ಅದುವೆ ಜ್ಞಾನಯೋಗವಾಗುತ್ತದೆ. ಜೀವನ ನಡೆಸಲು ಕರ್ಮಯೋಗ ಮತ್ತು ಜ್ಞಾನಯೋಗ ಬೇಕೇಬೇಕಾಗುತ್ತವೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990