ಕೋಲಾಗು ಕುರುಡರಿಗೆ ಕುಂಟರಿಗೆ ಮುದುಕರಿಗೆ
ಹಾಲಾಗು ಶಿಶುಗಳಿಗೆ ರೋಗಿಗಳಿಗೆ
ಹುಲ್ಲಾಗು ಕಾಳಾಗು ಪಶುಪಕ್ಷಿ ಸಂಕುಲಕೆ
ಜೇನಾಗು ಸಕಲರಿಗೆ – ಎಮ್ಮೆತಮ್ಮ
ಶಬ್ಧಾರ್ಥ
ಸಂಕುಲ = ಗುಂಪು
ತಾತ್ಪರ್ಯ
ಮನುಷ್ಯನಾಗಿ ಹುಟ್ಟಿಬಂದ ಮೇಲೆ ಜೀವನವನ್ನು ಸಾರ್ಥಕ
ಮಾಡಿಕೊಳ್ಳಬೇಕಾದರೆ ಪರರ ಸೇವೆಯನ್ನು ಮಾಡಬೇಕು.
ನದಿ ಪರರ ಸೇವೆಗಾಗಿ ಹರಿಯುತ್ತದೆ. ಗಿಡ ಪರರ ಸೇವೆಗಾಗಿ
ಹಣ್ಣು ಬಿಡುತ್ತದೆ. ಹಸು ಪರರ ಸೇವೆಗಾಗಿ ಹಾಲು ಕೊಡುತ್ತದೆ.
ಹಾಗೆ ಪರರ ಸೇವೆಗಾಗಿಯೆ ಈ ದೇಹ ಧರಿಸಿ ಬಂದಿದೆ. ಕುರುಡರು ಕುಂಟರು ಮತ್ತು ಮುದುಕರಿಗೆ ಸಹಾಯ ಮಾಡು.
ಅವರ ಕೈಯಲ್ಲಿಯ ಕೋಲಿನಂತೆ ಅವರಿಗೆ ಆಸರೆಯಾಗು.
ಕುರುಡರೆಂದರೆ ಅಜ್ಞಾನಿಗಳಿಗೆ ದಾರಿದೀಪವಾಗು. ಕುಂಟರೆಂದರೆ ಸಾಧನೆಮಾಡಲಸಕ್ತರಾದವರಿಗೆ ಸರಿಯಾಗಿ
ಸಾಧನೆ ಮಾಡುವ ದಾರಿ ತೋರು. ಮುದುಕರೆಂದರೆ
ನಿಶ್ಯಕ್ತರಾದವರಿಗೆ ಶಕ್ತಿ ತುಂಬು. ಚಿಕ್ಕಮಕ್ಕಳ ಮತ್ತು
ರೋಗಿಗಳ ಶುಶ್ರೂಷೆ ಮಾಡು. ಅವರಲ್ಲಿ ಸ್ಥೈರ್ಯವನ್ನು ಮತ್ತು ಧೈರ್ಯವನ್ನು ತುಂಬು. ಸಕಲ ಪ್ರಾಣಿಗಳಿಗೆ ಲೇಸು
ಬಯಸಿ ಪಶುಗಳಿಗೆ ಹುಲ್ಲು ಪಕ್ಷಿಗಳಿಗೆ ಕಾಳು ಹಾಕು. ಎಲ್ಲರಲ್ಲಿ ದೇವರನ್ನು ಕಂಡು ದಯೆದಾಕ್ಷಿಣ್ಯ ಕರುಣೆ ಕನಿಕರ ತೋರಿ ಅವರಿಗೆ ಒಳಿತನ್ನೆ ಮಾಡಬೇಕು. ಎಲ್ಲರಿಗೆ ಬೇಕಾಗಿ ಮಧುರವಾದ ಜೇನುತುಪ್ಪವಾಗು. ಎಲ್ಲರ ಸೇವಕ ನಾನು ಎಂಬ ಭಾವ ಇರಬೇಕು. ಇದನ್ನೆ ಶರಣರು ದಾಸೋಹಂ ಎಂದರು. ದಾಸನೆಂದರೆ ಗುಲಾಮನಲ್ಲ. ಹಂ ದಾಸೋ ಎಂದರೆ ನಾನು ಸೇವಕ ಎಂದು ಅರ್ಥ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990