ಸೂರ್ಯ ಮುಳುಗಿದ ಮೇಲೆ ರಾತ್ರಿ ಕತ್ತಲೆಯನ್ನು
ಕಿಂಚಿತ್ತು ಕಳೆಯುವುದು ಪುಟ್ಟ ದೀಪ
ಸಾಗರಕೆ ಸೇತುವೆಯ ನೀ ಕಟ್ಟಲಾದೀತೆ ?
ಅಳಿಲು ಸೇವೆಯೆ ಸಾಕು – ಎಮ್ಮೆತಮ್ಮ||
ಶಬ್ಧಾರ್ಥ
ಕಿಂಚಿತ್ತು = ಕೊಂಚ. ಸಾಗರ = ಸಮುದ್ರ
ತಾತ್ಪರ್ಯ
ಸೂರ್ಯ ಮುಳುಗಿದ ಮೇಲೆ ಭೂಮಿಯ ಮೇಲೆ ಕತ್ತಲು
ಆವರಿಸುತ್ತದೆ. ಸಂಪೂರ್ಣ ರಾತ್ರಿಯ ಕತ್ತಲನ್ನು ಕಳೆಯಲು
ಸಾಧ್ಯವಿಲ್ಲ.ಆದರು ಸಣ್ಣ ದೀಪ ಕೊಂಚ ಕತ್ತಲನ್ನು ಮಾತ್ರ
ಕಳೆಯುತ್ತದೆ. ರವೀಂದ್ರನಾಥ ಠಾಗೂರು ಒಂದು ಕವನದಲ್ಲಿ ಹೀಗೆ ಬರೆಯುತ್ತಾರೆ. ನಾನು ಮುಳುಗಿದ ಮೇಲೆ ಯಾರು ನನ್ನ ಕೆಲಸವನ್ನು ವಹಿಸಿಕೊಳ್ಳುತ್ತೀರಿ ಎಂದು ಸೂರ್ಯ ಕೇಳುತ್ತಾನೆ. ಆಗ ಒಂದು ಪುಟ್ಟ ದೀಪವು ನಾನು ಸಂಪೂರ್ಣ ಕತ್ತಲು ಕಳೆಯದಿದ್ದರು ನನಗೆ ಸಾಧ್ಯವಾದಷ್ಟು ಕತ್ತಲನ್ನು ಕಳೆಯುತ್ತೇನೆ ಎಂದು ಹೇಳುತ್ತದೆ. ಹಾಗೆ ನಾವು ಜಗತ್ತಿನ ಜನಗಳೆಲ್ಲರ ಸೇವೆ ಮಾಡಲು ಸಾಧ್ಯವಾಗದಿದ್ದರು ಕೊಂಚಮಟ್ಟಿಗೆ ಸೇವೆಯನ್ನು ಮಾಡಬೇಕು. ಶ್ರೀರಾಮ ಲಂಕೆಗೆ ಸೇತುವೆ ಕಟ್ಟುವ ವೇಳೆದಲ್ಲಿ ಪುಟ್ಟ ಅಳಿಲು ದೊಡ್ಡ ಸೇತುವೆ ಕಟ್ಟಲಾಗದಿದ್ದರು ಉಸುಕಿನಲ್ಲಿ ಉರುಳಾಡಿ ಬಂದು ಸೇತುವೆಯ ಮೇಲೆ ಉದುರಿಸಿ ತನ್ನ ಭಕ್ತಿ ಸೇವೆಯನ್ನು ಮಾಡುತ್ತದೆ. ಅದನ್ನು ಮೆಚ್ಚಿದ ಶ್ರೀರಾಮ ಅದರ ಬೆನ್ನಿಗೆ ಮೂರು ಗೆರೆಗಳ ನಾಮದ ಕೊಡುಗೆಯನ್ನು ಕೊಡುತ್ತಾನೆ. ಈ ಕಥೆಯ ಸಂದೇಶವೇನೆಂದರೆ ದೊಡ್ಡವರಂತೆ ದೊಡ್ಡ ಕೆಲಸ ಮಾಡದಿದ್ದರು ಪರವಾಗಿಲ್ಲ. ನಿನ್ನ ಸಾಮರ್ಥ್ಯ ಕ್ಕೆ
ತಕ್ಕ ಸಣ್ಣ ಕೆಲಸವಾದರು ಮಾಡು. ಅದರಿಂದ ದೇವರು ಸಂಪ್ರೀತನಾಗಿ ನಿನಗೆ ಒಳಿತನ್ನು ಮಾಡುತ್ತಾನೆ ಎಂಬುದಾಗಿದೆ.
ಒಟ್ಟಾರೆ ದೊಡ್ಡದಾಗಲಿ ಸಣ್ಣದಾಗಲಿ ಸೇವೆ ಮಾಡಬೇಕು.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 9449030990